ಮಹಾನಗರ: ರಾಜ್ಯದಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗುತ್ತಿದ್ದು, ಇದರಿಂದಾಗಿ ಪದವಿ, ಸ್ನಾತಕೋತ್ತರ ಪರೀಕ್ಷೆಯ ಬಳಿಕ ಮೌಲ್ಯಮಾಪನಕ್ಕೆ ಶಿಕ್ಷಕರಿಗೆ ಆಯಾ ಸೆಂಟರ್‌ಗಳಿಗೆ ತೆರಳುವುದು ಕಷ್ಟ. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಪದವಿ ಪರೀಕ್ಷೆ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಡಿಜಿಟಲೀಕರಣಗೊಳಿಸಲು ಮಂಗಳೂರು ವಿಶ್ವವಿದ್ಯಾನಿಲಯ ತೀರ್ಮಾನಿಸಿದೆ.
ಮಂಗಳೂರು ವಿವಿ ಪರೀಕ್ಷೆಗಳು ಸೆ. 16ರಿಂದ 30ರೊಳಗೆ ನಡೆಯಲಿದ್ದು, ಈಗಾಗಲೇ ಕೆಲವೊಂದು ಮಾರ್ಗ ಸೂಚಿಗಳನ್ನು ಪ್ರಕಟಿಸಿದೆ. ಪರೀಕ್ಷೆ ಮುಗಿದ ಬಳಿಕ ಶೀಘ್ರ ಫಲಿತಾಂಶ ಪ್ರಕಟಿಸಲು ಸಿದ್ಧತೆ ಆರಂಭಿಸಿದ್ದು, ಡಿಜಿಟಲ್ ವ್ಯವಸ್ಥೆ ಮೂಲಕ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ.
ಈಗಾಗಲೇ ಪ್ರಾಯೋಗಿಕವಾಗಿ ಎಂಬಿಎ 3ನೇ ಸೆಮಿಸ್ಟರ್‌ನ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಡಿಜಿಟಲ್ ವ್ಯವಸ್ಥೆಯ ಮೂಲಕ ನಡೆಸಿ ಯಶಸ್ವಿಯಾಗಿದೆ. ವಿ.ವಿ. ವ್ಯಾಪ್ತಿಯಲ್ಲಿ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳಿದ್ದು, ಪ್ರತಿಯೊಂದು ಜಿಲ್ಲೆಗಳಲ್ಲಿ ಒಂದೊಂದು ಕೇಂದ್ರವನ್ನು ಗುರುತಿಸಿ ಅಲ್ಲಿ ಒಂದು ಸ್ಕ್ಯಾನಿಂಗ್ ಸೆಂಟರ್ ಸ್ಥಾಪಿಸಿ ಮಲ್ಟಿ ಸ್ಕ್ಯಾನರ್‌ಗಳನ್ನು ಅಳವಡಿಸಲು ಕಾರ್ಯಪ್ರವೃತ್ತವಾಗಿದೆ.
ಈ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಆಯಾಯ ದಿನಗಳ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ. ಇದು ಇಂಟರ್‌ನೆಟ್‌ಗೆ ಹೋಗಿ ಡಿಜಿಟಲ್ ಫಾರ್ಮೆಟ್ ಆಗುತ್ತದೆ. ಬಳಿಕ ಸರ್ವರ್‌ನಲ್ಲಿ ಕಂಪ್ಯೂಟರ್ ರ್‍ಯಾಂಡಮೈಸೇಸನ್ ಮಾಡುತ್ತದೆ. ಪ್ರತಿಯೊಂದು ಜಿಲ್ಲೆಯಲ್ಲಿ ಸುಮಾರು 5ರಿಂದ 6 ಕಂಪ್ಯೂಟರ್ ಲ್ಯಾಬ್‌ಗಳನ್ನು ಗುರುತಿಸಲಾಗುತ್ತಿದ್ದು,, ಅಲ್ಲಿ ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನ ನಡೆಯುತ್ತದೆ. ಪರೀಕ್ಷೆಯಾದ ಕೆಲವೇ ದಿನ ಗಳೊಳಗೆ ಮೌಲ್ಯಮಾಪನ ಆಗಿ ಬಳಿಕ 48 ತಾಸಿನಲ್ಲಿ ಫಲಿತಾಂಶ ಪ್ರಕಟಿಸಲು ಸಾಧ್ಯವಾಗುತ್ತದೆ.
