Advertisement

ಮಂಗಳೂರು-ಮಂತ್ರಾಲಯ ನಾನ್‌ ಎಸಿ ಸ್ಲೀಪರ್ ಕೆಎಸ್‌ಆರ್‌ಟಿಸಿ ಬಸ್‌ಗೆ ಚಾಲನೆ

05:49 PM Jan 14, 2021 | Team Udayavani |

ಮಂಗಳೂರು: ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಉಡುಪಿ ಮಾರ್ಗವಾಗಿ ಮಂತ್ರಾಲಯಕ್ಕೆ ನಾನ್‌ ಎಸಿ ಸ್ಲೀಪರ್ ನೂತನ ಸಾರಿಗೆಗೆ ಗುರುವಾರದಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ.ವೇದವ್ಯಾಸ ಕಾಮತ್‌ ಅವರು ಚಾಲನೆ ನೀಡಿದರು.

Advertisement

ನೂತನ ಬಸ್‌ ಮಂಗಳೂರು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ ಮಧ್ಯಾಹ್ನ 3.30ಕ್ಕೆ ಹೊರಡಲಿದ್ದು, 4.45ಕ್ಕೆ ಉಡುಪಿ, 5.30ಕ್ಕೆ ಕುಂದಾಪುರ ಮುಖೇನ ಮರುದಿನ ಬೆಳಗ್ಗೆ 6 ಗಂಟೆಗೆ ಮಂತ್ರಾಲಯಕ್ಕೆ ತಲುಪಲಿದೆ. ಮಂತ್ರಾಲಯದಿಂದ ಸಂಜೆ 5.30ಕ್ಕೆ ಹೊರಟ ಬಸ್‌ ಮರುದಿನ ಬೆಳಗ್ಗೆ 8.30ಕ್ಕೆ ಮಂಗಳೂರು ಬಸ್‌ ನಿಲ್ದಾಣ ತಲುಪಲಿದೆ.

ಮಂಗಳೂರಿನಿಂದ ಮಂತ್ರಾಲಯಕ್ಕೆ ಒಬ್ಬ ಪ್ರಯಾಣಿಕನಿಗೆ 950 ರೂ., ಉಡುಪಿಯಿಂದ 900 ರೂ., ಕುಂದಾಪುರದಿಂದ 850 ರೂ. ಮತ್ತು ಮಂಗಳೂರಿನಿಂದ ಬಳ್ಳಾರಿಗೆ 750 ರೂ. ನಿಗದಿಪಡಿಸಲಾಗಿದೆ. ಈ ಬಸ್ಸು ಉಡುಪಿ, ಕುಂದಾಪುರ, ಹಾಲಾಡಿ, ಸಿದ್ದಾಪುರ, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಶಿವಮೊಗ್ಗ, ಚೆನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ, ಚಳ್ಳೆಕೆರೆ, ರಾಂಪುರ, ಬಳ್ಳಾರಿ, ಆಲೂರು, ಆದೋನಿ ಮಾಧವರಂ ಕ್ರಾಸ್‌ ಮಾರ್ಗವಾಗಿ ಮಂತ್ರಾಲಯ ಸಂಚರಿಸಲಿದೆ.

ಇದನ್ನೂ ಓದಿ:ಮಕ್ಕಳ ಅಪಹರಣ ಯತ್ನ ವದಂತಿ, ಜನರಲ್ಲಿ ಆತಂಕ: ಕಂಕನಾಡಿ ಪೊಲೀಸರಿಂದ ಪರಿಶೀಲನೆ

ನೂತನ ಬಸ್‌ಗೆ ಚಾಲನೆ ನೀಡಿದ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಮಂಗಳೂರು-ಮಂತ್ರಾಲಯ ನಡುವಣ ಬಸ್‌ ಸಂಚಾರ ಆರಂಭಿಸಬೇಕು ಎಂಬುವುದು ಪ್ರಯಾಣಿಕರ ಹಲವು ವರ್ಷಗಳ ಬೇಡಿಕೆ ಆಗಿತ್ತು ಇದೀಗ ಆ ಕನಸು ಈಡೇರುತ್ತಿದ್ದು, ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು. ಮಂಗಳೂರು ವಿಭಾಗಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳ ಇತ್ಯರ್ಥಕ್ಕೆ ನಾನು ಮತ್ತು ಮೇಯರ್‌ ಸೇರಿ ಕೆಲ ದಿನಗಳಲ್ಲಿ ಸಭೆ ನಡೆಸಲಿದ್ದೇವೆ ಎಂದರು.

