Advertisement
ಶನಿವಾರ ಮಂಗಳೂರಿಗೆ ಭೇಟಿ ನೀಡಿದ ಅವರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಅ ಧಿಕಾರಿಗಳ ಸಭೆ ನಡೆಸಿ ಇದುವರೆಗಿನ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು.ಶನಿವಾರ ಇಡೀ ದಿನ ನಡೆದ ಸಭೆಯಲ್ಲಿ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಆಯುಕ್ತ ಡಾ| ಹರ್ಷ ಪಿ.ಎಸ್., ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಡಿಸಿಪಿಗಳಾದ ಅರುಣಾಂಶುಗಿರಿ ಮತ್ತು ಲಕ್ಷ್ಮೀಗಣೇಶ್ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.
Related Articles
ಗುಪ್ತಚರ ಇಲಾಖೆಯ ಮುನ್ಸೂಚನೆ ಮೇರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಮಂಗಳೂರಿನಲ್ಲಿ ಗಲಭೆ ನಡೆದಿದೆ. ಅದೇ ದಿನ ಹಾಗೂ ಅನಂತರದ ದಿನಗಳಲ್ಲಿ ಬೆಂಗಳೂರು ಸಹಿತ ರಾಜ್ಯದ ವಿವಿಧೆಡೆ ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆಗಳು ನಡೆದಿದ್ದರೂ ಮಂಗಳೂರಿನಲ್ಲಿ ಮಾತ್ರ ಗಲಭೆ ನಡೆಯಲು ಕಾರಣ ಏನು? ಪೊಲೀಸರು ಒಂದಿಷ್ಟು ಗಂಭೀರವಾಗಿ ಪರಿಗಣಿಸಿದ್ದರೆ ಗಲಭೆಯನ್ನು ಮಟ್ಟಹಾಕಲು ಸಾಧ್ಯವಿತ್ತೇ ಎನ್ನುವ ಜಿಜ್ಞಾಸೆಯನ್ನು ಎಡಿಜಿಪಿ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು ಎನ್ನಲಾಗಿದೆ.
Advertisement
ಕಠಿನ ಕ್ರಮಕ್ಕೆ ಸೂಚನೆಈಗಾಗಲೇ 20ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. 24ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಗಲಭೆಗೆ ಮುನ್ನ ಹಾಗೂ ಅನಂತರ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಿದ 50ಕ್ಕೂ ಅಧಿಕ ಜನರ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಕೇಸು ದಾಖಲಿಸಿದ್ದಾರೆ. ಇವುಗಳ ಬಗ್ಗೆ ಮಾಹಿತಿ ಪಡೆದುಕೊಂಡ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರು, ಸೂಕ್ತ ಸಾಕ್ಷ್ಯಾಧಾರಗಳು ಇದ್ದರೆ ಕಠಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು ಎಂದು ತಿಳಿದು ಬಂದಿದೆ. ಆಯಕಟ್ಟಿನ ಜಾಗದಲ್ಲಿ ಭದ್ರತೆ
ಶನಿವಾರ ಮಾಧ್ಯಮದ ಜತೆ ಮಾತನಾಡಿದ ಆಯುಕ್ತ ಡಾ| ಹರ್ಷ ಪಿ.ಎಸ್. ಅವರು ನೆಹರೂ ಮೈದಾನದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಮುಸ್ಲಿಂ ಸಂಘಟನೆಗಳು ಮುಂದೂಡಿವೆ. ಮುಂದಿನ ದಿನಾಂಕ ಹೇಳುವಂತೆ ಅವರಿಗೆ ಸೂಚಿಸಲಾಗಿದೆ. ಈಗಾಗಲೇ ಕಮಿಷನರೆಟ್ ವ್ಯಾಪ್ತಿಯ ಕೆಲವೆಡೆ ಪ್ರತಿಭಟನೆಗೆ ಅನುಮತಿ ನೀಡಲಾಗಿದೆ. ಜ. 12ರಂದು ಸಿಎಎ ಬೆಂಬಲಿಸಿ ಬಿಜೆಪಿ ಸಮಾವೇಶ ನಡೆಸುವುದಾಗಿ ತಿಳಿಸಿತ್ತು. ಅವರಿಗೂ ಸಮಾವೇಶ ಮುಂದೂಡುವ ಬಗ್ಗೆ ಗೃಹ ಸಚಿವರಲ್ಲಿ ಮನವಿ ಮಾಡಿದ್ದೇವೆ. ಈಗ ಮತ್ತೂಮ್ಮೆ ಈ ವಿಚಾರದಲ್ಲಿ ಅವರ ಗಮನಕ್ಕೆ ತರಲಾಗುವುದು. ಸದ್ಯ ಇಡೀ ಮಂಗಳೂರು ನಗರ ಶಾಂತವಾಗಿದೆ. ಆಯಕಟ್ಟಿನ ಜಾಗದಲ್ಲಿ ಬಿಗು ಪೊಲೀಸ್ ಭದ್ರತೆ ಮುಂದುವರಿಸಲಾಗಿದೆ. ಹಿಂಸಾಚಾರ ಘಟನೆಗೆ ಸಂಬಂಧಿಸಿ ಸ್ವತಂತ್ರ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಹಾಗಾಗಿ ತನಿಖೆ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ನೆಹರೂ ಮೈದಾನಕ್ಕೆ ಪೊಲೀಸ್ ಸರ್ಪಗಾವಲು
ಗೋಲಿಬಾರ್ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸೆಂಟ್ರಲ್ ಕಮಿಟಿ ಶನಿವಾರ ಪ್ರತಿಭಟನೆಗೆ ನೀಡಿದ್ದ ಕರೆಯನ್ನು ವಾಪಸ್ ಪಡೆದರೂ ಮುಂಜಾಗ್ರತಾ ಕ್ರಮವಾಗಿ ನೆಹರೂ ಮೈದಾನದ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಬೆಳಗ್ಗಿನಿಂದಲೇ ಸುಮಾರು 20 ಕೆಎಸ್‌ಆರ್‌ಪಿ ಪ್ಲಟೂನ್ ಪೊಲೀಸರು ಮೈದಾನ್ ಸುತ್ತ ಬಿಗಿ ಭದ್ರತೆಯನ್ನು ಕೈಗೊಂಡಿದ್ದರು. ಯಾವುದೇ ಕ್ಷಣದಲ್ಲಿ ಪ್ರತಿಭಟನಾಕಾರರು ಮೈದಾನ ಪ್ರವೇಶಿಸಿ ಪ್ರತಿಭಟನೆ ನಡೆಸಿ ಶಾಂತಿ ಕದಡುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಹಿನ್ನೆಲೆಯಲ್ಲಿ ಭದ್ರತೆ ಏರ್ಪಡಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.