ಮಂಗಳೂರು: ಬಂಗಾಲ ಕೊಲ್ಲಿಯಲ್ಲಿ ಪ್ರಸ್ತುತ ನಿಮ್ನ ಒತ್ತಡ ಉಂಟಾಗಿದ್ದು, ಇದು ನ. 30ರಂದು ವಾಯುಭಾರ ಕುಸಿತ ವಾಗಿ ಮಾರ್ಪಟ್ಟು ಅನಂತರ ಚಂಡಮಾರುತವಾಗಿ ಪರಿವರ್ತನೆ ಯಾಗುವ ಸಾಧ್ಯತೆ ಇದೆ.
ಪ್ರಸ್ತುತ ಅದರ ಕೇಂದ್ರ ಬಿಂದು ದಕ್ಷಿಣ ಅಂಡಮಾನ್‌ನಲ್ಲಿದ್ದು, ಕ್ರಮೇಣ ಅದು ಬಂಗಾಲಕೊಲ್ಲಿಗೆ ಸಾಗಲಿದೆ. ಅದು ಇನ್ನಷ್ಟು ತೀವ್ರಗೊಂಡು ಡಿ.5ರ ವೇಳೆಗೆ ಆಂಧ್ರಪ್ರದೇಶ ಕರಾವಳಿ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದಿಂದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಉತ್ತಮ ಮಳೆ ಯಾಗುವ ಸಂಭವ ಇದೆ. ಕರ್ನಾಟಕದ ಕೆಲವು ಕಡೆ ಲಘು ಮಳೆಯಾಗಬಹುದು ಎಂದು ಇಲಾಖೆ ತಿಳಿಸಿದೆ.
ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಕಡಿರುದ್ಯಾವರ ಸೇರಿದಂತೆ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಕೂಡ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಗ್ರಾಮೀಣ ಭಾಗದ ಕೆಲವು ಕಡೆ ಬೆಳಗ್ಗೆ ತುಸು ಚಳಿಯ ವಾತಾವರಣ ಇತ್ತು. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳ ಕಾಲ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಮೋಡ ಮತ್ತು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಮಂಗಳೂರಿನಲ್ಲಿ ಮಂಗಳವಾರ ಗರಿಷ್ಠ ತಾಪಮಾನ 34 ಡಿ.ಸೆ. ಮತ್ತು ಕನಿಷ್ಠ ತಾಪಮಾನ 24.9 ಡಿ.ಸೆ. ದಾಖಲಾಗಿತ್ತು. ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ ಇನ್ನಷ್ಟು ಏರಿ, ಕನಿಷ್ಠ ತಾಪಮಾನ ಇಳಿಕೆ ಯಾಗುವ ಸಾಧ್ಯತೆ ಇದೆ.