ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಕೆಥೋಲಿಕರು ಮಾ. 24ರಂದು ಗರಿಗಳ ರವಿವಾರ (ಪಾಮ್ ಸಂಡೇ) ಆಚರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಚರ್ಚ್‌ಗಳಲ್ಲಿ ವಿಶೇಷ ಆಚರಣೆ, ಬಲಿಪೂಜೆ ನಡೆಸಲಾಗುತ್ತಿದೆ. ಮುಂದಿನ 1 ವಾರ ಆಚರಿಸಲಾಗುವ ಪವಿತ್ರ ಸಪ್ತಾಹ ಇಲ್ಲಿಂದ ಆರಂಭಗೊಳ್ಳುತ್ತದೆ.
ಗರಿಗಳ ರವಿವಾರದ ಹಿನ್ನೆಲೆ
ಬೈಬಲ್ ವಿವರಿಸುವ ಪ್ರಕಾರ ಯಹೂದಿಯರ ಕಾಲದಲ್ಲಿ ಪಾಸ್ಕಾ ಪ್ರಮುಖ ಹಾಗೂ ಜನಪ್ರಿಯ ಹಬ್ಬ. ಇದರ ಆಚರಣೆಯಲ್ಲಿ ಭಾಗವಹಿಸಲು ಯಹೂದಿಗಳು ಜೆರುಸಲೆಂಗೆ ತೆರಳುವುದು ವಾಡಿಕೆ. ಯೇಸು ಕ್ರಿಸ್ತರು ತನ್ನ ಅನುಯಾಯಿಗಳೊಂದಿಗೆ ಜೆರುಸಲೆಂಗೆ ತೆರಳುತ್ತಾರೆ. ಕ್ರಿಸ್ತರ ಪವಾಡಗಳನ್ನು ಕಣ್ಣಾರೆ ಕಂಡವರು ಹಾಗೂ ಅವರಿಂದ ಗುಣಮುಖರಾದವರು ಕ್ರಿಸ್ತರನ್ನು ಬಟ್ಟೆಗಳು ಹಾಸಿ ಹಾಗೂ “ಒಲಿವ್’ ಮರದ ಗರಿಗಳನ್ನು ಹಿಡಿದು ಅದ್ದೂರಿ ಹಾಗೂ ವೈಭವದಿಂದ ಸ್ವಾಗತಕೋರುತ್ತಾರೆ. ಇದನ್ನು ನೆನಪಿಸಿಕೊಂಡು ಗರಿಗಳ ರವಿವಾರ ಆಚರಿಸಲಾಗುತ್ತಿದೆ.
ರವಿವಾರ ಬೆಳಗ್ಗೆ ಬಲಿಪೂಜೆಗೂ ಮೊದಲು ಚರ್ಚ್ ಆವರಣದಲ್ಲಿ ಧರ್ಮಗುರುಗಳು ಬೈಬಲ್‌ನಲ್ಲಿರುವ ಈ ಸನ್ನಿವೇಶವನ್ನು ಸ್ಮರಿಸಿ ಸಂದೇಶ ನೀಡುತ್ತಾರೆ. ಭಕ್ತರು ತಂದ ತೆಂಗಿನ ಗರಿಗಳನ್ನು ಆಶೀರ್ವದಿಸಿ ಭಕ್ತರಿಗೆ ಹಂಚಿ ಬಳಿಕ ಧರ್ಮಗುರುಗಳ ಜತೆಯಾಗಿ ಭಕ್ತರು ಕ್ರಿಸ್ತರಿಗೆ ಜೈಕಾರ ಕೂಗುತ್ತ ಮೆರವಣಿಗೆ ನಡೆಸುತ್ತಾರೆ. ಚರ್ಚ್‌ನಲ್ಲಿ ಬಲಿಪೂಜೆಯ ವೇಳೆ ಕ್ರಿಸ್ತರ ಕಷ್ಟಗಳ ಕಥನವನ್ನು ನೆನಪಿಸಲಾಗುತ್ತದೆ.