ಮಂಗಳೂರು: ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ಸುಮಾರು 7 ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ತಲ್ಲತ್(39) ನನ್ನು ಬಂಧಿಸಲಾಗಿದೆ.
ಹಲ್ಲೆ, ಕೊಲೆಯತ್ನ, ಅಪಹರಣ, ಹಫ್ತಾ ವಸೂಲಿ, ದರೋಡೆ, ಕೊಲೆ ಸಹಿತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದ. ಮುಂದಿನ ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿ ತಲ್ಲತ್ ಮಂಗಳೂರಿನ ಫೈಸಲ್ ನಗರದ ಶಾಂತಿನಗರ ನಿವಾಸಿ.
2004 ರಲ್ಲಿ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ನಂತರ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಕೊಣಾಜೆ, ಬರ್ಕೆ, ಮುಂಬೈ ಮುಂತಾದ ಕಡೆಗಳಲ್ಲಿ ಹಲ್ಲೆ, ಜೀವ ಬೆದರಿಕೆ, ಹಫ್ತಾ ವಸೂಲಿ, ದರೋಡೆ, ಕೊಲೆ ಯತ್ನ, ಕೊಲೆ, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ, ಅಪಹರಣ ಹೀಗೆ ಒಟ್ಟು 28 ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಆರೋಪಿ ಪತ್ತೆ ಕಾರ್ಯವನ್ನು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಸಿಬಿ ಸಿಬಂದಿ ಕೈಗೊಂಡಿದ್ದರು.