Advertisement

Mangaluru: ಹವಾಮಾನ ಏರುಪೇರು ಸಾಂಕ್ರಾಮಿಕ ರೋಗದ ಮುನ್ನೆಚ್ಚರ ವಹಿಸಿ

03:55 PM Feb 26, 2024 | Team Udayavani |

ಮಹಾನಗರ: ಕೆಲವು ವಾರಗಳಿಂದ ತಾಪಮಾನದಲ್ಲಿ ಏರು ಪೇರು ಕಂಡುಬರುತ್ತಿದೆ. ಬೆಳಗ್ಗಿನ ಜಾವ ತುಸು ಚಳಿ ಮತ್ತು ಮಂಜಿನ ವಾತಾವರಣ ಇದ್ದು, ಮಧ್ಯಾಹ್ನದ ಬಳಿಕ ಭಾರೀ ಸೆಕೆಯಿಂದ ಕೂಡಿರುತ್ತದೆ. ಇದರ ಪರಿಣಾಮ ಆರೋಗ್ಯದ ಮೇಲೆ ಬೀರುತ್ತಿದೆ.

Advertisement

ಪ್ರತಿಕೂಲ ಹವಾಮಾನದ ಪರಿಣಾಮ ಸಾರ್ವಜನಿಕರಲ್ಲಿ ಕೆಮ್ಮು, ಜ್ವರ, ಗಂಟಲು ನೋವು, ತಲೆ ನೋವು ಮುಂತಾದ ಲಕ್ಷಣಗಳು ಕಂಡುಬರುತ್ತಿವೆ. ಕರಾವಳಿಯಲ್ಲಿ ಚಳಿಗಾಲದ ಕೊನೆಯಲ್ಲೂ ಸೆಕೆಯ ಅನುಭವ ಆಗುತ್ತಿದೆ. ಈ ಬಾರಿ ಚಳಿ ಪ್ರಮಾಣ ಕಡಿಮೆಯಾಗಿದ್ದು, ಗರಿಷ್ಠ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ನಗರದಲ್ಲಿ ಕೆಲವು ದಿನಗಳ ಹಿಂದೆ 35.3 ಡಿ.ಸೆ. ತಾಪಮಾನ ದಾಖಲಾಗಿದ್ದು, ಇದು ಇತ್ತೀಚಿನ ಗರಿಷ್ಠ ತಾಪಮಾನ. ಹವಾಮಾನ ಇಲಾಖೆ ತಜ್ಞರ ಪ್ರಕಾರ, ಮುಂದಿನ ಕೆಲವು ದಿನಗಳವರೆಗೆ ಇದೇ ರೀತಿಯ ವಾತಾವರಣ ಇರುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ಇಷ್ಟೊಂದು ಹೆಚ್ಚಿನ ತಾಪಮಾನ ಇರುವುದಿಲ್ಲ. ಕೆಲವು ದಿನಗಳಿಂದ ವಾಡಿಕೆಗಿಂತ ಒಂದೆರಡು ಡಿ.ಸೆ. ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿದೆ.

ನಗರ ಭಾಗದಲ್ಲಿ ಇದೀಗ ಬೆಳಗ್ಗಿನ ಜಾವ ಹೊರತುಪಡಿಸಿ, ಚಳಿಯ ಬದಲು ಸೆಕೆಯ ವಾತಾವರಣ ಇದೆ. ಹವಾಮಾನ ಇಲಾಖೆ ತಜ್ಞರ ಪ್ರಕಾರ, “ಚಳಿಗಾಲದಿಂದ ಬೇಸಗೆ ಕಾಲಕ್ಕೆ ಪರಿವರ್ತನೆಯಾಗುವ ಕಾಲದಲ್ಲಿ ಈ ರೀತಿಯ ವಾತಾವರಣ ಇರುತ್ತದೆ. ಬೆಳಗ್ಗಿನ ವೇಳೆ ಭೂಮಿಯ ಕನಿಷ್ಠ ತಾಪಮಾನ ಮತ್ತು ಸಮುದ್ರದ ನೀರಿನ ಅಂಶದ ಪರಿಣಾಮ ಪರಿಣಾಮ ಗಾಳಿಯಲ್ಲಿ ಇಬ್ಬನಿಯ ಪ್ರಮಾಣ ಇರುತ್ತದೆ’ ಎನ್ನುತ್ತಾರೆ.

