Advertisement
ದೀಪಕ್ ಹತ್ಯೆಯಾದ ಜ. 3ರ ರಾತ್ರಿ ಕೊಟ್ಟಾರ ಚೌಕಿಗೆ ಮೂರು ಬೈಕ್‌ಗಳಲ್ಲಿ ಬಂದಿದ್ದ 7 ಮಂದಿ ದುಷ್ಕರ್ಮಿಗಳು ತನ್ನ ಫಾಸ್ಟ್ ಫುಡ್ ಅಂಗಡಿಯ ಬಾಗಿಲು ಮುಚ್ಚಿ ಮನೆಗೆ ಹೊರಡಲನುವಾಗುತ್ತಿದ್ದ ಅಬ್ದುಲ್ ಬಶೀರ್ ಅವರ ಮೇಲೆ ತಲವಾರುಗಳಿಂದ ತೀವ್ರ ಹಲ್ಲೆ ಮಾಡಿ ಪರಾರಿಯಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಬಶೀರ್ ಅವ ರನ್ನು ಆ ಹಾದಿಯಲ್ಲಿ ಸಾಗುತ್ತಿದ್ದ ಆ್ಯಂಬುಲೆನ್ಸ್‌ನವರು ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾ ಘಟಕದಲ್ಲಿ ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.
ಇರಿತದಿಂದ ಬಶೀರ್ ಅವರ ಕುತ್ತಿಗೆ, ಶ್ವಾಸನಾಳ ಹಾಗೂ ಎದೆಯ ಭಾಗಕ್ಕೆ ಗಂಭೀರ ಏಟು ಬಿದ್ದಿತ್ತು. ದುಷ್ಕರ್ಮಿಗಳು ಯದ್ವಾತದ್ವಾ ಕಡಿದಿದ್ದರಿಂದ ಬಶೀರ್ ದೇಹದಲ್ಲಿ 17 ಗಾಯಗಳಾಗಿದ್ದವು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ತಾತ್ಕಾಲಿಕ ಶ್ವಾಸನಾಳವನ್ನು ಜೋಡಿಸಿದ್ದರು. ಈತನ್ಮಧ್ಯೆ ಅವರ ಕಿಡ್ನಿ ವೈಫಲ್ಯ ಕಂಡಿತ್ತು. ವೈದ್ಯರು ಮುತುವರ್ಜಿ ವಹಿಸಿ ಹೆಚ್ಚಿನ ಚಿಕಿತ್ಸೆ ನೀಡಿದ್ದರು. ಕಳೆದ 3 ದಿನಗಳಲ್ಲಿ ಬಶೀರ್‌ಗೆ 18ಕ್ಕೂ ಅಧಿಕ ಬಾಟಲಿ ರಕ್ತ ನೀಡಲಾಗಿತ್ತು. ಶನಿವಾರ ವೇಳೆಗೆ ಬಶೀರ್ ಆರೋಗ್ಯದಲ್ಲಿ ಸ್ವಲ್ಪ ಚೇತ ರಿಕೆ ಕಂಡು ಬಂದಿತ್ತು. ಆದರೆ ರವಿವಾರ ಮುಂಜಾನೆ ದಿಢೀರನೆ ರಕ್ತವಾಂತಿ ಆಗಿತ್ತು. ಬೆಳಗ್ಗೆ 8.05ರ ಸುಮಾರಿಗೆ ಮೃತಪಟ್ಟರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಬಶೀರ್ ಅವರನ್ನು ಉಳಿಸಿಕೊಳ್ಳಲು ಆಸ್ಪತ್ರೆಯ ವೈದ್ಯರು ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಅವರನ್ನುಳಿಸಿಕೊಳ್ಳಲಾಗಲಿಲ್ಲ ಎಂದು ಅವರ ಸಹೋದರ ನೌಶಾದ್ ತಿಳಿಸಿದ್ದಾರೆ. 10 ಲಕ್ಷ ರೂ. ಪರಿಹಾರ
ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಎ.ಜೆ. ಆಸ್ಪತ್ರೆಗೆ ಭೇಟಿ ನೀಡಿ ಮೃತ ಅಬ್ದುಲ್ ಬಶೀರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು ಹಾಗೂ ಅವರ ಕುಟುಂಬಕ್ಕೆ 10 ಲಕ್ಷ ರೂ.ಗಳನ್ನು ಸರಕಾರ ಮಂಜೂರು ಮಾಡಿದೆ ಎಂದು ತಿಳಿಸಿದರು. ದ. ಕ. ಜಿಲ್ಲಾಡಳಿತದ ವತಿಯಿಂದ 5 ಲಕ್ಷ ರೂ. ಹಾಗೂ ರಾಜ್ಯ ಸರಕಾರದ ವತಿ ಯಿಂದ 5 ಲಕ್ಷ ರೂ. ನೆರವು ಮಂಜೂರಾಗಿದೆ ಎಂದು ವಿವರಿಸಿದರು.