Advertisement

Mangaluru:ವಿಶ್ವಾಸ, ಸಾಮರಸ್ಯ ವೃದ್ಧಿಗೆ ಏರಿಯಾ ಸಭೆ ಹೆಚ್ಚಳಕ್ಕೆ ಕ್ರಮ- ಅಗರ್‌ವಾಲ್‌

05:59 PM Sep 22, 2023 | Team Udayavani |

ಮಂಗಳೂರಿನ ನೂತನ ಪೊಲೀಸ್‌ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಅನುಪಮ್ ಅಗರ್‌ವಾಲ್‌‌ ಅವರು ಉದಯವಾಣಿ “ಸುದಿನ’ ಜತೆಗೆ ಮಾತನಾಡಿ ಡ್ರಗ್ಸ್‌ ಹಾವಳಿ ನಿಯಂತ್ರಣ, ಕೋಮು ಸಾಮರಸ್ಯ, ಸುಗಮ ಸಂಚಾರ ಮೊದಲಾದ ವಿಚಾರಗಳಿಗೆ ಪ್ರತಿಕ್ರಿಯಿಸಿದ್ದಾರೆ.

Advertisement

*ಡ್ರಗ್ಸ್‌ ಮುಕ್ತ ಮಂಗಳೂರು’ ಅಭಿಯಾನ ಎಷ್ಟರ ಮಟ್ಟಿಗೆ ಯಶಸ್ವಿ?
“ಡ್ರಗ್ಸ್‌ ಮುಕ್ತ ಮಂಗಳೂರು’ ಅಭಿಯಾನ ಜಾಗೃತಿ ಮತ್ತು ಕಾರ್ಯಾಚರಣೆಯನ್ನು ಒಳಗೊಂಡಿದ್ದು ಇದು ಮುಂದುವರಿಯಲಿದೆ.
ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿರುವುದರಿಂದ, ಕಾರ್ಯಾಚರಣೆಯಿಂದ ಪ್ರಯೋಜನವಾಗಿದೆ. ಡ್ರಗ್ಸ್‌ ಬಗ್ಗೆ ಭಯ ಮೂಡುತ್ತಿದೆ.

*ಯಾಕೆ ಮಂಗಳೂರಿನಲ್ಲಿ ಡ್ರಗ್ಸ್‌ ಹಾವಳಿ?
ರಾಜ್ಯದಲ್ಲಿ ಬೆಂಗಳೂರಿನ ಅನಂತರ ಡ್ರಗ್ಸ್‌ ಹಾವಳಿ ಮಂಗಳೂರು ನಗರದಲ್ಲಿ ಹೆಚ್ಚು. ಇಲ್ಲಿ ಬಂದರು, ಇತರ ರಾಜ್ಯಗಳ ಗಡಿಭಾಗ, ವಿಮಾನ ನಿಲ್ದಾಣ ಮೊದಲಾದವು ಡ್ರಗ್ಸ್‌ ಚಟುವಟಿಕೆಗಳಿಗೆ ಪೂರಕವಾಗಿದೆ. ಎಲ್ಲ ಕಡೆಗಳಲ್ಲಿಯೂ ವಿಶೇಷ
ನಿಗಾ ವಹಿಸಲಾಗುತ್ತಿದೆ. ಡ್ರಗ್ಸ್‌ ಮೂಲ ಬೇಧಿ ಸಲು ಇಂಟೆಲಿಜೆನ್ಸಿ ಮೂಲಗಳನ್ನು ಬಲಪಡಿಸಲಾಗುತ್ತಿದೆ.ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಲಾಗುತ್ತಿದೆ.

*ಯುವಜನತೆ, ಹೆತ್ತವರಿಗೆ ಡ್ರಗ್ಸ್‌ ಬಗ್ಗೆ ನಿಮ್ಮ ಸಂದೇಶವೇನು?
ಡ್ರಗ್ಸ್‌ನಿಂದ ಉದ್ಯೋಗ, ಪಾಸ್‌ಪೋರ್ಟ್‌ ದೃಢೀಕರಣ ಸಹಿತ ಭವಿಷ್ಯ ದಲ್ಲಿ ಎಲ್ಲ ಹಂತಗಳಲ್ಲಿಯೂ ತೊಂದರೆ ಯಾಗಲಿದೆ. ಯುವ ಸಮುದಾಯ ತಾತ್ಕಾಲಿಕ ಸುಖಕ್ಕಾಗಿ ಇಡೀ ಭವಿಷ್ಯ ನಾಶ ಮಾಡಿಕೊಳ್ಳಬಾರದು. ವಿದ್ಯಾರ್ಥಿಗಳ ಹೆತ್ತವರು, ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯವರು ಮಾಹಿತಿಯನ್ನು ಮುಚ್ಚಿಟ್ಟರೆ ಅದರಿಂದ ಭವಿಷ್ಯದಲ್ಲಿ ತುಂಬಾ ಸಮಸ್ಯೆ ಯಾಗುತ್ತದೆ. ಡ್ರಗ್ಸ್‌ ಒಂದು ರೀತಿಯಲ್ಲಿ ಕ್ಯಾನ್ಸರ್‌ ನಂತೆ. ಡ್ರಗ್ಸ್‌ ಬಗ್ಗೆ ಯಾವುದೇ ರೀತಿಯ ಮಾಹಿತಿ ಇದ್ದರೆ ನೇರವಾಗಿ ನನಗೆ
(9480802301) ಅಥವಾ ಡಿಸಿಪಿ(9480802304)ಯವರಿಗೆ ಮಾಹಿತಿ ನೀಡಬಹುದು. ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

*ಕೋಮು ಸಾಮರಸ್ಯ ಬಲಗೊಳಿಸಬೇಕಾದ ಅಗತ್ಯವಿದೆ ಅನಿಸುತ್ತಿದೆಯೇ?
ಹೌದು. ಕೆಲವೊಮ್ಮೆ ಈ ಭಾಗದಲ್ಲಿ ಸಣ್ಣಪುಟ್ಟ ವಿಚಾರಗಳು ಕೂಡ ದೊಡ್ಡ ಸಂಘರ್ಷಕ್ಕೆ ತಿರುಗಿದ ದೃಷ್ಟಾಂತಗಳಿವೆ. ಹಾಗಾಗಿ ಪರಸ್ಪರ ಭಿನ್ನಾಭಿಪ್ರಾಯವಿದ್ದರೆ ಆರಂಭದಲ್ಲಿಯೇ ಮಾತುಕತೆ ನಡೆಸಿ ಅಪನಂಬಿಕೆ ದೂರ ಮಾಡಬೇಕು. ಸಂಘರ್ಷ ತಪ್ಪಿಸಿ ಸಾಮರಸ್ಯ ಮೂಡಿಸಬೇಕು. ಕೋಮುಸಾಮರಸ್ಯ ಕದಡಲು ಯತ್ನಿಸುವ ರೌಡಿಗಳು, ಕೋಮುಶಕ್ತಿಗಳ ವಿರುದ್ಧ ಗೂಂಡಾಕಾಯ್ದೆ, ಗಡಿಪಾರು ಮೊದಲಾದ ಕಠಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಹಬ್ಬಗಳ ಸಂದರ್ಭ ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲಿಯೂ
ಸಭೆಗಳನ್ನು ನಡೆಸುವುದು ಸೂಕ್ತ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಠಾಣೆಯ ಬದಲು ಪ್ರತೀ ಏರಿಯಾಗಳಲ್ಲಿಯೇ ಪೊಲೀಸರ ಸಹಭಾಗಿತ್ವದಲ್ಲಿ ಹೆಚ್ಚು ಹೆಚ್ಚು ಸಭೆಗಳನ್ನು ನಡೆಸಲು ಉದ್ದೇಶಿಸಿದ್ದೇವೆ.

Advertisement

*ಅಪಘಾತ, ನಿರ್ಲಕ್ಷ್ಯದ ಚಾಲನೆ ನಿಯಂತ್ರಣ ಹೇಗೆ?
ಅತೀವೇಗ, ನಿರ್ಲಕ್ಷ್ಯದ ಚಾಲನೆ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತಿದೆ. ಡ್ರೈವಿಂಗ್‌ ಲೈಸನ್ಸ್‌ ಅಮಾನತು ಮಾಡಲಾಗುತ್ತಿದೆ.