ತಾಪಮಾನ ವೈಪರಿತ್ಯ ಉಂಟಾಗುವುದರಿಂದ ಬ್ಯಾಕ್ಟೀರಿಯಾ, ವೈರಸ್‌ಗಳ ಬೆಳವಣಿಗೆ ಹೆಚ್ಚಾಗಿ ರೋಗನಿರೋಧಕ ಶಕ್ತಿ ಕುಂದುವ
ಅಪಾಯವಿರುತ್ತದೆ. ಇದರಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ಕಾಯಿಲೆಗೆ ಒಳಗಾಗುವ ಅಪಾಯವಿದೆ. ಹೀಗಾಗಿ ನೆಗಡಿ, ಕೆಮ್ಮು, ಗಂಟಲು ನೋವು, ಉಸಿರಾಟದ ಸಮಸ್ಯೆ, ಮೂಗು ಕಟ್ಟುವಿಕೆ, ಎದೆಬಿಗಿತ, ಚರ್ಮ ಒಣಗುವಿಕೆ, ಅಲರ್ಜಿ, ಅಸ್ತಮಾ, ಅಜೀರ್ಣತೆ ಹೀಗೆ ವಿವಿಧ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿ ಬಿಡುತ್ತದೆ. ಇನ್ನು ಚಳಿಗಾಲದಲ್ಲಿ ದೊಡ್ಡವರಿಗಿಂತಮಕ್ಕಳು ಹೆಚ್ಚಿನ ಸಮಸ್ಯೆಗೆ ತುತ್ತಾಗುತ್ತಾರೆ. ವೈರಾಣು ಸೋಂಕು, ನೆಗಡಿ, ಶೀತ, ನ್ಯುಮೋನಿಯಾ ಸಮಸ್ಯೆ ಮಕ್ಕಳಿಗೆ ಬಾಧಿಸುವ ಸಾಧ್ಯತೆ ಹೆಚ್ಚಿದೆ.

Advertisement

ಮಕ್ಕಳಲ್ಲಿ ಕಂಡುಬರುತ್ತಿದೆ ಕೆಪ್ಪಟ್ರಾಯ: ಜಿಲ್ಲೆಯ ಕೆಲವು ಕಡೆಗಳಲ್ಲಿ ಕೆಪ್ಪಟ್ರಾಯ (ಗದ್ದಕಟ್ಟು) ರೋಗ ಕಾಣಿಸಿಕೊಳ್ಳುತ್ತಿದೆ. ಮಾರಣಾಂತಿಕ, ಅಪಾಯಕಾರಿ ಕಾಯಿಲೆ ಅಲ್ಲದಿದ್ದರೂ ಮಕ್ಕಳಲ್ಲಿ ಹೆಚ್ಚಾಗಿ ಈ ರೋಗ ದೃಢಪಡುತ್ತಿದೆ. ರೋಗ ನಿರೋಧಕ ಶಕ್ತಿ ಇಲ್ಲದವರಲ್ಲಿ ತೀವ್ರವಾಗಿ ಹರಡುತ್ತದೆ. ಸಾಂಕ್ರಾಮಿಕ ಕಾಯಿಲೆ ಇದಾಗಿದ್ದು, ಒಬ್ಬರಿಗೆ ಕಾಣಿಸಿಕೊಂಡರೆ ಮತ್ತೊಬ್ಬರಿಗೆ ಇದು ಹರಡುತ್ತದೆ. 10ರಿಂದ 15 ದಿನಗಳೊಳಗೆ ವೈರಸ್‌ ಹರಡಲು ಸಮಯ ತೆಗೆದುಕೊಳ್ಳುತ್ತದೆ. ಈ ರೋಗ ಆರಂಭಕ್ಕೂ ಮುನ್ನ ಜ್ವರ, ತಲೆನೋವು, ಗಂಟಲು ನೋವು ಇರುತ್ತದೆ. ಇದಾದ ಬಳಿಕ ಕಿವಿಯ ಗ್ರಂಥಿಯ ಬಳಿ ನೋವು ಉಂಟಾಗುತ್ತದೆ. ಕಿವಿಯ ಬಳಿ ಊತ ಕಂಡುಬರುತ್ತದೆ. ಸುಮಾರು ಐದು ದಿನ ದವಡೆ ದಪ್ಪಾದಾಗಿ ವಿಪರೀತ ನೋವಿನಿಂದ ಕೂಡಿರುತ್ತದೆ.

ಆರೋಗ್ಯ ಇಲಾಖೆಯಿಂಲೂ ಜಾಗೃತಿ
ಕೇಂದ್ರ ಸರಕಾರದ ಹವಾಮಾನ ನಿಯಂತ್ರಣ ಮತ್ತು ಮಾನವ ಆರೋಗ್ಯ ರಾಷ್ಟ್ರೀಯ ಕಾರ್ಯಕ್ರಮದಡಿ ವಿಪತ್ತು ನಿರ್ವಹಣೆ ಮತ್ತು ಹವಾಮಾನ ವೈಪರಿತ್ಯದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಅದರಂತೆ ಏನೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.
-ಡಾ| ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next