Advertisement

Railway ಪ್ಲಾಟ್‌ಫಾರ್ಮ್ ಟಿಕೆಟ್‌, ಸೇವೆ ಜಿಎಸ್‌ಟಿ ಮುಕ್ತ

12:37 AM Jun 23, 2024 | Team Udayavani |

ಹೊಸದಿಲ್ಲಿ: ರೈಲ್ವೇ ಪ್ಲಾಟ್‌ಫಾರ್ಮ್ ಟಿಕೆಟ್‌ ಸಹಿತ ರೈಲ್ವೇ ಇಲಾಖೆ ಒದಗಿಸುವ ಎಲ್ಲ ಸೇವೆಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದ್ದರೆ, ಕೃಷಿ ಚಟುವಟಿಕೆಗಳಿಗೆ ಬಳಕೆ ಯಾಗುವ ಸ್ಪ್ರಿಂಕ್ಲರ್‌ಗಳು ಶೇ. 12ರ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ.

Advertisement

ಶನಿವಾರ ಹೊಸದಿಲ್ಲಿ ಯಲ್ಲಿ ನಡೆದ 53ನೇ ಜಿಎಸ್‌ಟಿ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ಯಾಕೇಜಿಂಗ್‌ಗೆ
ಬಳಕೆಯಾಗುವ ರಟ್ಟಿನ ಡಬ್ಬಗಳನ್ನು ಶೇ. 18ರಿಂದ ಶೇ. 12ರ ತೆರಿಗೆ ವ್ಯಾಪ್ತಿಗೆ ಇಳಿಸಲಾಗಿದೆ. ಇದರಿಂದ ತೋಟಗಾರಿಕೆ ಉದ್ಯಮ ಮತ್ತು ಉತ್ಪಾದನೆಯಲ್ಲಿ ವೆಚ್ಚ ಇಳಿಕೆ ಸಾಧ್ಯವಾಗಲಿದೆ.

ಸಮಿತಿ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ನಕಲಿ ಬಿಲ್‌ ತಪ್ಪಿಸಲು ದೇಶಾದ್ಯಂತ ಹಂತ ಹಂತವಾಗಿ ಆಧಾರ್‌ ದೃಢೀಕೃತ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಶೈಕ್ಷಣಿಕ ಸಂಸ್ಥೆಗಳಿಂದ ಆಚೆಗಿರುವ ಹಾಸ್ಟೆಲ್‌ ವಸತಿ ಸೇವೆಯನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ. ಆದರೆ ಇದು ಪ್ರತೀ ವ್ಯಕ್ತಿಗೆ 20 ಸಾವಿರ ರೂ. ಮತ್ತು 3 ತಿಂಗಳ ಅವಧಿಯ ಷರತ್ತು ಹೊಂದಿದೆ. ಅದೇ ರೀತಿ, ರೈಲ್ವೇ ಪ್ಲಾಟ್‌ಫಾರ್ಮ್ ಮಾತ್ರವಲ್ಲದೆ ರೈಲ್ವೇ ಇಲಾಖೆ ಒದಗಿಸುವ ವಿಶ್ರಾಂತಿ ಕೊಠಡಿಗಳು, ವೆಯಿrಂಗ್‌ ರೂಮುಗಳು, ವಸ್ತುಗಳನ್ನು ಇಡುವ ಕೋಣೆ ಮತ್ತು ಬ್ಯಾಟರಿ ಚಾಲಿತ ಕಾರ್‌ ಸೇವೆಗಳಿಗೆ ಇನ್ನು ಜಿಎಸ್‌ಟಿ ಅನ್ವಯವಾಗುವುದಿಲ್ಲ.

