Advertisement

Mangaluru: ವಿಪತ್ತು ನಿರ್ವಹಣೆಗೆ ಸಮನ್ವಯ ಅಗತ್ಯ: ಡಿಐಜಿಪಿ ಅಮಿತ್‌ ಸಿಂಗ್‌

03:18 AM Oct 28, 2024 | Team Udayavani |

ಮಂಗಳೂರು: ಪ್ರವಾಹ, ಭೂಕುಸಿತ, ಅಪಘಾತ ಅಥವಾ ಇತರ ಯಾವುದೇ ರೀತಿಯ ವಿಪತ್ತು ಸಂಭವಿಸುವ ಸಂದರ್ಭದಲ್ಲಿ ಪರಿಣಾಮಕಾರಿಯಾದ ರಕ್ಷಣ ಕಾರ್ಯಗಳು ನಡೆಯಬೇಕಾದರೆ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಅತೀ ಅಗತ್ಯ. ಇದಕ್ಕಾಗಿ ಎಸ್‌ಒಪಿ(ಮಾರ್ಗಸೂಚಿ) ರೂಪಿಸಬೇಕಾದ ಅಗತ್ಯವಿದೆ ಎಂದು ಪಶ್ಚಿಮ ವಲಯ ಡಿಐಜಿಪಿ ಅಮಿತ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ತುರ್ತು ಚಿಕಿತ್ಸಾ ವಿಭಾಗ, ವಿಪತ್ತು ನಿರ್ವಹಣ ಕೇಂದ್ರದ ವತಿಯಿಂದ ರವಿವಾರ ಜರಗಿದ ವಿಪತ್ತು ಔಷಧ ಕುರಿತಾದ ರಾಷ್ಟ್ರೀಯ ಆರೋಗ್ಯ ಸಮ್ಮೇಳನ “ಡೈಮೆಡ್ಕಾನ್‌ – 2024′ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಪತ್ತು ಯಾವಾಗ ಎಲ್ಲಿ ಬೇಕಾದರೂ ಸಂಭವಿಸಬಹುದು. ಅಂತಹ ಸಂದರ್ಭದಲ್ಲಿ ಪೊಲೀಸ್‌, ಆರೋಗ್ಯ ಇಲಾಖೆ, ರಕ್ಷಾ ತಂಡಗಳು ಸಹಿತ ಸಂಬಂಧಿಸಿದ ಎಲ್ಲ ತಂಡಗಳು ಕೂಡ ಸಮನ್ವಯತೆ, ಅಗತ್ಯ ಸಲಕರಣೆ, ಸೌಲಭ್ಯಗಳೊಂದಿಗೆ ಕಾರ್ಯಾಚರಣೆಗಿಳಿಯಬೇಕು.

ವಿಪತ್ತು ನಿರ್ವಹಣೆ ಕೂಡ ವೈದ್ಯಕೀಯ ಶಿಕ್ಷಣ ಪಠ್ಯದಲ್ಲಿ ಪ್ರಮುಖ ವಿಷಯವಾಗಬೇಕಾಗಿದೆ. ಅಲ್ಲದೆ ಈ ಹಿಂದೆ ದೇಶದಲ್ಲಿ ಸಂಭವಿಸಿರುವ ವಿಪತ್ತುಗಳು, ಅವುಗಳನ್ನು ನಿಭಾಯಿಸಿರುವುದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಅಧ್ಯಯನ ಮಾಡಿ ಪ್ರಸ್ತುತ ಯಾವ ರೀತಿಯ ಸಿದ್ಧತೆ, ತರಬೇತಿಯ ಅಗತ್ಯವಿದೆ, ಇನ್ನಷ್ಟು ಪರಿಣಾಮಕಾರಿ ಕಾರ್ಯಾಚರಣೆ ಹೇಗೆ ಮಾಡಬಹುದು ಎಂಬ ಬಗ್ಗೆ ಕಾರ್ಯಯೋಜನೆ ರೂಪಿಸಬೇಕಾಗಿದೆ ಎಂದು ಅಮಿತ್‌ ಸಿಂಗ್‌ ಹೇಳಿದರು.

ಸಲಕರಣೆ‌ ಕೊರತೆಯಾಗದಿರಲಿ
ರಾಜ್ಯ ಜೈವಿಕ ವಿಪತ್ತು ಮತ್ತು ಭಯೋತ್ಪಾದನೆ ರಾಜ್ಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಪ್ರದೀಪ್‌ ಕೆ.ಕೆ. ಅವರು ಮಾತನಾಡಿ, ಘಟನೆಗಳು ನಡೆದ ಕೆಲವೇ ಸಮಯದೊಳಗೆ ವಿವಿಧ ತಂಡಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಅದಕ್ಕಾಗಿ ವಾಟ್ಸ್‌ ಆ್ಯಪ್‌ ಗ್ರೂಪ್‌ನಂತಹ ವ್ಯವಸ್ಥೆಯನ್ನು ಮಾಡಿ ತ್ವರಿತ ಸಂಹವನ ನಡೆಸಬೇಕು. ಆ್ಯಂಬುಲೆನ್ಸ್‌ಗಳ ಕೊರತೆಯಾಗದಂತೆಯೂ ಗಮನಹರಿಸಬೇಕು. ಇಂತಹ ತಂಡಗಳು ವಿಪತ್ತು ನಿರ್ವಹಣೆ ತರಬೇತಿಯ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿದರು.

ಕೆಎಂಸಿ ವೈದ್ಯಕೀಯ ಕಾಲೇಜಿನ ಡೀನ್‌ ಡಾ| ಬಿ. ಉನ್ನಿಕೃಷ್ಣನ್‌ ಅಧ್ಯಕ್ಷತೆ ವಹಿಸಿದ್ದರು. ಸಿಇಡಿಎಂಎಂ ಕೋ- ಆರ್ಡಿನೇಟರ್‌ ಡಾ| ಸಂದೀಪ್‌ ಶಿವರಾಮನ್‌, ಅಮೆರಿಕನ್‌ ಹಾರ್ಟ್‌ ಅಸೋಸಿಯೇಶನ್‌ನ ರೀಜನಲ್‌ ಡೈರೆಕ್ಟರ್‌ ಡಾ| ಸಚಿನ್‌ ಮೆನನ್‌, ಸಂಘಟನ ಸಮಿತಿ ಚೇರ್ಮನ್‌ಗಳಾದ ಡಾ| ಮಧುಸೂದನ್‌ ಉಪಾಧ್ಯ, ಡಾ| ವಿವೇಕ್‌ ಗೋಪಿನಾಥನ್‌, ಕೆಎಂಸಿ ಮಂಗಳೂರಿನ ತುರ್ತು ಚಿಕಿತ್ಸಾ ವಿಭಾಗದ ಸ. ಪ್ರಾಧ್ಯಾಪಕ ಮತ್ತು ಡೈಮೆಡಾRನ್‌ -2024ರ ಸಂಘಟನ ಕಾರ್ಯದರ್ಶಿ ಡಾ| ನಿಖೀಲ್‌ ಪೌಲ್‌, ಡಾ| ಜಯರಾಜ್‌, ಡಾ| ವಿಮಲ್‌ ಕೃಷ್ಣನ್‌ ಎಸ್‌. ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next