* ಸಂಚಾರದಟ್ಟಣೆ ನಿಯಂತ್ರಣ, ಸುಗಮ ಸಂಚಾರಕ್ಕೆ ಕ್ರಮ ಏನು?
ಈಗಾಗಲೇ ಮಂಗಳೂರು ನಗರದ ಪ್ರಮುಖ ಜಂಕ್ಷನ್‌, ಸಿಗ್ನಲ್‌ಗ‌ಳಲ್ಲಿ ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದ್ದೇನೆ. ಹಲವು ಪ್ರಸ್ತಾವನೆಗಳನ್ನು ಸಿದ್ಧಪಡಿಸಲಾಗಿದೆ. ಸ್ಮಾರ್ಟ್‌ ಸಿಟಿ ಕಾಮಗಾರಿಯಿಂದ ಆಗುತ್ತಿರುವ ತೊಡಕುಗಳು, ಹೆಚ್ಚುವರಿ ಟ್ರಾಫಿಕ್‌
ಸಿಗ್ನಲ್‌ ಲೈಟ್‌ ಅಳವಡಿಕೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿರುವುದನ್ನು ಗಮನಿಸಿದ್ದೇನೆ. ಮುಂದಿನ ವಾರದಲ್ಲಿ ಬಸ್‌ ಮಾಲಕರು, ಸಿಂಬಂದಿ, ಆಟೋರಿಕ್ಷಾ ಚಾಲಕ ಮಾಲಕರ ಸಭೆ ಕೂಡ ನಡೆಸಲಾಗುವುದು. ಕೆಲವೆಡೆ ಹೆಚ್ಚುವರಿಯಾಗಿ ಅಳವಡಿಸಿರುವ ಸಿಗ್ನಲ್‌ ಲೈಟ್‌ಗೆ ಹೆಚ್ಚಿನವರು ಹೊಂದಿಕೊಂಡಿದ್ದಾರೆ. ಇದರಿಂದ ಹಲವೆಡೆ ಸಂಚಾರ ಸುಗಮವಾಗಿದೆ. ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸಿಗ್ನಲ್‌ಗ‌ಳು ಅಗತ್ಯವಾಗಿದೆ. ಸಿಗ್ನಲ್‌ನಲ್ಲಿ ಸ್ವಲ್ಪ ನಿಂತರೂ ಸುರಕ್ಷಿತ ಸಂಚಾರ ಸಾಧ್ಯವಾಗುತ್ತದೆ ಎಂಬುದನ್ನು ಚಾಲಕರು ಮನಗಾಣಬೇಕು.

*ಜನಸ್ನೇಹಿ ಪೊಲೀಸಿಂಗ್‌’ ಪರಿಕಲ್ಪನೆ ಬಗ್ಗೆ…
ಈಗಾಗಲೇ ರಾಜ್ಯದ ಪೊಲೀಸ್‌ ಮಹಾನಿರ್ದೇಶಕರ ಆದೇಶದಂತೆ ಪ್ರತಿ ಠಾಣೆಗೂ ಕೆಲವರನ್ನು ಸಾರ್ವಜನಿಕರಂತೆ ತೆರಳಿ(ಡಿಕೋಯ್‌) ಅಲ್ಲಿ ಸಾರ್ವಜನಿಕರಿಗೆ ದೊರೆಯುವ ಸ್ಪಂದನೆಯ ಪರಿಶೀಲನೆ ನಡೆಸುವ ವ್ಯವಸ್ಥೆ ಜಾರಿಗೆ ಬಂದಿದೆ. ಇದರಿಂದ ಹಲವೆಡೆ ಸುಧಾರಣೆಯಾಗಿದೆ. ಮಂಗಳೂರಿನಲ್ಲಿಯೂ ಕ್ಯು ಆರ್‌ ಕೋಡ್‌ ಫೀಡ್‌ಬ್ಯಾಕ್‌, ಪೊಲೀಸ್‌ ಆಯುಕ್ತರ ಕಚೇರಿಯಿಂದ ಕರೆ ಮಾಡಿ ವಿಚಾರಣೆ ವ್ಯವಸ್ಥೆ ಜಾರಿಯಲ್ಲಿದೆ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸ್ಪಂದಿಸಲು ಪೊಲೀಸ್‌ ಸಿಬಂದಿಗೆ ತಿಳಿವಳಿಕೆ, ತರಬೇತಿ ನೀಡಲಾಗುತ್ತಿದೆ.

*ಮಂಗಳೂರಿನಲ್ಲಿ ಸೇವೆ ಸಲ್ಲಿಸಲು ಪೊಲೀಸರ ಆಸಕ್ತಿ ಎಷ್ಟಿದೆ?
ಇಲ್ಲಿ ಸೇವೆ ಸಲ್ಲಿಸಲು ಕೆಲವು ಮಂದಿ ಪೊಲೀಸ್‌ ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ಆ ರೀತಿಯಾಗಬಾರದು. ಇಲ್ಲಿ ಕೆಲವು ಸಮಸ್ಯೆಗಳಿರುವುದು ಹೌದು. ಆದರೆ ಅದನ್ನು ಪರಿಹರಿಸಬಹುದು. ಮಂಗಳೂರು ಉತ್ತಮ ನಗರ. ಅಧಿಕಾರಿಗಳು, ಸಂಘ – ಸಂಸ್ಥೆಗಳು, ಸಾರ್ವಜನಿಕರು ಎಲ್ಲರೂ ಒಂದೇ ಮನಸ್ಸಿನಿಂದ ಮುನ್ನಡೆದರೆ ಇದನ್ನು ಇನ್ನಷ್ಟು ಉತ್ತಮಗೊಳಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next