Advertisement
ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಪಕ್ಷದ ಅಧಿಕಾರಾವಧಿ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ಚುನಾವಣೆ ಘೋಷಣೆಯಾಗುವುದು ಸಹಜ ಪ್ರಕ್ರಿಯೆ. ಆದರೆ, ಸರಕಾರದ ಕಡೆಯಿಂದ ವಾರ್ಡ್ ವಾರು ಮೀಸಲಾತಿ ಪಟ್ಟಿ ಇನ್ನೂ ಕೂಡ ಅಂತಿಮಗೊಳ್ಳದ ಕಾರಣ, ಪಾಲಿಕೆ ಚುನಾವಣೆಗೆ ದಿನಾಂಕ ಘೋಷಿಸಲು ರಾಜ್ಯ ಚುನಾವಣೆ ಆಯೋಗಕ್ಕೆ ಸಾಧ್ಯವಾಗಿಲ್ಲ. ಇನ್ನು, ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಕ್ಕೆ ಹೋಗುವುದಕ್ಕೆ ಲೋಕಸಭೆ ಚುನಾವಣೆಯೂ ಅದೇ ಅವಧಿಗೆ ಎದುರಾಗಿರುವುದು ಮುಖ್ಯ ಕಾರಣ ಎನ್ನಲಾಗಿದೆ. ಹಾಲಿ ಮೇಯರ್ ಭಾಸ್ಕರ್ ಕೆ. ಅವರ ಅಧಿಕಾರವಧಿ ಮಾ. 7ರಂದು ಪೂರ್ಣಗೊಳ್ಳುತ್ತಿಲಿದ್ದು ಮನಪಾಗೆ ಎರಡು ದಶಕಗಳ ಬಳಿಕ ಪೂರ್ಣಾವಧಿ ಆಡಳಿತಾಧಿಕಾರಿ ನೇಮಕವಾಗಲಿದ್ದಾರೆ.
Related Articles
ಮಹಾನಗರ ಪಾಲಿಕೆಯ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಐದು ಮೇಯರ್ ಗಳು ಅಧಿಕಾರ ನಡೆಸಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ನಗರದ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. 2014-15ರಲ್ಲಿ ಮೇಯರ್ ಆಗಿ ಮಹಾಬಲ ಮಾರ್ಲ 2015-16ರಲ್ಲಿ ಮೇಯರ್ ಜೆಸಿಂತಾ ಆಲ್ಫ್ರೆಡ್ , 2016-17ರಲ್ಲಿ ಮೇಯರ್ ಆಗಿ ಹರಿನಾಥ್, 2017-18ರಲ್ಲಿ ಕವಿತಾ ಸನಿಲ್, 2018-19ನೇ ಸಾಲಿನಲ್ಲಿ ಮೇಯರ್ ಆಗಿ ಭಾಸ್ಕರ್ ಕೆ. ಅಧಿಕಾರ ಸ್ವೀಕರಿಸಿದ್ದರು.
Advertisement
ಚುನಾವಣೆ ನಡೆದು 6 ವರ್ಷಮಹಾನಗರ ಪಾಲಿಕೆಗೆ 2013ರ ಮಾ. 11ರಂದು ಚುನಾವಣೆ ನಡೆದಿತ್ತು. ಆದರೆ, ಆಗ ಪಾಲಿಕೆ ಮೀಸಲು ಪಟ್ಟಿ ಪ್ರಕಟಿಸಲು ವಿಳಂಬ ಮತ್ತು ಅದೇ ಸಮಯದಲ್ಲಿ ಲೋಕಸಭೆ ಚುನಾವಣೆ ಕೂಡ ಬಂದಿತ್ತು. ಹೀಗಾಗಿ ಸುಮಾರು ಒಂದು ವರ್ಷಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿತ್ತು. 2014ರ ಮಾ. 12ರಂದು ಕಾಂಗ್ರೆಸ್ ಆಡಳಿತಾವಧಿ ಪ್ರಾರಂಭಗೊಳ್ಳುವ ಮೂಲಕ ಮೇಯರ್ ಆಯ್ಕೆ ನಡೆದಿತ್ತು. ಪಾಲಿಕೆ ಚುನಾವಣೆ 2013ರಲ್ಲೇ ನಡೆದಿದ್ದರೂ 2014ರಿಂದ ಆಡಳಿತಾವಧಿ ಪ್ರಾರಂಭವಾಗಿದ್ದ ಕಾರಣ ಈಗ ಐದು ವರ್ಷಗಳ ಅವಧಿಯ ಲೆಕ್ಕಾಚಾರದಲ್ಲಿ ಮೇಯರ್‌ಗಾದಿ ಮುಕ್ತಾಯಗೊಂಡಿದೆ. ಐದು ವರ್ಷ ಓರ್ವ ಮುಖ್ಯ ಸಚೇತಕ
