ಮಂಗಳೂರು: ಡ್ರೀಮ್ ಡೀಲ್ ಗ್ರೂಪ್‌ನ ಲಕ್ಕಿ ಡ್ರಾ ವೇಳೆ ವಂಚಿಸಿರುವ ವೀಡಿಯೋವೊಂದು ವೈರಲ್ ಆಗಿದೆ. ಡ್ರಾ ವೇಳೆ ಇಬ್ಬರು ಚೀಟಿಯನ್ನು ಡ್ರಾ ಮಾಡುವವರ ಕೈಗೆ ಹಾಕುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಇದು ಡ್ರಾದಲ್ಲಿ ನಡೆಯುತ್ತಿರುವ ವಂಚನೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ.
ಕೆಲಸಗಾರರ ವಜಾ
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿರುವ ಡ್ರೀಮ್ ಡೀಲ್ ಗ್ರೂಪ್‌ನ ಆಡಳಿತ ನಿರ್ದೇಶಕ ಸುಹೈಲ್ ಅವರು, ಸಂಸ್ಥೆಯ ವತಿಯಿಂದ ಪ್ರತೀ ತಿಂಗಳು ಪ್ರಮೋಷನ್‌ಗಾಗಿ ಗಿಫ್ಟ್ ನೀಡುತ್ತೇವೆ. ಸೋಮವಾರ ಲಕ್ಕಿ ಡ್ರಾ ಸಂದರ್ಭದಲ್ಲಿ ಉಬೈದ್ ಮತ್ತು ಹರ್ಷಿತ್ ಎನ್ನುವ ಕೆಲಸದವರು ಸಂಸ್ಥೆಗೆ ಮೋಸ ಮಾಡಿದ್ದಾರೆ.
ಇದು ಗಮನಕ್ಕೆ ಬಂದ ತತ್‌ಕ್ಷಣವೇ ಮರು ಡ್ರಾ ಮಾಡಿದ್ದೇವೆ. ಡ್ರಾ ಸಂದರ್ಭದಲ್ಲಿ ಯೂಟ್ಯೂಬ್ ಲೈವ್ ಇದ್ದರೂ, ಸಂಸ್ಥೆಯ ಇಬ್ಬರು ಕೆಲಸಗಾರರು ಬೇರೊಂದು ಚೀಟಿಯನ್ನು ಉದ್ದೇಶಪೂರ್ವಕವಾಗಿ ಅದರಲ್ಲಿ ಹಾಕಿದ್ದಾರೆ. ಆದರೆ ಆ ನಂಬರ್ ಎತ್ತಿ ಡ್ರಾ ಮಾಡಲಾಗಿಲ್ಲ. ಬಳಿಕ ಅವರ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದರು.
ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕಂಪೆನಿ ಮುಂದೆಯೂ ಜನರ ವಿಶ್ವಾಸಕ್ಕೆ ಬದ್ಧವಾಗಿದೆ. ಪೊಲೀಸ್ ಅಧಿಕಾರಿಗಳು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಡ್ರೀಮ್ ಡೀಲ್ ಸಂಸ್ಥೆಯು ಆರ್‌ಬಿಐ ನಿಯಮಗಳ ಅನ್ವಯ ಕಾರ್ಯನಿರ್ವಹಿಸುತ್ತಿದೆ ಎಂದು ಗ್ರೂಪ್‌ನ ಆಡಳಿತ ನಿರ್ದೇಶಕ ಸುಹೈಲ್ ಹೇಳಿದರು. ಸಂಸ್ಥೆಯ ಸಿಇಒ ಸಾಜಿದ್, ಸಲಹಾ ಮಂಡಳಿ ಸದಸ್ಯ ಕಿಶನ್ ಭಟ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.