Advertisement
ಸಂಕಷ್ಟದಿಂದ ಮುಕ್ತಿಕೊಡು ಎಂದು ಬೇಡಿಕೊಂಡಾಗ ಹೇಳಿದ ಹರಕೆಯಾಗಿ, ಭಕ್ತಿಯ ಸಮರ್ಪಣೆಯಾಗಿ, ದೇವಿಯ ಸೇವೆಯಾಗಿ, ನಂಬಿಕೆಯಾಗಿ ಹುಟ್ಟಿಕೊಂಡದ್ದು ಹುಲಿ ವೇಷ. ಇಂದು ಹತ್ತಾರು ತಂಡಗಳಾಗಿ ಅದ್ಧೂರಿತನ, ವಿಜೃಂಭಣೆಯೊಂದಿಗೆ ತುಳುನಾಡಿನ ಹೆಮ್ಮೆಯ ಸಾಂಸ್ಕೃತಿಕ ಸೊಗಡಾಗಿ ಬದಲಾಗಿದೆ. ಇಲ್ಲಿ ಸುದೀರ್ಘ ವರ್ಷದಿಂದ ಹುಲಿ ವೇಷ ಆಯೋಜಿಸುತ್ತಿರುವ ಹಲವು ಸಂಘಟನೆಗಳಿವೆ. ಹುಲಿ ವೇಷ ಹಾಕುವ ಸುಮಾರು 50ಕ್ಕೂ ಅಧಿಕ ಪ್ರಸಿದ್ಧ ತಂಡಗಳು ಮಂಗಳೂರು ಆಸುಪಾಸಿನಲ್ಲೇ ಇದೆ. ತಮ್ಮ ಪ್ರದರ್ಶನದ ಮೂಲಕವೇ ಒಂದಕ್ಕೊಂದು ಮೀರಿಸುವ ಹುಲಿ ಕುಣಿತಗಳಿವೆ.
ಹುಲಿ ವೇಷಧಾರಿಯ ವಿಭಿನ್ನ ಸಾಹಸ ಪ್ರದರ್ಶನವೇ ಈಗಿನ ವಿಶೇಷ. ತರಹೇವಾರಿ ಕುಣಿಯುವ ಒಂದೊಂದು ಹೆಜ್ಜೆಯ ಹಿಂದೆ ಹುಲಿ ವೇಷಧಾರಿಯ ಶ್ರಮವಿದೆ, ತರಬೇತಿಯೂ ಇದೆ. ‘ತಾಲೀಮು’ ಅನುಭವ ಇದ್ದವರಿಗೆ ಇದು ಲೀಲಾಜಾಲವಾಗಿದ್ದರೆ, ಡ್ಯಾನ್ಸ್ ಪ್ರವೀಣರು ಇತ್ತೀಚೆಗೆ ಹೊಸ ಲುಕ್ ನೀಡಿರುವುದು ಮತ್ತೂಂದು ವಿಶೇಷ. ಸಂಪ್ರದಾಯ ಪ್ರಕಾರ ‘ತೇಲ್ ಬಗ್ಗುನಿ’, ‘ಮಂಕಿ ಡೈವ್’, ಕೈಯಲ್ಲಿ ನಡೆಯುವುದು, ಅಕ್ಕಿ ಮುಡಿ ಎತ್ತುವುದು ಸಹಿತ ನಾನಾ ಸಾಹಸ ಪ್ರದರ್ಶನವಿದೆ.
Related Articles
Advertisement
1. ಮಂಗಳಾದೇವಿ ದೇವಸ್ಥಾನದ ಬಳಿಯ ಒಂದು ಮಗುವಿಗೆ ವರ್ಷ ತುಂಬಿದರೂ ನಡೆಯಲು ಆಗುತ್ತಿರಲಿಲ್ಲ. ಆಗ ಆತನ ತಾಯಿ ಮಂಗಳಾದೇವಿಯಲ್ಲಿ ಪ್ರಾರ್ಥಿಸಿ, ಮಗ ನಡೆಯುವಂತಾದರೆ ಮುಂದಿನ ವರ್ಷ ಹುಲಿ ವೇಷ ಹಾಕಿಸುತ್ತೇನೆ ಎಂದು ಹರಕೆ ಹೇಳಿದ್ದಳಂತೆ. ಅದು ಈಡೇರಿದ್ದರಿಂದ ಹುಲಿ ವೇಷ ಹಾಕಿಸಿದ್ದಾಳೆ (ಈ ನಂಬಿಕೆ ಈಗಲೂ ಇದ್ದು ಹರಕೆ ಹುಲಿ ಸೇವೆಯೇ ಸಾಕಷ್ಟಿರುತ್ತದೆ).
