Advertisement

ಒಳಚರಂಡಿ ಪೈಪ್‌ಲೈನ್‌ ಕಾಮಗಾರಿ ಆರಂಭ

04:25 AM Jan 28, 2019 | |

ಮಹಾನಗರ: ನಗರದ ಹಳೆಯ ಕಾಲದ ಒಳಚರಂಡಿ ಪೈಪ್‌ಲೈನ್‌ಗಳಿಗೆ ಮುಕ್ತಿ ನೀಡಿ, ಹೊಸದಾಗಿ ಪೈಪ್‌ಲೈನ್‌ ಅಳವಡಿಸಲು ಮಹಾನಗರ ಪಾಲಿಕೆ ನಿರ್ಧರಿಸಿದ್ದು, ಇದರಂತೆ, ಕುದ್ರೋಳಿ ವೆಟ್ವೆಲ್‌ನಿಂದ ಕಾವೂರಿನ ಮುಲ್ಲಕಾಡ್‌ ಎಸ್‌ಟಿಪಿವರೆಗೆ (ಸಂಸ್ಕರಣ ಘಟಕ)ನೂತನವಾಗಿ ಒಳಚರಂಡಿ ಪೈಪ್‌ಲೈನ್‌ ಅಳವಡಿಸಲು ಆರಂಭಿಸಲಾಗಿದೆ.

Advertisement

ಒಟ್ಟು 11.06 ಕಿ.ಮೀ. ಉದ್ದದಲ್ಲಿ ಒಳಚರಂಡಿ ಪೈಪ್‌ಲೈನ್‌ ಹಾಕಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 93.04 ಕೋ.ರೂ. ಅಂದಾಜು ವೆಚ್ಚಕ್ಕೆ ಟೆಂಡರ್‌ ಆಗಿದೆ. ಆಂಧ್ರಪ್ರದೇಶದ ಕಾಳಹಸ್ತಿಯಿಂದ ಹೊಸ ಪೈಪ್‌ ಗಳನ್ನು  ತರಿಸಲಾಗಿದ್ದು, ಒಟ್ಟು 33 ತಿಂಗಳುಗಳೊಳಗೆ ಕಾಮಗಾರಿ ಮುಗಿಸುವ ಬಗ್ಗೆ ಮನಪಾ ಒಡಂಬಡಿಕೆ ಮಾಡಿಕೊಂಡಿದೆ.

ಕುದ್ರೋಳಿ ವೆಟ್ವೆಲ್‌ನಿಂದ ಜಾಮಿಯಾ ಮಸೀದಿ, ಉರ್ವಸ್ಟೋರ್‌, ದಡ್ಡಲ್‌ಕಾಡ್‌ ಮಾರ್ಗವಾಗಿ, ಕುಂಟಿಕಾನ ಫ್ಲೈಓವರ್‌ ಆಗಿ, ಎಸ್‌ಟಿಪಿ ಮುಲ್ಲಕಾಡ್‌ ಸಂಪರ್ಕಿಸಲಿದೆ. ಪ್ರಸ್ತುತ ನಗರದ 3 ಕಿ.ಮೀ. ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ಉರ್ವಸ್ಟೋರ್‌, ದಡ್ಡಲ್‌ಕಾಡು, ಮುಲ್ಲಕಾಡು ಎಸ್‌ಟಿಪಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಎಡಿಬಿ 2 ಯೋಜನೆಯಡಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಕುದ್ರೋಳಿ ವೆಟ್ವೆಲ್‌ನಿಂದ ಮುಲ್ಲಕಾಡ್‌ವರೆಗೆ ಈಗ 750 ಎಂಎಂ ಸಿಐ ಪೈಪ್‌ಗ್ಳ ಮೂಲಕ ಒಳಚರಂಡಿ ನೀರು ಸಾಗಿಸಲಾಗುತ್ತಿದೆ. ಇಲ್ಲಿ ಒತ್ತಡ ಅಧಿಕವಾಗುತ್ತಿರುವ ಮತ್ತು ಪೈಪ್‌ ಸಾಮರ್ಥ್ಯ ಕಡಿಮೆ ಇರುವ ಕಾರಣದಿಂದ ಮುಲ್ಲಕಾಡ್‌ವರೆಗೆ ಒಳಚರಂಡಿ ನೀರು ಸರಾಗವಾಗಿ ಸಾಗುತ್ತಿಲ್ಲ. ಹೀಗಾಗಿ ಹೊಸದಾಗಿ ಒಳಚರಂಡಿ ಪೈಪ್‌ಲೈನ್‌ ಸಂಪರ್ಕಕ್ಕೆ ಮನಪಾ ನಿರ್ಧರಿಸಿತ್ತು. ಇದರಂತೆ 2046ರ ವರೆಗೆ ನಗರದ ಜನಸಂಖ್ಯೆಗೆ ಅನುಗುಣವಾಗುವಂತೆ 1100 ಎಂಎಂನ ಡಿಐ ಪೈಪ್‌ಗ್ಳನ್ನು ಅಳವಡಿಸಲಾಗುತ್ತದೆ. ಇಲ್ಲಿನ ಎಸ್‌ಟಿಪಿಯ ತ್ಯಾಜ್ಯ ನೀರನ್ನು ಈಗಾಗಲೇ ಎಸ್‌ಇಝಡ್‌ನ‌ವರು ಸಂಸ್ಕರಿಸಿ ತನ್ನ ಬಳಕೆಗಾಗಿ ಕೊಂಡೊಯ್ಯುತ್ತಿದ್ದಾರೆ.

