Advertisement

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

03:48 PM Dec 21, 2024 | Team Udayavani |

ಮಂಗಳೂರು: ಸಂವಿಧಾನ ಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ಅವರು ಬದುಕಿದ್ದಾಗ ಅಪಮಾನ ಮಾಡಿದವರು, ಸತ್ತ ಬಳಿಕ ಗೌರವ ನೀಡಲಾಗದವರು ಈಗ ಅವರನ್ನು ಕೇವಲ ಒಂದು ಸಾಧನವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santhosh) ಟೀಕೆ ಮಾಡಿದರು.

Advertisement

ಮಂಗಳೂರಲ್ಲಿ ಸಂವಿಧಾನ ಸಮ್ಮಾನ ಕಾರ್ಯಕ್ರಮ ಉದ್ಘಾಟನೆ, ‘ಸಂವಿಧಾನ ಬದಲಾಯಿಸಿದ್ದು ಯಾರು?’ ಕೃತಿ ಲೋಕಾರ್ಪಣೆ ಮಾಡಿದ ಸಂದರ್ಭ ಬಿ.ಎಲ್. ಸಂತೋಷ್‌ ಭಾಷಣ ಮಾಡಿದರು.

ಮಗುವಿಗೆ ತಾಯಿ ಒಂದು ‘ಟೂಲ್ʼ ಆಗಬಾರದು, ಹಾಗೆಯೇ ಡಾ|ಅಂಬೇಡ್ಕರ್ ಮತ್ತು ಭಾರತದ ಸಂವಿಧಾನ ಯಾರಿಗೂ ಟೂಲ್ ಆಗಬಾರದು, ಅದನ್ನು ದೇವರು, ಕಾಲ ಮತ್ತು ಸಮಾಜ ಎಂದಿಗೂ ಕ್ಷಮಿಸುವುದಿಲ್ಲ, ಇಂದಿನ ಸನ್ನಿವೇಶದಲ್ಲಿ ಅಂತಹ ಪ್ರಯತ್ನಗಳು ಯಶಸ್ವಿಯಾಗುವುದೂ ಇಲ್ಲ ಎಂದರು.

1952ರಲ್ಲಿ ಅಂಬೇಡ್ಕರ್ ಅವರು ಮಹಾ ಚುನಾವಣೆಗೆ ಸ್ಪರ್ಧಿಸಿದಾಗ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಆಗಿನ ಕಾಲದಲ್ಲೇ ನೆಹರೂ ಅವರು ಎರಡು ಬಾರಿ ಅವರ ಕ್ಷೇತ್ರಕ್ಕೆ ಆಗಮಿಸಿದ್ದರು. ಅಲ್ಲಿ ಅಂಬೇಡ್ಕರ್ ಸೋಲಬೇಕಾಯಿತು, ಭಂಡಾರಾದಲ್ಲಿ ನಡೆದ ಉಪಚುನಾವಣೆಯಲ್ಲಿ ಅಂಬೇಡ್ಕರ್ ಅವರು ಮೂರನೇ ಸ್ಥಾನಕ್ಕೆ ಇಳಿಯುವಂತೆ ಕಾಂಗ್ರೆಸ್ ನೋಡಿಕೊಂಡಿತು. ಅವರು 1957ರಲ್ಲಿ ದಿಲ್ಲಿಯ ಆಲಿಪುರದಲ್ಲಿ ನಿಧನರಾದಾಗ ಅಲ್ಲಿ ಅವರ ಅಂತ್ಯಸಂಸ್ಕಾರ ಕೂಡಾ ನಡೆಸಲು ಬಿಡಲಿಲ್ಲ, ಅವರ ಪತ್ನಿಯನ್ನು ಆರು ತಿಂಗಳೊಳಗೆ ಬಂಗಲೆ ಖಾಲಿ ಮಾಡಲು ಸೂಚಿಸಲಾಗಿತ್ತು.

Advertisement

ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ ನೆಹರೂ ಹಾಗೂ ಇಂದಿರಾ ಗಾಂಧಿ ಎಂದೂ ಅಂಬೇಡ್ಕರ್ ಅವರ ಹೆಸರನ್ನು ಪ್ರಶಸ್ತಿಗೆ ಸೂಚಿಸಲೇ ಇಲ್ಲ, ಕೊನೆಗೆ ಇತರ ಪಕ್ಷಗಳ ಒತ್ತಾಯದಿಂದ ತಡವಾಗಿ 1990ರಲ್ಲಿ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗಲಷ್ಟೇ ಅವರಿಗೆ ಅದು ಸಿಕ್ಕಿತು. ಒಂದು ಪರಿವಾರದವರಿಗೆ ಬಿಟ್ಟರೆ ಉಳಿದ ಗಣ್ಯರಿಗೆ ಮರಣೋತ್ತರ ಸ್ಮಾರಕದ ಗೌರವವನ್ನೂ ದಿಲ್ಲಿಯಲ್ಲಿ ನಿರಾಕರಿಸಲಾಗಿತ್ತು. ಅವರದೇ ಪಕ್ಷದ ಮುಖಂಡ ಸೀತಾರಾಮ ಕೇಸರಿ ಹಾಗೂ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಅವರಿಗೂ ಇದೇ ಸ್ಥಿತಿಯಾಗಿದೆ. ಈಗ ಅಂಬೇಡ್ಕರ್ ಅವರನ್ನು ಗುತ್ತಿಗೆಗೆ ತೆಗೆದುಕೊಂಡಂತೆ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಸಂತೋಷ್ ಟೀಕಾ ಪ್ರಹಾರ ಮಾಡಿದರು.

ಪ್ರಧಾನಿ ಮೋದಿಯವರು ಅಂಬೇಡ್ಕರ್ ಅವರ ನೆನಪನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಅವರ ಜನ್ಮಸ್ಥಳ, ಶಿಕ್ಷಣದ ಸ್ಥಳ, ದೀಕ್ಷಾ ಸ್ಥಳ, ಪರಿನಿರ್ವಾಣದ ಜಾಗ ಮತ್ತು ಅಂತಿಮಸಂಸ್ಕಾರ ನಡೆದ ಜಾಗಗಳನ್ನು ಪಂಚತೀರ್ಥವನ್ನಾಗಿ ಘೋಷಿಸಿ ಅಭಿವೃದ್ಧಿ ಮಾಡಿ ಗೌರವ ಸಲ್ಲಿಸಿದ್ದಾರೆ ಎಂದು ಸಂತೋಷ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next