Advertisement

Mangaluru ಭ್ರಷ್ಟರ ವಿರುದ್ಧ ದೂರು ನೀಡಲು ಮುಂದೆ ಬನ್ನಿ

11:44 PM Oct 22, 2023 | Team Udayavani |

ಮಂಗಳೂರು: ಭ್ರಷ್ಟಾಚಾರವನ್ನು ತಡೆಯಬೇಕಾದರೆ ಸಾರ್ವಜನಿಕರ ಪಾತ್ರವೂ ಮುಖ್ಯ. ಕೇವಲ ಆರೋಪಗಳನ್ನು ಮಾಡಿದರೆ ಸಾಲದು, ಲಂಚ ಕೇಳುವವರ ವಿರುದ್ಧ ಲಿಖೀತವಾಗಿ ದೂರು ಸಲ್ಲಿಸಬೇಕು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯವರು ಲೋಕಾಯುಕ್ತಕ್ಕೆ ದೂರು ನೀಡಲು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ. ಈ ಮನೋಭಾವನೆ ಬದಲಾಯಿಸಿಕೊಳ್ಳುವುದು ಅಗತ್ಯ ಎಂದು ಉಭಯ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿರುವ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್‌ ಅಧೀಕ್ಷಕ ಸಿ.ಎ. ಸೈಮನ್‌ “ಉದಯವಾಣಿ’ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

Advertisement

ಯಾರ ವಿರುದ್ಧ ದೂರು ನೀಡಬಹುದು?
ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ಲಂಚ ಪಡೆಯುವುದು, ಲಂಚಕ್ಕೆ ಬೇಡಿಕೆ, ಕಾರಣವಿಲ್ಲದೆ ವಿಳಂಬ ಮೊದಲಾದ ಸಂದರ್ಭಗಳಲ್ಲಿ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ದೂರು ನೀಡಬಹುದು. ಹೊರಗುತ್ತಿಗೆ ನೌಕರರು/ಅಧಿಕಾರಿಗಳೂ ಲೋಕಾಯುಕ್ತ ವ್ಯಾಪ್ತಿಗೆ ಬರುತ್ತಾರೆ. ಮಾತ್ರವಲ್ಲದೆ ಮುಖ್ಯಮಂತ್ರಿಯಿಂದ ಹಿಡಿದು ಸರಕಾರದಿಂದ ನಿರ್ದಿಷ್ಟ ಗೌರವಧನ ಪಡೆಯುವ ಇತರ ಜನಪ್ರತಿನಿಧಿಗಳ ವಿರುದ್ಧವೂ ದೂರು ದಾಖಲಿಸಲು ಅವಕಾಶವಿದೆ.

ಕರಾವಳಿ ಭಾಗದಲ್ಲಿಯೂ ಲಂಚದ ಆರೋಪಗಳು ಕೇಳಿಬರುತ್ತಿವೆಯಲ್ಲ?
ಸರಕಾರದ ಕೆಲವೊಂದು ಇಲಾಖೆಗಳಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಆದರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ., ಉಡುಪಿ ಜಿಲ್ಲೆಯ ಜನತೆ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಿಸುವುದು ತೀರಾ ಕಡಿಮೆ. ಇಲ್ಲಿ ವರ್ಷದಲ್ಲಿ ಎರಡಂಕೆಗಿಂತಲೂ ಕಡಿಮೆ ದೂರುಗಳು ದಾಖಲಾಗುತ್ತಿವೆ.

ಸ್ವಯಂಪ್ರೇರಿತ ಪ್ರಕರಣ ದಾಖಲು ಸಾಧ್ಯವಿಲ್ಲವೆ?
ಸರಕಾರಿ ನೌಕರರು, ಅಧಿಕಾರಿಗಳು ಆದಾಯಕ್ಕಿಂತ ಅಧಿಕ ಸಂಪತ್ತು ಹೊಂದಿದ ಸಂದರ್ಭಗಳಲ್ಲಿ ಸ್ವಯಂಪ್ರೇರಿತವಾಗಿ (ಸುಮೊಟೋ) ಪ್ರಕರಣ ದಾಖಲಿಸಿ ಕೊಳ್ಳಲಾಗುತ್ತದೆ. ಉಳಿದಂತೆ ಸಾರ್ವಜನಿಕರು ನಿರ್ದಿಷ್ಟ ದೂರು ದಾಖಲಿಸಬೇಕು. ಯಾರಾದರೂ ಲಂಚಕ್ಕೆ ಬೇಡಿಕೆ ಇಟ್ಟರೆ ಆ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ದೂರುದಾರರಿಗೆ ಸೂಕ್ತ ಮಾರ್ಗದರ್ಶನ ನೀಡಿ ಭ್ರಷ್ಟರನ್ನು ರೆಡ್‌ಹ್ಯಾಂಡ್‌ ಆಗಿ ಬಂಧಿಸಲು ಯೋಜನೆ ರೂಪಿಸುವುದಕ್ಕೆ ಸಾಧ್ಯವಾಗುತ್ತದೆ. ದೂರಿನ ಎಲ್ಲ ಮಾಹಿತಿಗಳನ್ನು ಗೌಪ್ಯವಾಗಿಟ್ಟು ಕಾರ್ಯಾಚರಣೆ ನಡೆಸಲಾಗುತ್ತದೆ. ದೂರು ದಾಖಲಿಸದ ಹೊರತು ಕೇವಲ ಊಹಾಪೋಹಗಳ ಆಧಾರದಲ್ಲಿ ತನಿಖೆ ನಡೆಸಲಾಗದು. ಕೆಲವರು ತಮ್ಮ ಕೆಲಸ ಮಾಡಿಸಿಕೊಳ್ಳಲು ಲಂಚ ನೀಡುತ್ತಾರೆ. ಅನಂತರ ಅಧಿಕಾರಿ/ಸಿಬಂದಿ ಅದನ್ನೇ ಅಭ್ಯಾಸವನ್ನಾಗಿ ಮಾಡಿಕೊಂಡು ಉಳಿದವರನ್ನು ಕೂಡ ಲಂಚಕ್ಕಾಗಿ ಪೀಡಿಸುತ್ತಾರೆ. ಹಾಗಾಗಿ ಒಬ್ಬರು ಲಂಚವನ್ನು ಸಹಿಸಿಕೊಂಡರೆ ಅದರ ದುಷ್ಪರಿಣಾಮ ಇಡೀ ವ್ಯವಸ್ಥೆಯ ಮೇಲೆ ಉಂಟಾಗುತ್ತದೆ. ಲಂಚ ತೆಗೆದುಕೊಳ್ಳುವುದು ಮಾತ್ರವಲ್ಲದೆ, ಲಂಚ ಕೊಡುವುದು ಕೂಡ ತಪ್ಪು.

