ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯಲ್ಲಿ ಹಲವು ಕೋರ್ಸ್ ಗಳಿಗೆ ಬೇಡಿಕೆ ಕುಸಿದು ದಾಖಲಾತಿ ಕಡಿಮೆ ಆಗಿರುವ ಕಾರಣ ಮುಂದಿನ 10 ವರ್ಷಗಳನ್ನು ಗಮನದಲ್ಲಿರಿಸಿ ಕೆಲವು ಹೊಸ ಕೋರ್ಸ್‌ಗಳನ್ನು ಆರಂಭಿಸಲು ವಿ.ವಿ. ನಿರ್ಧರಿಸಿದೆ.
ಪ್ರಸ್ತುತ ಆರೋಗ್ಯ, ಸೈಬರ್ ಮತ್ತು ಹಣಕಾಸು ಸಂಬಂಧಿ ವಿಷಯಗಳಿಗೆ ಹೆಚ್ಚು ಬೇಡಿಕೆ ಇದ್ದು, ಇದಕ್ಕೆ ಪೂರಕವಾದ ಹಲವು ಹೊಸ ಕೋರ್ಸ್ ಗಳನ್ನು ಆರಂಭಿಸುವತ್ತ ಚಿಂತನೆ ನಡೆಸಿದೆ.
ಎಂಬಿಎ (ಹೆಲ್ತ್ ಸೇಫ್ಟಿ ಆ್ಯಂಡ್ ಎನ್‌ವಿರಾನ್ ಮೆಂಟ್- ಇಂಟಿಗ್ರೇಟೆಡ್), ಎಂ.ಕಾಂ. (ಬ್ಯುಸಿನೆಸ್ ಡಾಟಾ ಅನಾಲಿಸಿಸ್-ಇಂಟಿ ಗ್ರೇಟೆಡ್), ಎಂ.ಪಿ.ಎಚ್. (ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್), ಎಂಎಸ್‌ಸಿ ಮಾಲೆಕ್ಯುಲಾರ್ ಬಯಾಲಜಿ, ಎಂ.ಎಸ್‌ಸಿ. ಎಲೆಕ್ಟ್ರಾನಿಕ್ಸ್ (ಇಂಟಿ ಗ್ರೇಟೆಡ್), ಎಂ.ಎಸ್‌ಸಿ. ಡಾಟಾ ಸೈನ್ಸ್, ಪಿ.ಜಿ. ಡಿಪ್ಲೊಮಾ ಇನ್ ಲಾ, ಪಿ.ಜಿ. ಡಿಪ್ಲೊಮಾ ಇನ್ ಸೈಬರ್ ಸೆಕ್ಯುರಿಟಿ, ಬಿ.ಎಸ್‌ಸಿ. (ವಿಶ್ಯುವಲ್ ಕಮ್ಯುನಿಕೇಶನ್), ಬಿ.ಕಾಂ. (ಫೈನಾನ್ಶಿಯಲ್ ಅಕೌಂಟಿಂಗ್), ಬಿ.ಕಾಂ. (ಅಪ್ರಂಟಿಸ್‌ಶಿಪ್/ಇಂಟರ್‌ಶಿಪ್ ಎಂಬೆಡೆಡ್), ಬಿ.ಬಿ.ಎ. (ಲಾಜಿಸ್ಟಿಕ್ಸ್) ಮುಂತಾದ ಕೋರ್ಸ್ ಗಳನ್ನು ಮುಂದಿನ ವರ್ಷದಿಂದ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ಮುಂದಿನ ವಿ.ವಿ. ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಲಿದೆ.