Advertisement

ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್‌ ಕುಮಾರ್‌ ಮಾತನಾಡಿ, ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮದ ವತಿಯಿಂದ ಸುರಕ್ಷಿತ ಸೇವೆ ಒದಗಿಸುತ್ತಿದ್ದೇವೆ. ಕೊರೊನಾ ಹಿನ್ನೆಲೆಯಲ್ಲಿ ಕೆಲವೊಂದು ಅನುಸೂಚಿಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಒಟ್ಟು 540 ಅನುಸೂಚಿಯಲ್ಲಿ 420 ಅಸುಸೂಚಿ ಕಾರ್ಯಾಚರಿಸುತ್ತಿದೆ. ಮಂಗಳೂರು ಮೂಡುಬಿದಿರೆ ನಡುವಣ ರೂಟ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಕರಣ ನ್ಯಾಯಾಲಯದಲ್ಲಿದೆ. ತೀರ್ಮಾನಗೊಂಡ ಬಳಿಕ ಕಾರ್ಯಾಚರಣೆ ನಡೆಸಲಾಗುವುದು. ಮಂಗಳೂರಿನಿಂದ ಮುಂಬೈಗೆ ಸದ್ಯ ಯಾವುದೇ ಬಸ್‌ ಕಾರ್ಯಾಚರಣೆ ನಡೆಸುತ್ತಿಲ್ಲ. ಆದರೆ, ಪುಣೆಗೆ ನಾನ್‌ ಎಸಿ ಸ್ಲೀಪರ್ ಕಾರ್ಯಾಚರಿಸುತ್ತಿದೆ. ಸರಕಾರದ ವತಿಯಿಂದ ಇತ್ತೀಚೆಗೆ 63 ವಾಹನಗಳು ಬಂದಿವೆ. ವಿವಿಧ ರೂಟ್‌ಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ಕೋವಿಡ್ ಲಸಿಕಾ ಕೇಂದ್ರದಲ್ಲಿ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರಿನಿಂದ ವಿವಿಧ ಮಾರ್ಗಗಳಿಗೆ ನೂತನವಾಗಿ ಬಸ್‌ ಕಾರ್ಯಾಚರಣೆ ಆರಂಭಗೊಂಡಿದ್ದು, ಮಂಗಳೂರಿನಿಂದ ರಾತ್ರಿ 8.50ಕ್ಕೆ ಹೊರಟು ಹಾಸನ ಬೆಂಗಳೂರು ಮಾರ್ಗವಾಗಿ ತಿರುಪತಿಗೆ ಕ್ಲಬ್‌ ಕ್ಲಾಸ್‌ ವೋಲ್ವೋ, ಮಂಗಳೂರಿನಿಂದ ರಾತ್ರಿ 9 ಗಂಟೆಗೆ ದೇರಳಕಟ್ಟೆ, ಕಾಸರಗೋಡು, ಕೋಜಿಕೋಡ್‌ ಮಾರ್ಗವಾಗಿ ಎರ್ನಾಕುಲಂಗೆ ಕ್ಲಬ್‌ ಕ್ಲಾಸ್‌ ವೋಲ್ವೋ, ಮಂಗಳೂರಿನಿಂದ ರಾತ್ರಿ 8.01ಕ್ಕೆ ಕುಂದಾಪುರ, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ನಾನ್‌ ಎಸಿ ಸ್ಲೀಪರ್‌, ಮಂಗಳೂರು ಬಸ್‌ ನಿಲ್ದಾಣದಿಂದ ರಾತ್ರಿ 8.01ಕ್ಕೆ ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಮಾರ್ಗವಾಗಿ ರಾಯಚೂರಿಗೆ ನಾನ್‌ ಎಸಿ ಸ್ಲೀಪರ್‌, ಮಂಗಳೂರಿನಿಂದ ಸಂಜೆ 5 ಗಂಟೆಗೆ ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಮಾರ್ಗವಾಗಿ ಬಳ್ಳಾರಿಗೆ ನಾನ್‌ ಎಸಿ ಸ್ಲೀಪರ್‌, ಮಂಗಳೂರಿನಿಂದ ಸಂಜೆ 7.45ಕ್ಕೆ ಬಜ್ಪೆ, ಕಟೀಲು, ಕಿನ್ನಿಗೋಳಿ, ಮೂಡುಬಿದಿರೆ, ವೇಣೂರು, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಮಾರ್ಗವಾಗಿ ಬೆಂಗಳೂರಿಗೆ ನಾನ್‌ ಎಸಿ ಸ್ಲೀಪರ್ ಮತ್ತು ಮಂಗಳೂರುನಿಂದ ಸಂಜೆ 7.31ಕ್ಕೆ ವಾಮಂಜೂರು, ಗಂಜಿಮಠ, ಗುರುಪುರ, ಮೂಡುಬಿದಿರೆ, ವೇಣೂರು, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಮಾರ್ಗವಾಗಿ ಬೆಂಗಳೂರಿಗೆ ರಾಜಹಂಸ ಕಾರ್ಯಾಚರಣೆ ನಡೆಸಲಿದೆ ಎಂದು ವಿವರಿಸಿದರು.

ಇದೇ ವೇಳೆ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದ ಸಂಚಾರಾಧಿಕಾರಿ ಕಮಲ್‌ ಕುಮಾರ್‌, ಮಂಗಳೂರು 2ನೇ ಘಟಕದ ಹಿರಿಯ ವ್ಯವಸ್ಥಾಪಕ ನಾಗೇಶ್‌ ಪ್ರಸನ್ನ, ಮಂಗಳೂರು 1ನೇ ಘಟಕದ ಹಿರಿಯ ವ್ಯವಸ್ಥಾಪಕ ದಿವಾಕರ್‌, ಸಹಾಯಕ ಸಂಚಾರ ಅಧೀಕ್ಷಕ ಮಂಜುನಾಥ್‌, ಸಹಾಯಕ ಸಂಚಾರ ವ್ಯವಸ್ಥಾಪಕರಾದ ನಿರ್ಮಲಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next