ಲೋಕಾಯುಕ್ತದ ಬಲ ಕಡಿಮೆಯಾಗಿದೆಯೇ?
ಇಲ್ಲ, ಬಲಯುತವಾಗಿದೆ. ಹಲವು ಪ್ರಕರಣಗಳಲ್ಲಿ ದಾಳಿ ನಡೆಸಿ ಭ್ರಷ್ಟರನ್ನು ಬಂಧಿಸಲಾಗಿದೆ. ಇತ್ತೀಚೆಗೆ ಲೋಕಾಯುಕ್ತ ಜನಸಂಪರ್ಕ ಸಭೆಗಳಲ್ಲಿಯೇ ಹಲವು ಪ್ರಕರಣಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಇತ್ತೀಚೆಗೆ ನಿವೃತ್ತ ಶಿಕ್ಷಕಿಯ ಪಿಂಚಣಿ ದಾಖಲೆಗಳಿಗೆ ಸಹಿ ಮಾಡಲು 5 ಲ.ರೂ. ಲಂಚ ಸ್ವೀಕರಿಸುತ್ತಿದ್ದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕಿಯನ್ನು, ಎನ್‌ಒಸಿಗಾಗಿ ಹಣ ಸ್ವೀಕರಿಸುತ್ತಿದ್ದ ಗ್ರಾಮಕರಣಿಕನನ್ನು, ಗುತ್ತಿಗೆ ದಾರನಿಂದ ಲಂಚ ಸ್ವೀಕರಿಸಿದ ಲೋಕೋಪಯೋಗಿ ಎಂಜಿನಿಯರ್‌, ಬಿಲ್‌ ಪಾವತಿಗೆ ಲಂಚ ಸ್ವೀಕರಿಸಿದ ಉಪ ಕೃಷಿ ನಿರ್ದೇಶಕಿಯನ್ನು ಬಂಧಿಸಲಾಗಿದೆ.

Advertisement

ಕರಾವಳಿಯಲ್ಲಿ ಹೆಚ್ಚು ದೂರುಗಳು ಯಾವುದಕ್ಕೆ ಸಂಬಂಧಿಸಿದ್ದು?
ಗ್ರಾಮೀಣ ಭಾಗದಿಂದ ಹೆಚ್ಚು ದೂರುಗಳು ಬರುತ್ತಿವೆ. ಪಿಡಿಒ, ವಿಎಗಳ ವಿರುದ್ಧ ಕೆಲವು ದೂರುಗಳು ಬಂದಿವೆ.

ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ..
ಸಾರ್ವಜನಿಕರು ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ನೌಕರರು, ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ಕೆಲಸ ಮಾಡಿಕೊಳ್ಳುವುದು ಉತ್ತಮ. ಅಧಿಕಾರಿ ಅಥವಾ ನೌಕರರು ಲಂಚ ಸ್ವೀಕರಿಸುವಲ್ಲಿ ಮಧ್ಯವರ್ತಿಗಳು ಸಹಕರಿಸುತ್ತಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುವ ಅಧಿಕಾರವಿದೆ.

ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದು ಹೇಗೆ?
ಎರಡು ಜಿಲ್ಲೆಗಳಲ್ಲಿಯೂ ಲೋಕಾಯುಕ್ತ ಸಂಸ್ಥೆಯ ಕಚೇರಿಗಳಿವೆ. ಅಲ್ಲಿಗೆ ತೆರಳಿ ನಿರ್ದಿಷ್ಟ ನಮೂನೆಗಳನ್ನು ಭರ್ತಿ ಮಾಡಿ ದೂರು ನೀಡಬಹುದು. ಪ್ರತೀ ತಿಂಗಳ ಎರಡನೇ ಬುಧವಾರ ತಾಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿ ಅಹವಾಲು ಸ್ವೀಕರಿಸಲಾಗುತ್ತದೆ. ಅಲ್ಲಿಯೂ ದೂರು ನೀಡಬಹುದು. ದ.ಕ. ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 0824-2950997 ಅಥವಾ ಮೊಬೈಲ್‌ 9364062517, ಉಡುಪಿ ಲೋಕಾಯುಕ್ತ ಕಚೇರಿ 0820-2958881 ಅಥವಾ ಮೊಬೈಲ್‌ 7022883200 ಸಂಪರ್ಕಿಸಬಹುದು.

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next