2. ಮಂಗಳಾದೇವಿ ಭಾಗದಲ್ಲಿ ಹಿಂದೆ ಹುಲಿಗಳ ಕಾಟ ಜೋರಾಗಿತ್ತು. ಆಗ ಊರಿನ ಜನರು ಸೇರಿ ಹುಲಿ ದಾಳಿ ನಿಂತರೆ ಹರಕೆ ರೂಪದಲ್ಲಿ ಹುಲಿ ವೇಷ ಹಾಕುತ್ತೇವೆ ಎಂದು ಹೇಳಿಕೊಂಡರು. ಹುಲಿ ದಾಳಿ ನಿಂತಿತು, ಹುಲಿ ವೇಷ ಆರಂಭಗೊಂಡಿತು.
3.ದೇವಿಯ ವಾಹನ ಹುಲಿ. ಈ ಕಾರಣಕ್ಕಾಗಿ ದೇವಿಯ ಪ್ರೀತ್ಯರ್ಥ ಹುಲಿಗಳ ಕುಣಿತದ ಕಲ್ಪನೆ ಹುಟ್ಟಿಕೊಂಡಿದೆ.
ಕುಡ್ಲದಲ್ಲಿ ‘ಪಿಲಿ ನಲಿಕೆ’ದ ‘ಪರ್ಬ’ಕಳೆದ ಕೆಲವು ವರ್ಷಗಳಲ್ಲಿ ‘ಪಿಲಿ ವೇಷ’ದ ಅಬ್ಬರ ಇನ್ನೂ ಜೋರಾಗಿದೆ. ಕೇವಲ ಸಾಂಸ್ಕೃತಿಕ, ಧಾರ್ಮಿಕ ಆಚರಣೆಯಾಗಿ ಮಾತ್ರವಲ್ಲದೆ ಸ್ಪರ್ಧೆಯಾಗಿಯೂ ಗಮನ ಸೆಳೆದಿದೆ. ಮಂಗಳೂರಿನ ಪಿಲಿನಲಿಕೆ ಪ್ರತಿಷ್ಠಾನ ವತಿಯಿಂದ 9ನೇ ವರ್ಷದ ‘ಪಿಲಿ ನಲಿಕೆ’ ಅ. 12ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ 3ನೇ ವರ್ಷದ ‘ಪಿಲಿ ಪರ್ಬ’ ಅ. 11ರಂದು ಕೇಂದ್ರ ಮೈದಾನದಲ್ಲಿ ನಡೆಯಲಿದೆ. ವಿಜಯ ಸಾಮ್ರಾಟ್ ಪುತ್ತೂರು ಆಶ್ರಯದಲ್ಲಿ ‘ಪಿಲಿ ಗೊಬ್ಬು’ ಪುತ್ತೂರು ದೇವಳದಲ್ಲಿ ನಡೆಯಲಿದೆ. ಪಿಲಿ ನಲಿಕೆಯಲ್ಲಿ ಗೆದ್ದ ತಂಡಕ್ಕೆ ಬಹ್ರೈನ್‌ನಲ್ಲಿ ಡಿ. 16ರಂದು ನಡೆಯಲಿರುವ ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸುವ ಅಪೂರ್ವ ಅವಕಾಶವಿದೆ. ಪಿಲಿ ನಲಿಕೆ ಸ್ಪರ್ಧೆಗೆ ಆಯ್ಕೆಯಾದ ಪ್ರತೀ ತಂಡದಲ್ಲಿಯೂ ಓರ್ವ ಬಡ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ವಿದ್ಯಾನಿಧಿ ನೀಡುವ ಯೋಜನೆಯಿದೆ. -ದಿನೇಶ್ ಇರಾ