ಮಹಾನಗರ: ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಥಮ ಬಾರಿಗೆ ಎಂಬಂತೆ ಉರ್ವ ಮಾರು ಕಟ್ಟೆಯಲ್ಲಿ ಸ್ಥಾಪಿಸಿದ ಜೈವಿಕ ಅನಿಲ (ಬಯೋ ಗ್ಯಾಸ್) ಘಟಕ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದೆ ಪ್ರಯೋಜನಕ್ಕಿಲ್ಲದಂತಾಗಿದೆ. ಈ ಮೂಲಕ ಬಹುನಿರೀಕ್ಷಿತ ಯೋಜನೆ ಪಾಲಿಕೆಯ ನಿರ್ಲಕ್ಷéಕ್ಕೆ ತುತ್ತಾಗಿದೆ.
ಬಯೋಗ್ಯಾಸ್ ಮೂಲಕ ವಿದ್ಯುತ್ ಉತ್ಪಾದನೆಯ ಬಹುಕನಸಿನ ಯೋಜನೆ ಪಾಲಿಕೆ ವತಿಯಿಂದ 2011ರ ಸುಮಾರಿಗೆ ಮೂರ್ತ ಸ್ವರೂಪ ಪಡೆದಿತ್ತು. ಹಾಳಾದ ತರಕಾರಿ ಸಹಿತ ತ್ಯಾಜ್ಯಗಳನ್ನು ಬಳಸಿ ಬಯೋಗ್ಯಾಸ್ ಮೂಲಕ ಉತ್ಪತ್ತಿ ಮಾಡುವ ವಿದ್ಯುತ್ ಅನ್ನು ತನ್ನ ಘಟಕ, ಮಾರುಕಟ್ಟೆಗೆ ನೀಡುವುದರ ಜತೆಗೆ ಹತ್ತಿರದ ಕೆಲವೆಡೆ ಪೂರೈಸಲು ಯೋಚಿಸಲಾಗಿತ್ತು. ಇದಕ್ಕಾಗಿ ಸುಮಾ ರು 20 ರಿಂದ 25 ಲಕ್ಷ ರೂ.ಗಳಷ್ಟು ವೆಚ್ಚ ಮಾಡಲಾಗಿತ್ತು. ಆದರೆ ಈ ಘಟಕದಿಂದ ಸದ್ಯಕ್ಕೆ ಸಿಗುತ್ತಿರುವುದು ಘಟಕ ನಿರ್ವ ಹಣೆಗೆ ಬೇಕಾದಷ್ಟು ವಿದ್ಯುತ್ ಮಾತ್ರ !
ಮಂಗಳೂರು ಸೆಂಟ್ರಲ್ ಮಾರುಕಟ್ಟೆ ಯಲ್ಲಿ ದಿನಕ್ಕೆ ಸುಮಾರು 200 ಕೆಜಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು,ಅದನ್ನು ಉಪಯೋಗಿಸಿ ವಿದ್ಯುತ್ ತಯಾರಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಇದು ಕೆಲವು ಸಮಯ ವ್ಯವಸ್ಥಿತವಾಗಿ ನಡೆದರೆ, ದಿನ ಕಳೆದಂತೆ ಪಾಲಿಕೆಗೂ ನಿರಾಸಕ್ತಿ ಮೂಡಿ, ಯೋಜನೆ ಬಗ್ಗೆ ಮುತುವರ್ಜಿ ವಹಿಸಲು ಹೆಚ್ಚು ಗಮನನೀಡದೆ, ಬಹುನಿರೀಕ್ಷಿತ ಯೋಜನೆಯೊಂದು ನಿರ್ಲಕ್ಷéಕ್ಕೆ ಒಳಗಾಯಿತು. ಮೊದಲು ಘಟಕಕ್ಕೆ ವಿದ್ಯುತ್ ಬಳಕೆ ಮಾಡಿದ ಅನಂತರ ಹತ್ತಿರದ ಮಾರುಕಟ್ಟೆಗೆ ವಿದ್ಯುತ್ ನೀಡಲಾಗುತ್ತಿತ್ತು. ಆದರೆ, ಹಳೆಯ ಮಾರುಕಟ್ಟೆ ಹೋದ ಬಳಿಕ ಆ ಪ್ರಮಾಣ ಬಳಕೆಯಾಗುತ್ತಿಲ್ಲ. ಹಾಗಾಗಿ ಪ್ರಸ್ತುತ ಬಯೋಗ್ಯಾಸ್ ಘಟಕಕ್ಕೆ ಮಾತ್ರ ವಿದ್ಯುತ್ ಬಳಕೆಯಾಗುತ್ತಿದೆ.
