ಮಂಗಳೂರು: ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕರು ಹಾಗೂ ಶಿಕ್ಷಕೇತರ ಉದ್ಯೋಗಿಗಳ ಪಿಂಚಣಿ ಮೊತ್ತ ಹಾಗೂ ಇನ್ನಿತರ ಸೌಲಭ್ಯಗಳನ್ನು ಕೂಡಲೇ ನೀಡಬೇಕು ಎಂದು ಮಂಗಳಾ ಅಲೂಮ್ನಿ ಅಸೋಸಿಯೇಶನ್ (ಮಾ) ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದೆ.
ಮಂಗಳೂರು ವಿವಿ ಹಳೆ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ದಿನೇಶ್ ಕುಮಾರ್ ಆಳ್ವ ಮಾತನಾಡಿ, ವಿ.ವಿ.ಯ ಒಟ್ಟು 30 ಮಂದಿಗೆ ವೇತನ ಮತ್ತು ಪಿಂಚಣಿ ನೀಡಲು ಬಾಕಿ ಇದೆ. ಎರಡೂವರೆ ವರ್ಷದಿಂದ ಈ ಸಮಸ್ಯೆ ಇದೆ. 30-40 ವರ್ಷಗಳಿಂದ ವಿದ್ಯಾರ್ಥಿಗಳ ಮತ್ತು ವಿ.ವಿ.ಯ ಏಳಿಗೆಯಲ್ಲಿ ದುಡಿದ ಅಧ್ಯಾಪಕರ ಮತ್ತು ಅಧ್ಯಾಪಕೇತರ ಸಿಬಂದಿಗೆ ಪಿಂಚಣಿ, ಭತ್ಯೆ ಮತ್ತು ಸೌಲಭ್ಯಗಳನ್ನು ಈ ಕೂಡಲೇ ನೀಡಬೇಕು ಎಂದರು.
ವಿ.ವಿ.ಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಪ್ರಾಧ್ಯಾಪಕರು ಮತ್ತು ಇತರ ನೌಕರರ ಬದುಕು ಬಹಳ ಕಷ್ಟದಾಯಕ. ಅವರ ನೆರವಿಗೆ ಬರುವುದು ಅಗತ್ಯವಾಗಿದೆ. ಮಂಗಳಾ ಅಲೂಮ್ನಿ ಅಸೋಸಿಯೇಶನ್ (ಮಾ) ವತಿಯಿಂದ ಈಗಾಗಲೇ ವಿ.ವಿ. ಕುಲಪತಿ, ಕರ್ನಾಟಕ ಸರಕಾರದ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳನ್ನು, ಸಚಿವರನ್ನು, ಸ್ಪೀಕರ್ ಅವರನ್ನು ಸಂಪರ್ಕಿಸಲಾಗಿದೆ. ಸಿಎಂ ಮತ್ತು ರಾಜ್ಯಪಾಲರಿಗೂ ಮನವಿಯನ್ನು ಕಳುಹಿಸಲಾಗಿದೆ ಎಂದರು.
ಕಾನೂನು ಹೋರಾಟ ಅನಿವಾರ್ಯ
ನಿವೃತ್ತ ಪ್ರಾಧ್ಯಾಪಕರು ಹಾಗೂ ಸಿಬಂದಿಯ ಸಮಸ್ಯೆ ಮುಂದಿನ 10 ದಿನಗಳಲ್ಲಿ ಬಗೆಹರಿಯದಿದ್ದರೆ ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸಿದ್ದೇವೆ ಎಂದು ದಿನೇಶ್ ಕುಮಾರ್ ಆಳ್ವ ಹೇಳಿದರು.
ಮಾ ಕಾರ್ಯಾಧ್ಯಕ್ಷ ಡಾ| ಶ್ರೀಪತಿ ಕಲ್ಲೂರಾಯ, ಸಂಘಟನ ಕಾರ್ಯ ದರ್ಶಿ ಡಾ| ಉಮ್ಮಪ್ಪ ಪೂಜಾರಿ, ಆಡಳಿತ ಮಂಡಳಿ ಸದಸ್ಯ ವೇಣು ಶರ್ಮ, ಪ್ರೊ| ಜಯಪ್ಪ, ಡಾ| ಪ್ರಭಾಕರ ನೀರುಮಾರ್ಗ ಉಪಸ್ಥಿತರಿದ್ದರು.