Advertisement
ಗುರುವಾರ ರಾತ್ರಿ ಗುಡುಗು, ಮಿಂಚಿನೊಂದಿಗೆ ನಗರಾದ್ಯಂತ ಭಾರೀ ಮಳೆಯಾಗಿತ್ತು. ಪರಿಣಾಮವಾಗಿ ನಗರದ ಬಾಬುಗುಡ್ಡೆಯಲ್ಲಿ ಬೃಹತ್ ಮಾವಿನ ಮರ ಉರುಳಿ ಬಿದ್ದಿದೆ. ಮರದ ಕೆಳಗೆ ನಿಲ್ಲಿಸಿದ್ದ ನಾಲ್ಕು ಕಾರುಗಳು ಜಖಂಗೊಂಡಿವೆ. ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ ಫಾರ್ಮರ್‌ಗೂ ಹಾನಿಯಾಗಿದೆ. ಘಟನೆ ನಡೆದಿರುವುದು ಗುರುವಾರ ತಡರಾತ್ರಿಯಾದ ಪರಿಣಾಮ ಜನಸಂಚಾರ ಇರಲಿಲ್ಲ. ಇದರಿಂದಾಗಿ ಸಾವು-ನೋವು ಉಂಟಾಗಿಲ್ಲ. ಘಟನೆಯ ಬಳಿಕ ಸುತ್ತುಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಮೆಸ್ಕಾಂ ಸಿಬಂದಿ ತುರ್ತು ದುರಸ್ತಿ ಕಾರ್ಯಗಳಲ್ಲಿ ತೊಡಗಿಕೊಂಡರು. ಶುಕ್ರವಾರ ಬೆಳಗ್ಗೆ ಸುಮಾರು 7.45ರ ವೇಳೆ ಅಗ್ನಿಶಾಮಕ ಸಿಬಂದಿ ಉರುಳಿದ ಮರವನ್ನು ತೆರವುಗೊಳಿಸಿದರು. ಪಾಂಡೇಶ್ವರ ಅಗ್ನಿ ಶಾಮಕ ಠಾಣೆಯ ಠಾಣಾಧಿಕಾರಿ ವಸಂತ ಗೌಡ, ಸಿಬಂದಿಗಳಾದ ಸುಧೀರ್, ದೀಪಕ್, ಸತೀಶ್, ಸುರೇಶ್ ಶೆಟ್ಟಿ, ಸುರೇಶ್ ಪಟಗಾರ ಹಾಗೂ ಸಂತೋಷ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
ಮಳೆಗಾಲ ಸಮೀಪಿಸುತ್ತಿರುವುದರಿಂದ ಮಂಗಳೂರು ಮನಪಾ ಹಾಗೂ ಜಿಲ್ಲಾಡಳಿತ ಮಳೆ ಅವಾಂತರಗಳನ್ನು ತಡೆಯಲು ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಅಪಾಯಕಾರಿ ಎಂದೆನಿಸುವ ಮರ ಗಳನ್ನು ಕಡಿಸುವ, ಇಲ್ಲವೇ ಕೊಂಬೆ ರೆಂಬೆಗಳನ್ನು ಕತ್ತರಿಸುವ ಕೆಲಸಗಳೂ ಆಗಬೇಕಾಗಿದೆ. ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಕೆಲವೆಡೆ ಮಳೆ ಸಮಸ್ಯೆಗಳನ್ನು ಎದುರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮೇ 21ಕ್ಕೆ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.