ಈ ಮಧ್ಯೆ ಘಟಕಕ್ಕೆ ವಿದ್ಯುತ್ ಬಳಸಿದ ಅನಂತರ ಉಳಿದ ವಿದ್ಯುತ್ ಅನ್ನು ಮೆಸ್ಕಾಂ ಗ್ರಿಡ್‌ಗೆ ಸರಬರಾಜು ಮಾಡುವ ಬಗ್ಗೆ ಒಂದು ಸುತ್ತಿನ ಮಾತುಕತೆ ಆಗಿದೆಯೇ ಹೊರತು ಚರ್ಚೆ ಮುಗಿದಂತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ, “ಮೆಸ್ಕಾಂನವರ ಜತೆಗೆ ಮಾತುಕತೆ ನಡೆ ಯುತ್ತಿದೆ. ಎಲ್ಲವೂ ಅಂತಿಮ ಹಂತ ದಲ್ಲಿದೆ. ಶೀಘ್ರದಲ್ಲಿ ವಿದ್ಯುತ್ ಅನ್ನು ಮೆಸ್ಕಾಂ ಗ್ರಿಡ್‌ಗೆ ನೀಡಲಾಗುವುದು’ ಎನ್ನುತ್ತಾರೆ.
ಘಟಕದಲ್ಲಿ ಮೂರು ವಿಭಾಗಗಳಿವೆ. ಹತ್ತಿರದಲ್ಲಿ ಕಂಟ್ರೋಲ್ ರೂಂ ಇದೆ. ಇದರೊಳಗಡೆ ಟೇಬಲ್ ಮೂಲಕ ಮಾರುಕಟ್ಟೆಯ ಕೊಳೆಯುವಂತಹ ತರಕಾರಿ, ಸೊಪ್ಪು ಮತ್ತಿತರ ತ್ಯಾಜ್ಯಗಳನ್ನು ವಿಂಗಡಿಸಿ ತಂತ್ರಕ್ಕೆ ಹಾಕಲಾಗುತ್ತದೆ. ಅಲ್ಲಿ ಮಿಕ್ಸರ್ ಮೂಲಕ ಮಿಶ್ರಣಗೊಂಡು, ಪುಡಿಯಾಗಿ ಫ್ರೀ ಡೈಜೆಸ್ಟರ್ ಸೇರಿ ವಿವಿಧ ಹಂತಗಳಲ್ಲಿ ಅನಿಲವಾಗಿ ಮಾರ್ಪಾಡಾಗುತ್ತದೆ.
ಘಟಕ ತಾನು ಬಳಸಿದ ಬಳಿಕ ಉಳಿಯುವ ವಿದ್ಯುತ್ ಅನ್ನು ಮಾರುಕಟ್ಟೆ ಹಾಗೂ ಸುತ್ತಮುತ್ತಲ ಪ್ರದೇಶದ ವಿದ್ಯುತ್ ದೀಪಗಳಿಗೆ ಬಳಸಲು ಯೋಚಿಸಲಾಗಿತ್ತು. ಪ್ರತಿನಿತ್ಯ ಕನಿಷ್ಠ 8 ಗಂಟೆ 50ರಿಂದ 80ರಷ್ಟು ಬೀದಿ ದೀಪಗಳನ್ನು ಬೆಳಗಿಸಬಹುದು.
“ಲೋಪಸರಿಪಡಿಸಲು ಸೂಚನೆ’
ಉರ್ವ ಬಯೋಗ್ಯಾಸ್ ಘಟಕ ಸಮರ್ಪಕ ವಾಗಿಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಬಂದಿತ್ತು. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಲಾಗುವುದು. ಹಾಗೂ ಪ್ರಸ್ತುತ ಎದುರಾಗಿರುವ ಎಲ್ಲ ಲೋಪಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
- ಕವಿತಾ ಸನಿಲ್, ಮೇಯರ್, ಮಹಾನಗರ ಪಾಲಿಕೆ
“ಬಿಳಿಯಾನೆ ಸಾಕುವ ಪಾಲಿಕೆ’
ಲಕ್ಷಾಂತರ ರೂ. ಖರ್ಚು ಮಾಡಿ ಬಯೋಗ್ಯಾಸ್ ಘಟಕವನ್ನು ಉರ್ವದಲ್ಲಿ ಆರಂಭಿಸಲಾಗಿದೆ. ಆದರೆ, ಇದರಿಂದ ಏನು ಲಾಭವಾಗಿದೆ ಎಂಬುದಕ್ಕೆ ಉತ್ತರವಿಲ್ಲ. ಪ್ರತಿ ತಿಂಗಳು ಈ ಘಟಕದ ನಿರ್ವಹಣೆಗೆಂದು 40,000 ರೂ.ಖರ್ಚು ಮಾಡಲಾ ಗುತ್ತಿದೆ. 6 ವರ್ಷಗಳಿಂದ ಪಾಲಿಕೆ ದಂಡಕ್ಕೆ ತಿಂಗಳಿಗೆ 40 ಸಾವಿರ ಕೊಟ್ಟು ಬಿಳಿಯಾನೆ ಸಾಕಿದಂತಿದೆ.
– ಹನುಮಂತ ಕಾಮತ್, ಸಾಮಾಜಿಕ ಹೋರಾಟಗಾರರು
– ದಿನೇಶ್ ಇರಾ