Advertisement

Mangaluru: ದಸರಾ ಸಂಭ್ರಮ: ಇಂದು ವೈಭವದ ಬೃಹತ್‌ ಶೋಭಾಯಾತ್ರೆ

02:34 AM Oct 13, 2024 | Team Udayavani |

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಚರಿಸಲಾಗುತ್ತಿರುವ “ಮಂಗಳೂರು ದಸರಾ’ ಸಂಭ್ರಮದ ಬೃಹತ್‌ ಶೋಭಾಯಾತ್ರೆ ಅ.13ರಂದು ಸಂಜೆ 4 ಗಂಟೆಗೆ ಆರಂಭವಾಗಿ ಅ.14ರ ಮುಂಜಾನೆ ಶಾರದೆಯ ಜಲಸ್ತಂಭನದ ಮೂಲಕ ಸಮಾಪನಗೊಳ್ಳಲಿದೆ.

Advertisement

ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಶ್ರೀ ಮಹಾಗಣಪತಿ, ನವದುರ್ಗೆಯರ ಹಾಗೂ ಶಾರದಾ ಮಾತೆಯ ವರ್ಣರಂಜಿತ ಬೃಹತ್‌ ದಸರಾ ಶೋಭಾಯಾತ್ರೆ, ಅತ್ಯಾಕರ್ಷಕ ವಿದ್ಯುದ್ದೀಪಾಲಂಕೃತ ಮಂಟಪದೊಂದಿಗೆ ಹೊರಡಲಿದೆ. ಶೋಭಾಯಾತ್ರೆಗೆ ಹಲವು ಸ್ತಬ್ಧಚಿತ್ರಗಳು, ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ಕಲಾತಂಡಗಳು, ಹುಲಿವೇಷ ಸಹಿತ ಇತರ ವೇಷಗಳು, ಚೆಂಡೆ ತಂಡಗಳು ಮೆರುಗು ನೀಡಲಿವೆ.

ಮಂಗಳಾದೇವಿಯಲ್ಲಿ
ಶ್ರೀ ಮಂಗಳಾದೇವಿ ಕ್ಷೇತ್ರದಲ್ಲಿ ಅ.13ರಂದು ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯ ಲಿದ್ದು, 8ರಿಂದ ಶ್ರೀ ದೇವಿಯ ವೈಭವದ ವಿಜಯದಶಮಿ ಮಹಾ ರಥೋತ್ಸವ, ರಥ ಸವಾರಿ, ಶಮೀಕಟ್ಟೆ ಪೂಜೆ, ಪಾಲಕಿ ಬಲಿ, ಚೆಂಡೆ ಸುತ್ತು, ವಿಜಯದಶಮಿ ಮಹಾಪೂಜೆ ನಡೆಯಲಿದೆ.

ನಾಳೆ ರಥಬೀದಿ ಶಾರದಾ ಮಾತೆ ವಿಸರ್ಜನೆ
ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ರಥಬೀದಿಯ ಶ್ರೀ ವೆಂಕಟರಮಣ ದೇವಾಲಯದ ಆಚಾರ್ಯ ಮಠ ವಠಾರದಲ್ಲಿರುವ ವಸಂತ ಮಂಟಪದಲ್ಲಿ ನಡೆಯುತ್ತಿರುವ 102ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ವಿಸರ್ಜನೆ ಮೆರವಣಿಗೆ ಚಿತ್ರಾಪುರ ಮಠ ಸಂಸ್ಥಾನದ ಶ್ರೀಮದ್‌ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಗಳವರ ಉಪಸ್ಥಿತಿಯಲ್ಲಿ ಅ.14ರಂದು ನಡೆಯಲಿದೆ.

ಜಿಲ್ಲೆಗೆ ಗಣ್ಯರ ದಂಡು
ಹುಲಿ ವೇಷ ಕುಣಿತ ಸ್ಪರ್ಧೆ, ಊದು ಪೂಜೆ ಸಹಿತ ಮಂಗಳೂರು ದಸರಾ ಕಣ್ತುಂಬಿಕೊಳ್ಳಲು ಊರ, ಪರವೂರಿನ ಲಕ್ಷಾಂತರ ಮಂದಿ ಸಾರ್ವಜನಿಕರು, ಗಣ್ಯರು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಶನಿವಾರ ಭಾರತ ಕ್ರಿಕೆಟ್‌ ತಂಡದ ಆಟಗಾರ ಶಿವಂ ದುಬೆ ಹಾಗೂ ನಟ ಸಂಜಯ್‌ದತ್‌ ಸಂಭ್ರಮದಲ್ಲಿ ಪಾಲ್ಗೊಂಡರು. ಅದಕ್ಕೂ ಮುನ್ನ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಾಲಿವುಡ್‌ ನಟ ಅಹನ್‌ ಶೆಟ್ಟಿ ನಟರಾದ ರಿಷಭ್‌ ಶೆಟ್ಟಿ, ರಾಜ್‌ ಬಿ.ಶೆಟ್ಟಿ, ರೂಪೇಶ್‌ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next