2014ರಿಂದ 2019ರವರೆಗಿನ ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಮನಪಾದ ಮುಖ್ಯ ಸಚೇತಕರಾಗಿ ಓರ್ವ ಕಾರ್ಯ ನಿರ್ವಹಿಸಿರುವುದು ವಿಶೇಷ. ಮನಪಾ ಸದಸ್ಯ ಶಶಿಧರ್ ಹೆಗ್ಡೆ ಅವರು ಪಕ್ಷ, ವಿಪಕ್ಷದ ಎಲ್ಲ ಸದಸ್ಯರ ವಿಶ್ವಾಸ ಗಳಿಸಿ ಮನಪಾ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗಿದ್ದರು. ಒಮ್ಮೆ ಬಿಜೆಪಿ ಉಪ ಮೇಯರ್
2016-17ರ ಮೇಯರ್ ಹರಿನಾಥ್ ಅವರ ಆಡಳಿತಾವಧಿಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಅದರಲ್ಲಿ ಅರ್ಹ ಮೀಸಲು ಸದಸ್ಯರಿಲ್ಲದ ಕಾರಣ ಬಿಜೆಪಿಯ ಸುಮಿತ್ರಾ ಕರಿಯ ಅವರಿಗೆ ಉಪಮೇಯರ್ ಸ್ಥಾನ ಒಲಿದಿತ್ತು. ಪಾಲಿಕೆಗೆ ಆಡಳಿತಾಧಿಕಾರಿಗಳು
1988ರಿಂದ 2014ರ ವರೆಗೆ 13 ಮಂದಿ ಆಡಳಿತಾಧಿಕಾರಿಗಳು ಮನಪಾಗೆ ನೇಮಕಗೊಂಡಿದ್ದಾರೆ. ಮೇಯರ್ ಆಯ್ಕೆ ಗೊಂದಲ ಸೇರಿದಂತೆ ಇನ್ನಿತರ ಸಮಸ್ಯೆಗಳು ಸೃಷ್ಟಿಯಾದ ಸಂದರ್ಭಗಳಲ್ಲಿ ಆಡಳಿತಾಧಿಕಾರಿಗಳ ನೇಮಕ ಮಾಡಲಾಗುತ್ತದೆ. ಈ ವರೆಗಿನ ಪಾಲಿಕೆಗೆ ಆಡಳಿತಾಧಿಕಾರಿಗಳಾಗಿ ನೇಮಕಗೊಂಡವರ ವಿವರ ಹೀಗಿದೆ- 1988-1989ರ ವರೆಗೆ ಸುಭಾಶ್ ಚಂದ್ರ ಕುಂಟಿಯಾ, 1989-1990ರ ವರೆಗೆ ರಂಜಿನಿ ಶ್ರೀಕುಮಾರ್, 1990 ಎಪ್ರಿಲ್ 2ರಿಂದ 1990ರ ಮೇ 30ರ ವರೆಗೆ ಕೆ.ಪಿ. ಕೃಷ್ಣನ್, 1995ರ ಮೇ 3ರಿಂದ 1995 ಮೇ 20ರ ವರೆಗೆ ಶಾಲಿನಿ ರಜನೀಶ್ ಗೋಯಲ್, 1995ರಿಂದ 1996ರ ವರೆಗೆ ಭರತ್‌ಲಾಲ್ ಮೀನ, 1996ರಿಂದ 1997ರ ವರೆಗೆ ಬಿ.ಎಚ್. ಅನಿಲ್ ಕುಮಾರ್, 2002 ಮೇ 23ರಿಂದ 2002 ಜೂನ್ 17ರವರೆಗೆ ಎ.ಕೆ. ಮೊನ್ನಪ್ಪ, 2007ರಿಂದ 2008ರ ವರೆಗೆ ಮಹೇಶ್ವರ್ ರಾವ್, 2013 ಫೆ. 20ರಿಂದ ಮಾ. 28 2013ರ ವರೆಗೆ ಎಸ್. ಪ್ರಕಾಶ್, 2013 ಮಾ.28ರಿಂದ ಮೇ 14 2013ರ ವರೆಗೆ ಹರ್ಷಗುಪ್ತ, 2013 ಮೇ 14ರಿಂದ 2013 ಡಿಸೆಂಬರ್ 16ರ ವರೆಗೆ ಎಸ್ ಪ್ರಕಾಶ್, 2013 ಡಿಸೆಂಬರ್ 16ರಿಂದ 2013 ಡಿಸೆಂಬರ್ 26ರ ವರೆಗೆ ತುಳಸಿ ಮದ್ದಿನೇನಿ, 2013 ಡಿಸೆಂಬರ್ 26ರಿಂದ 2014 ಮಾ.13ರ ವರೆಗೆ ಎ.ಬಿ. ಇಬ್ರಾಹಿಂ ಅವರು ಮನಪಾ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಸಲಹಾ ಸಮಿತಿ ರಚನೆ ?
ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಅಧಿಕಾರವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಮುಂದೆ ಮನಪಾ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಆಡಳಿತಾಧಿಕಾರಿಯವರೇ ನಡೆಸಲಿದ್ದು, ಅವರಿಗೆ ಸಲಹೆ ಸೂಚನೆಗಳನ್ನು ನೀಡುವ ಸಲುವಾಗಿ ಪ್ರತ್ಯೇಕ ಸಲಹಾ ಸಮಿತಿ ರಚಿಸುವ ಸಾಧ್ಯತೆ ಇದೆ. ಈ ಸಮಿತಿಗೆ ಸ್ವಯಂ ಸೇವಾ ಸಂಸ್ಥೆಗಳು, ಸಮಾಜ ಸೇವಕರು ಸೇರಿದಂತೆ ವಿವಿಧ ಕ್ಷೇತ್ರಗಳ ಮಂದಿಯನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಈ ಸಮಿತಿಯಲ್ಲಿ ಕನಿಷ್ಠ 15 ಸದಸ್ಯರು ಇರಬೇಕಾಗಿದ್ದು, ಗರಿಷ್ಠ 25 ಸದಸ್ಯರು ಕೂಡ ಇರಬಹುದು. ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆ
ರಾಜ್ಯ ಸರಕಾರ ಸಕಾಲದಲ್ಲಿ ಪಾಲಿಕೆ ಮೀಸಲಾತಿ ಪ್ರಕಟಿಸದ ಪರಿಣಾಮ ಮನಪಾಗೆ ಆಡಳಿತಾಧಿಕಾರಿ ನೇಮಕ ಅನಿವಾರ್ಯವಾಗಲಿದೆ. ಇದರಿಂದ ಮನಪಾ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಎಪ್ರಿಲ್-ಮೇ ಬೇಸಗೆ ಕಾಲವಾದ್ದರಿಂದ ನೀರಿನ ಸಮಸ್ಯೆ, ಮಳೆಗಾಲದ ಪೂರ್ವ ತಯಾರಿ ಎಲ್ಲವೂ ಮಂದಗತಿಯಲ್ಲಿ ಸಾಗಿದರೆ ಜನಸಾಮಾನ್ಯರಿಗೆ ತೊಂದರೆಯಾಗಲಿದೆ. ಆಡಳಿತಾಧಿಕಾರಿ ನೇಮಕ
ಮೀಸಲು ಪಟ್ಟಿ ಪ್ರಕಟವಾಗದ ಹಿನ್ನೆಲೆಯಲ್ಲಿ ಸದ್ಯ ಚುನಾವಣೆ ಘೋಷಣೆಯಾಗುವುದಿಲ್ಲ. ಮೇಯರ್, ಹಾಲಿ ಸದಸ್ಯರ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಮಾ.8ರಿಂದ ಜಿಲ್ಲಾಧಿಕಾರಿ ಅವರು ಆಡಳಿತಾಧಿಕಾರಿಯಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ.
– ಮಹಮ್ಮದ್
ನಝೀರ್,ಆಯುಕ್ತರು, ಮನಪಾ ಪ್ರಜ್ಞಾ ಶೆಟ್ಟಿ