ಬೆಳಗಾವಿ: ಮಂಗಳೂರು ವಿ.ವಿ. ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಸರಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಐವನ್ ಡಿ’ಸೋಜಾ ಮನವಿ ಮಾಡಿದರು.
ಪರಿಷತ್ತಿನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು, ನಾಲ್ಕು ವರ್ಷದಿಂದ ವಿವಿಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಉಪಕುಲಪತಿಗಳು ಕೂಡ ಸರಕಾರಕ್ಕೆ ಪತ್ರ ಬರೆದು 36 ಕೋಟಿ ರೂ.ನೀಡುವಂತೆ ಮನವಿ ಮಾಡಿ¨ªಾರೆ ಎಂದು ಗಮನಕ್ಕೆ ತಂದರು.
ಈಗಾಗಲೇ ಮಂಗಳೂರು ವಿವಿಯಲ್ಲಿ ಅಧ್ಯಾಪಕರು, ಪ್ರಾಧ್ಯಾಪಕರು ಸೇರಿದಂತೆ 200 ಮಂದಿ ಆಡಳಿತ ಸಿಬಂದಿ ನಿವೃತ್ತರಾಗಿದ್ದಾರೆ. ಆದರೆ ಅವರಿಗೆ ನಿವೃತ್ತಿ ವೇತನದ ಉಪಧನ ನೀಡಲು ವಿವಿಯ ಬಳಿ ಅನುದಾನವಿಲ್ಲ ಎಂದು ಹೇಳಿದರು.
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮಂಗಳೂರು ವಿವಿಯ ನೆರವಿಗೆ ಸರಕಾರ ಧಾವಿಸಬೇಕು. ನಿವೃತ್ತ ಸಿಬಂದಿಗಳಿಗೆ ವೇತನ ನೀಡುವ ನಿಟ್ಟಿನಲ್ಲಿ ಆರ್ಥಿಕ ಸಹಾಯ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದರು.