ಮಂಗಳೂರು: ಗುತ್ತಿಗೆದಾರರಿಂದ ಲಂಚ ಸ್ವೀಕರಿಸಿದ ಆರೋಪದಲ್ಲಿ ಮಂಗಳೂರಿನ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ರೊನಾಲ್ಡ್ ಲೋಬೋನನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಕ್ಲಾಸ್-2 ದರ್ಜೆಯ ಗುತ್ತಿಗೆದಾರರಾಗಿರುವ ಪ್ರಭಾಕರ ನಾಯ್ಕ ಇಲಾಖೆಯ ಅಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಮೀಸಲಾಗಿರಿಸಿದ 25 ಲ.ರೂ. ವೆಚ್ಚದ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಮಲಂಪಯ್ಯ ಪರಿಶಿಷ್ಟ ಪಂಗಡದ ಕಾಲನಿಯ ರಸ್ತೆ ಕಾಮಗಾರಿ ಮತ್ತು 20 ಲ.ರೂ. ಮೊತ್ತದ ಬೆಳ್ತಂಗಡಿ ತಾಲೂಕು ಕರಿಮಣೇಲು ಗ್ರಾಮದ ಕೈರೋಳಿಯ ಪರಿಶಿಷ್ಟ ಜಾತಿ ಕಾಲನಿಯ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ್ದರು.
ಕಾಮಗಾರಿ ಮುಗಿದ ಅನಂತರ ಸೈಟ್‌ನ ಮೆಟೀರಿಯಲ್ ಪರಿಶೀಲನೆ ಮಾಡಿ ವರದಿ ನೀಡಲು ಮಂಗಳೂರು ಲೋಕೋಪಯೋಗಿ ಇಲಾಖೆಯ ಗುಣ ಮತ್ತು ಭರವಸೆ ವಿಭಾಗಕ್ಕೆ ಕಡತ ಬಂದಿತ್ತು. ಪ್ರಭಾಕರ ನಾಯ್ಕ ಅವರು ಅ.11ರಂದು ಆ ವಿಭಾಗಕ್ಕೆ ಹೋಗಿ ಅಲ್ಲಿನ ಕಿರಿಯ ಎಂಜಿನಿಯರ್ ರೊನಾಲ್ಡ್ ಲೋಬೋ ಅವರಲ್ಲಿ ಮಾತನಾಡಿದಾಗ ಅವರು, ಕಡತ ಬಂದಿದ್ದು ಮೊತ್ತ ಕೊಟ್ಟು ಹೋಗುವಂತೆ ಹೇಳಿ ಲಂಚದ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದೆ ಪ್ರಭಾಕರ ಅವರು ವಾಪಸ್ ಬಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಅ. 16ರಂದು ಎಂಜಿನಿಯರ್ ಕಚೇರಿಗೆ ಹೋಗಿ ಮಾತನಾಡಿದಾಗ ವರದಿ ನೀಡಲು 22,000 ರೂ. ಲಂಚದ ಬೇಡಿಕೆ ಇಟ್ಟಿದ್ದರು. ಸ್ವಲ್ಪ ಕಡಿಮೆ ಮಾಡುವಂತೆ ಹೇಳಿದಾಗ 20,000 ರೂ. ನೀಡುವಂತೆ ಹೇಳಿದ್ದರು. ಲಂಚ ಸ್ವೀಕರಿಸುವಾಗ ಪೊಲೀಸರು ದಸ್ತಗಿರಿ ಮಾಡಿ ಲಂಚದ ಹಣ ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ ಲೋಕಾಯುಕ್ತ ಮಂಗಳೂರಿನ ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯ ಉಪಾಧೀಕ್ಷಕರಾದ ಕಲಾವತಿ ಕೆ, ಚೆಲುವರಾಜು ಬಿ., ಪೊಲೀಸ್ ನಿರೀಕ್ಷಕ ಅಮಾನುಲ್ಲಾ ಎ., ಸುರೇಶ್ ಕುಮಾರ್ ಪಿ. ಪಾಲ್ಗೊಂಡಿದ್ದರು.