Advertisement

ಅವ್ಯವಸ್ಥೆಯಲ್ಲಿರುವ ಉಪ್ಪಿನಂಗಡಿ ನಾಡ ಕಚೇರಿಗೆ ಡಿಸಿ ಭೇಟಿ

02:55 AM Jun 23, 2018 | Team Udayavani |

ಉಪ್ಪಿನಂಗಡಿ: ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುವ ಇಲ್ಲಿನ ಹೋಬಳಿ ಮಟ್ಟದ ನಾಡ ಕಚೆೇರಿಯನ್ನು ಸ್ಥಳಾಂತರಿಸಲು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಆದೇಶಿಸಿದರು. ಜಿಲ್ಲಾಧಿಕಾರಿ ಅವರು ತಾಲೂಕಿನ ಗಡಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 75 ಕಾಂಕ್ರೀಟು ಕಾಮಗಾರಿ ವೀಕ್ಷಣೆಗೆ ಆಗಮಿಸಿದ ಸಂದರ್ಭ ನಾಡಕಚೆೇರಿಯ ದುಃಸ್ಥಿತಿಯನ್ನು ತಾಲೂಕು ದಂಡಾಧಿಕಾರಿ ಅನಂತಶಂಕರ ಬಿ. ಅವರು ಡಿಸಿ ಬಳಿ ವಿವರಿಸಿದರು. ಇದಕ್ಕೆ ತತ್‌ ಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ, ಶಿರಾಡಿ ಘಾಟಿ ರಸ್ತೆ ಕಾಮಗಾರಿ ವೀಕ್ಷಿಸಿ ಬಳಿಕ ಪರಿಶೀಲನೆ ನಡೆಸುವ ಭರವಸೆ ನೀಡಿದರು. ಶಿರಾಡಿ ಘಾಟಿ ಕಾಮಗಾರಿ ವೀಕ್ಷಿಸಿ ವಾಪಸ್‌ ಆಗುವ ಸಂದರ್ಭ ಅವರು ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕು ದಂಡಾಧಿಕಾರಿ ಅನಂತಶಂಕರ ಬಿ. ಅವರು, ಶಿಥಿಲಗೊಂಡ ಕಟ್ಟಡದ ಒಳಗೆ ಮಳೆ ನೀರು ಸೋರಿಕೆಯಾಗುತ್ತಿದೆ. ಇಲ್ಲಿ ಮೂಲ ಸೌಕರ್ಯಗಳ ಹಾಗೂ ಆಧುನಿಕ ಉಪಕರಣಗಳ ಕೊರತೆ ಇದೆ. ಈ ಕೆಂದ್ರಕ್ಕೆ ಸೂಕ್ತವಾದ ಭದ್ರತೆ ಇಲ್ಲದಿರುವ ಕುರಿತು ಡಿಸಿ ಅವರ ಗಮನ ಸೆಳೆದರು. ಇದಕ್ಕೆ ತತ್‌ಕ್ಷಣ ಸ್ಪಂದಿಸಿದ ಡಿಸಿ, ಕಟ್ಟಡವನ್ನು ಮಿನಿವಿಧಾನ ಸೌಧಕ್ಕೆ ಸ್ಥಳಾಂತರಿಸಲು ಸೂಚಿಸಿದರು.

Advertisement

ಸರಕಾರಕ್ಕೆ ಮನವಿ ಸಲ್ಲಿಸಲು ಸೂಚನೆ
ನೂತನ ಕಟ್ಟಡ ಮಂಜೂರಾತಿಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಮನವಿ ರೂಪದಲ್ಲಿ ಸಲ್ಲಿಸುವಂತೆ ಸೂಚಿಸಿದರು. ತತ್‌ ಕ್ಷಣವೇ ಪ್ರಸ್ತುತ ಕಚೆೇರಿಯನ್ನು ಸ್ಥಳಾಂತರಕ್ಕೆ ಮೌಖೀಕ ಒಪ್ಪಿಗೆ ನೀಡಿದಲ್ಲದೆ ಸೂಕ್ತವಾದ ನೂತನ ಮಿನಿ ವಿಧಾನಸೌಧದಂತ ಕಟ್ಟಡದಲ್ಲಿ ಸ್ಥಳಾವಕಾಶ ಕಲ್ಪಿಸಲು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲು ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೆೇರಿಯಿಂದಲೂ ತಾತ್ಕಾಲಿಕ ವ್ಯವಸ್ಥೆಗೆ ಪತ್ರ ಮುಖೇನ ಮಿನಿವಿಧಾನ ಸೌಧದ ಆಡಳಿತ ವಿಭಾಗಕ್ಕೆ ತಿಳಿಸುವುದಾಗಿ ಹೇಳಿದರು. ಡಿಸಿ ಭೇಟಿ ಸಂದರ್ಭ ಉಪತಾಲೂಕು ದಂಡಾಧಿಕಾರಿ ಸದಾಶಿವ ನ್ಯಾಕ್‌, ಪ್ರಭಾರ ಕಂದಾಯ ನಿರೀಕ್ಷಕರಾದ ರಮಾನಂದ ಚಕ್ಕಡಿ, ಗ್ರಾಮ ಕರಣಿಕರಾದ ಚಂದ್ರ ನಾಯ್ಕ ಉಪಸ್ಥಿತರಿದ್ದರು.

ಸುದಿನ ವರದಿ ಪ್ರಕಟಿಸಿತ್ತು
ಕಳೆದ 15 ದಿನಗಳ ಹಿಂದೆ ಸುದಿನ ಈ ಕಟ್ಟಡದ ಅವ್ಯವಸ್ಥೆ ಹಾಗೂ ಕರ್ತವ್ಯ ನಿರ್ವಹಿಸಲು ಇದ್ದ ತೊಡಕುಗಳ ಕುರಿತಾದ ಸಚಿತ್ರ ವರದಿಯನ್ನು ಪ್ರಕಟಿಸಿ, ಸಂಬಂಧಪಟ್ಟವರ ಗಮನ ಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next