ರಸಗೊಬ್ಬರ ಮೇಲಿನ ಜಿಎಸ್‌ಟಿ ರದ್ದು? ರಸಗೊಬ್ಬರ ಮೇಲಿನ ಜಿಎಸ್‌ಟಿ ರದ್ದು ಮಾಡುವ ನಿರ್ಧಾರದ ಪರಿಶೀಲನೆಯನ್ನು ಸಚಿವರ ಗುಂಪಿಗೆ ವಹಿಸಲು ಜಿಎಸ್‌ಟಿ ಸಮಿತಿ ನಿರ್ಧರಿಸಿದೆ. ರೈತರು ಮತ್ತು ಉದ್ಯಮಕ್ಕೆ ನೆರವಾಗುವ ನಿಟ್ಟಿನಲ್ಲಿ ರಸಗೊಬ್ಬರ ಉತ್ಪಾದನೆ ಮತ್ತು ಕಚ್ಚಾ ವಸ್ತುಗಳ ಮೇಲಿನ ಜಿಎಸ್‌ಟಿ ರದ್ದು ಮಾಡುವಂತೆ ಫೆಬ್ರವರಿ ತಿಂಗಳಲ್ಲಿ ಸಂಸತ್ತಿನ ರಾಸಾಯನಿಕ ಮತ್ತು ರಸಗೊಬ್ಬರ ಸ್ಥಾಯಿ ಸಮಿತಿ ಶಿಫಾರಸು ಮಾಡಿತ್ತು. ಸದ್ಯ ರಸಗೊಬ್ಬರಗಳ ಮೇಲೆ ಶೇ. 5 ಮತ್ತು ಕಚ್ಚಾ ವಸ್ತುಗಳ ಮೇಲೆ ಶೇ. 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.

Advertisement

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌: ರಾಜ್ಯ ಸರಕಾರಗಳು ತೀರ್ಮಾನಿಸಲಿ ಎಂದ ವಿತ್ತ ಸಚಿವೆ: ಪೆಟ್ರೋಲ್‌ ಮತ್ತು ಡೀಸೆಲ್‌ಗ‌ಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಇರಾದೆ ಕೇಂದ್ರ ಸರಕಾರಕ್ಕೆ ಇದೆ. ಯಾವ ದರವನ್ನು ವಿಧಿಸಬೇಕು ಎಂಬುದನ್ನು ರಾಜ್ಯ ಸರಕಾರಗಳು ಒಟ್ಟಾಗಿ ನಿರ್ಧರಿಸಲಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು. ಪೆಟ್ರೋಲ್‌, ಡೀಸೆಲ್‌ಗ‌ಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಅವಕಾಶವಿದೆ. ಈ ವಿಷಯದಲ್ಲಿ ರಾಜ್ಯಗಳ ಒಮ್ಮತವನ್ನು ಸೂಚಿಸಬೇಕು ಎಂದು ತಿಳಿಸಿದರು.

ಜಿಎಸ್‌ಟಿ ಸಮಿತಿಯ ನಿರ್ಧಾರಗಳು
-ಶೇ. 12 ಜಿಎಸ್‌ಟಿ ವ್ಯಾಪ್ತಿಗೆ ಎಲ್ಲ ಮಾದರಿಯ ಸೋಲಾರ್‌ ಕುಕ್ಕರ್‌ಗಳು.
-ಶೇ. 12 ವ್ಯಾಪ್ತಿಗೆ ಎಲ್ಲ ಮಿಲ್ಕ್ ಕ್ಯಾನ್‌ ಮತ್ತು ಕಟ್ಟಡ ಸಾಮಗ್ರಿಗಳು.
-ನಕಲಿ ಬಿಲ್‌ ತಡೆಯಲು ದೇಶಾದ್ಯಂತ ಆಧಾರ್‌ ಆಧರಿತ ಬಯೋಮೆಟ್ರಿಕ್‌ ವ್ಯವಸ್ಥೆ.
-ಮೇಲ್ಮನವಿ ನ್ಯಾಯಮಂಡಳಿಗೆ 20 ಲಕ್ಷ ರೂ., ಹೈಕೋರ್ಟ್‌ಗೆ 1 ಕೋಟಿ ರೂ. ಮತ್ತು ಸುಪ್ರೀಂ ಕೋರ್ಟ್‌ ಅರ್ಜಿ ಸಲ್ಲಿಸಲು 2 ಕೋಟಿ ರೂ. ಮಿತಿಯನ್ನು ತೆರಿಗೆ ಅಧಿಕಾರಿಗಳಿಗೆ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next