Advertisement

ಮಂಗಳೂರು ವಿ.ವಿ. ವಿಸಿ ಎಡಪಡಿತ್ತಾಯ ಪದಗ್ರಹಣ

11:34 AM Jun 04, 2019 | Team Udayavani |

ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಉಪ ಕುಲಪತಿಯಾಗಿ ವಿ.ವಿ.ಯ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರೊ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಸೋಮವಾರ ಅಧಿಕಾರ ಸ್ವೀಕರಿಸಿದರು.

Advertisement

ವಿ.ವಿ.ಯ ಎಂಕಾಂ ಮತ್ತು ಡಾಕ್ಟರೇಟ್‌ ಪದವಿಗಳ ಹಳೆ ವಿದ್ಯಾರ್ಥಿಯಾಗಿ, ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ನಿರ್ವಹಣೆ ಹಂತಹಂತವಾಗಿ ಹಣಕಾಸು ಅಧಿಕಾರಿ, ಪರೀಕ್ಷಾಂಗ ಕುಲಸಚಿವರಾಗಿ ಸೇವೆ ಸಲ್ಲಿಸಿ ಇದೀಗ ವಿ.ವಿ.ಯ 9ನೇ ಉಪ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಎಡಪಡಿತ್ತಾಯ ಅವರು ವಿ.ವಿ. ಇತಿಹಾಸದಲ್ಲಿ ಪ್ರಥಮ ಬಾರಿಗೆ ದ.ಕ. ಜಿಲ್ಲೆಯ ವ್ಯಕ್ತಿಯೊಬ್ಬರು ಅಧಿಕಾರ ಸ್ವೀಕರಿಸಿದಂತಾಗಿದೆ.

ಕೃಷಿ, ಆರ್ಚಕ ಕುಟುಂಬ
ಪುತ್ತೂರು ತಾಲೂಕು ಕೊಕ್ಕಡದ ಪಾಲಾರೆಯ ಅರ್ಚಕ ಕುಟುಂಬ ನಾರಾಯಣ ಎಡಪಡಿತ್ತಾಯ ಮತ್ತು ಭವಾನಿ ದಂಪತಿಯ ಪುತ್ರನಾಗಿರುವ ಸುಬ್ರಹ್ಮಣ್ಯ ಎಡಪಡಿತ್ತಾಯರು ಕೊಕ್ಕಡದ ಸರಕಾರಿ ಹಿ.ಪ್ರಾ.  ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಉಜಿರೆಯ ಎಸ್‌ಡಿಎಂನಲ್ಲಿ ಪದವಿಪೂರ್ವ ಬಿಕಾಂ ಪದವಿ ಪೂರೈಸಿದರು.

ಬಳಿಕ ವಿ.ವಿ.ಯ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಯಾಗಿ ಪ್ರಥಮ ರ್‍ಯಾಂಕ್‌ನೊಂದಿಗೆ ಮಂಗಳ  ಗಂಗೋತ್ರಿ ಪಯೋನೀರ್ ಚಿನ್ನದ ಪದಕದೊಂದಿಗೆ ಎಂ.ಕಾಂ ಪದವಿಯನ್ನು ಪೂರೈಸಿದ್ದರು.

1982ರಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿ ನಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದ ಅವರು ಬಳಿಕ ವಿ.ವಿ. ಯಲ್ಲಿ ವಿವಿಧ ಹುದ್ದೆಗಳಲ್ಲಿ 36 ವರ್ಷ ಕಾಲ ಬೋಧನೆ, ಸಂಶೋಧನೆ, ಆಡಳಿತ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಅವರು 1992 ರಲ್ಲಿ ಡಾಕ್ಟರೇಟ್‌ ಪದವಿಯನ್ನು ಮಂಗಳೂರು ವಿ.ವಿ. ಯಲ್ಲಿ ಪೂರೈಸಿದರು.

Advertisement

ವಿ.ವಿ.ಯ ಎಲ್ಲ ರಂಗದಲ್ಲೂ ಸೇವೆ
ಪ್ರೊ| ಪಿ.ಎಸ್‌. ಎಡಪಡಿತ್ತಾಯ ಅವರು ಮುಂಬಯಿಯ ಪ್ರತಿಷ್ಠಿತ ಎನ್‌ಐಟಿಐಇ ಸಂಸ್ಥೆಯಲ್ಲಿ ಒಂದು ವರ್ಷ ಮಾನವ ಸಂಪನ್ಮೂಲ ನಿರ್ವಹಣೆ ಶಾಸ್ತ್ರದಲ್ಲಿ ಸಹಪ್ರಾಧ್ಯಾಪಕರಾಗಿ, ತರಬೇತುದಾರ ಮತ್ತು ವ್ಯವಹಾರ ಆಡಳಿತ ತಜ್ಞರಾಗಿ ಸೇವೆ ಸಲ್ಲಿಸಿದ್ದು 22 ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.

ಕುಲಸಚಿವರಾಗಿ ಆಡಳಿತ ನಿರ್ವಹಣೆಯಲ್ಲಿ ಹೆಗ್ಗಳಿಕೆಯನ್ನು ಪಡೆದಿದ್ದ ಅವರ ಶೈಕ್ಷಣಿಕ ಮತ್ತು ಆಡಳಿತ ಸೇವೆ ಹಲವಾರು ಸಂಸ್ಥೆಗಳು ಗೌರವಿಸಿ, ಪ್ರಶಸ್ತಿಯನ್ನು ನೀಡಿವೆ.

ಈ ಸಂದರ್ಭ ಪ್ರೊ| ಎ.ಎಂ. ಖಾನ್‌, ಪರೀಕ್ಷಾಂಗ ಕುಲಸಚಿವ ಪ್ರೊ| ರವೀಂದ್ರಾಚಾರ್‌, ಹಣಕಾಸು ಅಧಿಕಾರಿ ಡಾ| ದಯಾನಂದ್‌ ನಾಯಕ್‌, ಕುಲಸಚಿವರ ಕಚೇರಿಯ ವಿಶೇಷ ಅಧಿಕಾರಿ ಪ್ರೊ| ನಾಗಪ್ಪ ಗೌಡ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕೇತರ ಸಿಬಂದಿ, ಮಂಗಳೂರು ವಿ.ವಿ. ಹಳೆ ವಿದ್ಯಾರ್ಥಿ ಸಂಘ (ಮಾ)ದ ಪದಾಧಿಕಾರಿಗಳು ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next