ಮಂಗಳೂರು: 30 ವರ್ಷಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಸತತ ಕಾರ್ಯಾಚರಣೆ ಬಳಿಕ ಬಂಧಿಸುವಲ್ಲಿ ಮಾಡುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿ ಜೋಸ್ ಕುಟ್ಟಿ ಪಾಪಚ್ಚನ್ (55) ಎಂಬಾತನಾಗಿದ್ದಾನೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಭಾಳ ಗ್ರಾಮದಲ್ಲಿ ಇಂಡಸ್ಟ್ರೀಯಲ್ ಮಾಲಕರು 5 ಮಂದಿ ಸೆಕ್ಯೂರಿಟಿ ಗಾರ್ಡ್ ಗಳನ್ನು ದೆಹಲಿ ಮೂಲದ ಕಂಪನಿಯಲ್ಲಿ ನೇಮಿಸಿದ್ದರು. 1995 ಮಾರ್ಚ್ 12 ರಂದು ರಾತ್ರಿ 10.30 ರ ಸುಮಾರಿಗೆ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಸುರೇಶ್, ನಾರಾಯಣ ಹಾಗೂ ದೇವಣ್ಣ ರವರು ಕೆಲಸ ಮಾಡುತ್ತಿದ್ದ ಸಮಯ ಮೂವರು ಅಪರಿಚಿತರು ಬಂದಿದ್ದರು. ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ವಿಚಾರಿಸಿದ ವೇಳೆ ಇಬ್ಬರು ಜಗಳ ಮಾಡಿ ತೀವ್ರ ಹಲ್ಲೆ ನಡೆಸಿದ್ದರು. ಈ ಪೈಕಿ ಗಂಭೀರ ಗಾಯಗೊಂಡ ಸೆಕ್ಯೂರಿಟಿ ಗಾರ್ಡ್ ನಾರಾಯಣರವರು ಸಾವನ್ನಪ್ಪಿದ್ದರು.
ಪ್ರಕರಣದ ಆರೋಪಿಗಳ ಪೈಕಿ ಅಚ್ಚನ್ ಕುಂಞ ಮತ್ತು ಜೋಸ್ ಕುಟ್ಟಿ ಎಂಬವರು ತಾವು ಕೆಲಸ ಮಾಡುತ್ತಿದ್ದ ಸೈಟ್ ನಲ್ಲಿರುವ ಕ್ಯಾಂಟೀನ್ ಬಳಿಯಲ್ಲಿ ಮಲಗಿದ್ದ ಕೂಲಿ ಕೆಲಸದವರ ಜತೆ ಗಲಾಟೆ ಮಾಡಿದ್ದು,ತಡೆಯಲು ಬಂದಿದ್ದ ಸಂಬಂಧಿ ಥಾಮಸ್ ಎಂಬವರಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡ ಥಾಮಸ್ ಚಿಕಿತ್ಸೆ ಪಡೆದಿದ್ದರು. ಅಚ್ಚನ್ ಕುಂಞ ಮತ್ತು ಜೋಸ್ ಕುಟ್ಟಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರಿಬ್ಬರೇ ಸೆಕ್ಯೂರಿಟಿ ಗಾರ್ಡ್ ನಾರಾಯಣರಲ್ಲಿ ಜಗಳ ಮಾಡಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
ಕೊಲೆ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಪತ್ತೆಗೆ ಪೊಲೀಸರು ಮಾಹಿತಿಯನ್ನು ಸಂಗ್ರಹಿಸಿ ಪತ್ತೆಗೆ ಪ್ರಯತ್ನಿಸಿದ್ದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಕೃತ್ಯ ನಡೆಸಿದ ನಂತರ ತವರು ರಾಜ್ಯ ಕೇರಳಕ್ಕೆ ಹೋಗಿ ಬಳಿಕ ಗುಜರಾತ್, ರಾಜಸ್ಥಾನ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ವಿರುದ್ಧ ಎಲ್ ಪಿ ಸಿ ವಾರಂಟ್ ಜಾರಿಯಲ್ಲಿತ್ತು.
ಇನ್ನೋರ್ವ ಆರೋಪಿ ಅಚ್ಚನ್ ಕುಂಞ ಎಂಬಾತ ಸುಮಾರು 8 ವರ್ಷದ ಹಿಂದೆ ಮೃತಪಟ್ಟಿದ್ದ. ತಲೆಮರೆಸಿಕೊಂಡಿದ್ದ ಜೋಸ್ ಕುಟ್ಟಿ ಕುರಿತು ಸುಮಾರು 4 ತಿಂಗಳಿಂದ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ಬುಧವಾರ (ಅ23) ಕೇರಳ ದ ಎರ್ನಾಕುಳಂ ಜಿಲ್ಲೆಯ ತ್ರಿಪ್ಪುಳಿತ್ತುರಂ ಎಂಬಲ್ಲಿ ಬಂಧಿಸಿದ್ದಾರೆ.
ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್, ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಎಚ್. ಎಂ, ಎಎಸ್ಐ ಮೋಹನ್ ಕೆ.ವಿ. ಹಾಗೂ ಸಿಸಿಬಿ ಸಿಬಂದಿಗಳು ಪಾಲ್ಗೊಂಡಿದ್ದರು. ಪತ್ತೆ ಹಚ್ಚಿದ ಸಿಸಿಬಿ ಪೊಲೀಸರ ಕಾರ್ಯವನ್ನು ಪೊಲೀಸ್ ಆಯುಕ್ತರಾದ ಅನುಮಪ್ ಅಗರ್ ವಾಲ್ ಶ್ಲಾಫಿಸಿದ್ದಾರೆ.