ಮಂಗಳೂರು ವಿ.ವಿ.ಯ ದಾಖಲಾತಿ ಪರಿಶೀಲನೆ ಸಮಿತಿಯ ವರದಿ ಪ್ರಕಾರ ಈಗ ಇರುವ ಕೆಲವು ಕೋರ್ಸ್‌ಗಳಿಗೆ ಬೇಡಿಕೆ ಕುಸಿದಿದೆ. ಹೀಗಾಗಿ ಕೆಲವು ಹೊಸ ಕೋರ್ಸ್ ಮತ್ತು ಸದ್ಯ ಇರುವ ಕೋರ್ಸ್‌ಗಳಿಗೆ ಹೊಸ ಸಂಯೋಜನೆ ಸೇರ್ಪಡೆ ಮಾಡುವ ಮೂಲಕ ಆಕರ್ಷಕ ಮತ್ತು ಪ್ರಸ್ತುತಗೊಳಿಸಲು ನಿರ್ಧರಿಸಿದೆ. ಕೊರೊನಾ ಸಹಿತ ಆರೋಗ್ಯ ಕ್ಷೇತ್ರದಲ್ಲಿ ಹೊಸ ಬದಲಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ ಕೋರ್ಸ್ ಆರಂಭಿಸಲು ತೀರ್ಮಾನಿಸಲಾಗಿದೆ. ಇದು ಸ್ನಾತಕೋತ್ತರ ಕೋರ್ಸ್ ಆಗಿದ್ದು, 2 ವರ್ಷ, 4 ಸೆಮಿಸ್ಟರ್ ಒಳಗೊಳ್ಳಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಡಿ ಹೊಸ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್ ಆರಂಭಕ್ಕೂ ವಿ.ವಿ. ಒಲವು ವ್ಯಕ್ತಪಡಿಸಿದೆ.
ವಿಧಿ ವಿಜ್ಞಾನಕ್ಕೆ ಬಹು ಬೇಡಿಕೆ!
ಸೈಬರ್ ಅಪರಾಧ ಪ್ರಕರಣ ಹೆಚ್ಚುತ್ತಿರುವ ಕಾರಣ ವಿ.ವಿ.ಯು “ಸೈಬರ್ ಸೆಕ್ಯುರಿಟಿ ಎಂಎಸ್‌ಇ’ ಕೋರ್ಸ್ ಆರಂಭಿಸಲಿದ್ದು, ಪಿ.ಜಿ. ಡಿಪ್ಲೊಮಾ ಇನ್ ಸೈಬರ್ ಸೆಕ್ಯುರಿಟಿ ಆರಂಭಕ್ಕೂ ಚಿಂತನೆ ನಡೆಸಿದೆ. ವಿಶೇಷವಾಗಿ ವಿಧಿ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ಗೆ ಬೇಡಿಕೆ ಕೇಳಿಬಂದಿದೆ. ಹೀಗಾಗಿ “ಬಿ.ಎಸ್‌ಸಿ. ಫಾರೆನ್ಸಿಕ್ ಸೈನ್ಸ್’ ಆರಂಭಕ್ಕೆ ವಿ.ವಿ. ಚಿಂತಿಸಿದೆ. ಪೊಲೀಸ್ ಇಲಾಖೆ ಸಹಕಾರ ಮತ್ತು ಸಮರ್ಥ ಲ್ಯಾಬ್ ಇದ್ದರೆ ಈ ಕೋರ್ಸ್ ನಡೆಸಲು ಕಾಲೇಜುಗಳಿಗೆ ಅವಕಾಶ ನೀಡುವ ಬಗ್ಗೆ ವಿ.ವಿ. ಆಲೋಚಿಸಿದೆ.
ಕಾಲೇಜುಗಳಲ್ಲಿ ಕೆಲವು ಕೋರ್ಸ್ ಗಳಿಗೆ ವಿದ್ಯಾರ್ಥಿ ಗಳಿಂದ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆ ಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಕೋರ್ಸ್ ಗಳನ್ನು ಆರಂಭಿ ಸುವ ಬಗ್ಗೆ ಚಿಂತನೆ ನಡೆಸ ಲಾಗಿದೆ. ಪ್ರಸಕ್ತ ಸಮಾಜಕ್ಕೆ ಅಗತ್ಯ ವಿರುವ ಮತ್ತು ಬೇಡಿಕೆಯ ಕೋರ್ಸ್ ಗಳನ್ನು ಪರಿಚಯಿಸುವ ನಿಟ್ಟಿ ನಲ್ಲಿ ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
-ಪ್ರೊ| ಪಿ.ಎಸ್. ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿ.ವಿ.
- ದಿನೇಶ್ ಇರಾ