ಡಿಜಿಟಲ್ ಮೌಲ್ಯಮಾಪನಕ್ಕೆ ಕೆಲವು ಕಡೆಗಳಲ್ಲಿ ಇಂಟರ್‌ನೆಟ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅತ್ಯಾಧುನಿಕ ದರ್ಜೆಯ ಕಂಪ್ಯೂಟರ್ ವ್ಯವಸ್ಥೆ ಮತ್ತು ಇಂಟರ್‌ನೆಟ್ ಸಂಪರ್ಕದ ಆವಶ್ಯಕತೆ ಇದೆ. ಆದರೆ ಕೊಡಗು ಭಾಗದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ಕೆಲವು ಕಡೆಗಳಲ್ಲಿ ಇಂಟರ್‌ನೆಟ್ ವ್ಯವಸ್ಥೆ ಸ್ಥಗಿತಗೊಂಡಿದೆ. ಸೆಪ್ಟಂಬರ್ ಅಥವಾ ಅಕ್ಟೋಬರ್‌ನಲ್ಲಿ ಮೌಲ್ಯಮಾಪನ ನಡೆಯುವುದರಿಂದ ಆ ವೇಳೆ ಇಂಟರ್‌ನೆಟ್ ಸಮಸ್ಯೆ ಸರಿಹೋಗಬಹುದು ಎಂಬ ವಿಶ್ವಾಸ ವಿಶ್ವವಿದ್ಯಾನಿಲಯಕ್ಕಿದೆ.
ಕೊಡಗು ಭಾಗದ ಬೇಡಿಕೆ ಈಡೇರಿಕೆ
ಕೊಡಗು ಭಾಗದ ಶಿಕ್ಷಕರಿಗೆ ಮೌಲ್ಯಮಾಪನಕ್ಕೆಂದು ನೂರಾರು ಕಿ.ಮೀ. ಕ್ರಮಿಸಿ ಮಂಗಳೂರು ಅಥವಾ ಉಡುಪಿಗೆ ಬರುವುದು ತ್ರಾಸದಾಯಕ. ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಮೌಲ್ಯಮಾಪನಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆ ಕೊಡಗು ಭಾಗದ ಶಿಕ್ಷಕರದ್ದಾಗಿತ್ತು. ಇದೀಗ ಡಿಜಿಟಲ್ ಮೌಲ್ಯಮಾಪನಕ್ಕೆ ಒಪ್ಪಿಗೆಯಾದರೆ, ಆ ಭಾಗದ ಶಿಕ್ಷಕರು ತಮ್ಮದೇ ಜಿಲ್ಲೆಯ ಕಂಪ್ಯೂಟರ್ ಲ್ಯಾಬ್‌ಗಳಲ್ಲಿ ಮೌಲ್ಯಮಾಪನ ನಡೆಸಲು ಸಹಕಾರಿಯಾಗಲಿದೆ.
ಡಿಜಿಟಲ್‌ಗೆ ಒತ್ತು
ವಿ.ವಿ.ಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯ ಮಾಪನಕ್ಕೆ ಯೋಚಿಸಲಾಗಿದೆ. ಇದರಿಂದ ಪರೀಕ್ಷೆ ಮುಗಿದ ಬಳಿಕ ಶೀಘ್ರ ಫಲಿತಾಂಶ ಪ್ರಕಟಿಸಲು ಸಹಕಾರಿಯಾಗುತ್ತದೆ. ದ.ಕ., ಉಡುಪಿ, ಕೊಡಗು ಜಿಲ್ಲೆಗಳ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಮೌಲ್ಯಮಾಪನ ನಡೆಸಲಾಗುತ್ತದೆ. ಈ ನಿಟ್ಟಿನಲ್ಲಿ ವಿ.ವಿ. ಕಾರ್ಯಪ್ರವೃತ್ತವಾಗಿದೆ.
– ಪಿ.ಎಸ್. ಯಡಪಡಿತ್ತಾಯ, ಮಂಗಳೂರು ವಿ.ವಿ. ಕುಲಪತಿ