Advertisement

ಕುಡಿಯುವ ನೀರಿನ ಕೊಳವೆ ಮೇಲೆಯೇ ಪೈಪ್‌!
ಕುಡಿಯುವ ನೀರಿನ ಪೈಪ್‌ ಮೇಲೆ ತ್ಯಾಜ್ಯ ಹರಿಯುವ ಪೈಪ್‌ ಅಳವಡಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪವು ದಡ್ಡಲಕಾಡ್‌ ನಿವಾಸಿಗಳಿಂದ ವ್ಯಕ್ತವಾಗಿದೆ. ಇದರಿಂದ ಮುಂದೆ ಭಾರೀ ಸಮಸ್ಯೆ ಎದುರಾಗಬಹುದು ಎಂಬುದು ಸ್ಥಳೀಯರ ಆತಂಕ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಮನವಿ ಸಲ್ಲಿಸಲಾಗಿದೆ.

4 ಎಸ್‌ಟಿಪಿಗಳು
ಕುದ್ರೋಳಿ, ಪಾಂಡೇಶ್ವರ, ಪಡೀಲ್‌, ಎಕ್ಕೂರು, ಕೊಟ್ಟಾರಚೌಕಿ ಸಹಿತ ಒಟ್ಟು 22 ಕಡೆಗಳಲ್ಲಿ ವೆಟ್ವೆಲ್‌ ನಿರ್ಮಿಸಲಾಗಿದೆ. ಅಂದರೆ, ಶೌಚಾಲಯ, ಪಾತ್ರೆ ತೊಳೆಯುವ ನೀರು ಒಳಚರಂಡಿಯ ಮೂಲಕ ಮ್ಯಾನ್‌ಹೋಲ್‌ (ಒಟ್ಟು 24,365) ದಾಟಿ, ವೆಟ್ವೆಲ್‌ಗೆ ಹರಿಯುತ್ತದೆ. ಅಲ್ಲಿಂದ ನಗರದ ನಾಲ್ಕು ಕಡೆಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಎಸ್‌ಟಿಪಿ (ಸಂಸ್ಕರಣ ಘಟಕ) ಬರುತ್ತದೆ. 16 ಎಂಎಲ್‌ಡಿ ಸಾಮರ್ಥ್ಯದ ಸುರತ್ಕಲ್‌ ಎಸ್‌ಟಿಪಿ, 20 ಎಂಎಲ್‌ಡಿಯ ಜಪ್ಪಿನಮೊಗರು ಎಸ್‌ಟಿಪಿ, 44.4 ಎಂಎಲ್‌ಡಿಯ ಕಾವೂರು ಎಸ್‌ಟಿಪಿ, 8.7 ಎಂಎಲ್‌ಡಿ ಸಾಮರ್ಥ್ಯದ ಪಚ್ಚನಾಡಿ ಎಸ್‌ಟಿಪಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತದೆ.

ಮ್ಯಾನ್‌ಹೋಲ್‌ಗ‌ಳು
ಅನಂತರ 2006ರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡ ಎಡಿಬಿ ಯೋಜನೆಯಡಿ ಒಟ್ಟು 14,365 ಮ್ಯಾನ್‌ಹೋಲ್‌ ಮಾಡಲಾಗಿದೆ. ಆ ಬಳಿಕ ಅಗತ್ಯವಿರುವ ಕಾರಣದಿಂದ ಹೆಚ್ಚುವರಿಯಾಗಿ ಪಾಲಿಕೆಯು 4,000ದಷ್ಟು ಮ್ಯಾನ್‌ಹೋಲ್‌ಗ‌ಳನ್ನು ನಿರ್ಮಿಸಿದೆ. ಹೀಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 24,365 ಮ್ಯಾನ್‌ಹೋಲ್‌ಗ‌ಳು ಕಾರ್ಯಾಚರಿಸುತ್ತಿವೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.  

11.06 ಕಿ.ಮೀ. ಪೈಪ್‌ಲೈನ್‌
ಕುದ್ರೋಳಿ ವೆಟ್ವೆಲ್‌ನಿಂದ ಕಾವೂರು ಮುಲ್ಲಕಾಡುವರೆಗೆ 7.65 ಕಿ.ಮೀ. ಉದ್ದದಲ್ಲಿ 1100ಎಂಎಂ ಡಿಐ ಪೈಪ್‌ ಅಳವಡಿಸಲಾಗುತ್ತದೆ. ಜತೆಗೆ ಕಂಡತ್‌ಪಳ್ಳಿ ವೈಟ್ವೆಲ್‌ನಿಂದ ಕುದ್ರೋಳಿ ವೆಟ್ವೆಲ್‌ಗೆ 900 ಎಂಎಂ ಡಿಐ ಪೈಪ್‌(ಪ್ರಸ್ತುತ 750 ಎಂಎಂ ಸಿಐ ಪೈಪ್‌) ಗಳನ್ನು 950 ಮೀ.ಉದ್ದದಲ್ಲಿ ಅಳವಡಿಸಲಾಗುತ್ತದೆ. ಇದಲ್ಲದೆ, 20 ಎಂಎಲ್‌ಡಿಯ ಜಪ್ಪಿನಮೊಗರು ಎಸ್‌ಟಿಪಿಗೆ ಸಂಪರ್ಕವಿರುವ ಮುಳಿಹಿತ್ಲು ವೆಟ್ವೆಲ್‌ನಿಂದ ಕಾಸ್ಸಿಯಾ ಚರ್ಚ್‌ನ ರಿಡ್ಜ್ ಮ್ಯಾನುವೆಲ್‌ಗೆ 1.7 ಕಿ.ಮೀ. ಉದ್ದ 450 ಎಂಎಂ ಡಿಐ ಪೈಪ್‌ (ಈಗ 225 ಎಂಎಂ ಡೈಯಾಗ್‌ ಸಿಐ ಪೈಪ್‌) ಅಳವಡಿಸಲಾಗುತ್ತದೆ. ರಿಡ್ಜ್ ಮ್ಯಾನ್‌ವೆಲ್‌ನಿಂದ ಜಪ್ಪಿನಮೊಗರು ಎಸ್‌ಟಿಪಿಗೆ 1.1 ಕಿ.ಮೀ. ಉದ್ದ 450 ಎಂಎಂ ಡಿಐ ಪೈಪ್‌ (ಈಗ 350 ಎಂಎಂ ಡೈಯಾಗ್‌ ಸಿಐ ಪೈಪ್‌) ಹಾಕಲಾಗುತ್ತದೆ. ಈ ಮೂಲಕ ಒಟ್ಟು 11.06 ಕಿ.ಮೀ. ಉದ್ದದಲ್ಲಿ ಒಳಚರಂಡಿ ಪೈಪ್‌ ಗಳನ್ನು  ನಗರದ ವಿವಿಧ ಭಾಗಗಳಲ್ಲಿ ಅಳವಡಿಕೆಯಾಗಲಿದೆ.

ಕಾಮಗಾರಿ ಆರಂಭ
ನಗರದ ಹಳೆಯ ಕಾಲದ ಒಳಚರಂಡಿ ವ್ಯವಸ್ಥೆಗಳನ್ನು ಸರಿಪಡಿಸಿ ಹೊಸ ಪೈಪ್‌ಲೈನ್‌ ಅಳವಡಿಸುವ ಹಿನ್ನೆಲೆಯಲ್ಲಿ ಕುದ್ರೋಳಿ ವೆಟ್ವೆಲ್‌ನಿಂದ ಕಾವೂರಿನ ಮುಲ್ಲಕಾಡ್‌ ಎಸ್‌ಟಿಪಿವರೆಗೆ ನೂತನವಾಗಿ ಒಳಚರಂಡಿ ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. ಈಗಾಗಲೇ ನಗರ ಭಾಗದಲ್ಲಿ ಕಾಮಗಾರಿ ಆರಂಭವಾಗಿದೆ.
– ಶಶಿಧರ ಹೆಗ್ಡೆ,
ಮನಪಾ ಮುಖ್ಯ ಸಚೇತಕ

24,365 ಮ್ಯಾನ್‌ಹೋಲ್‌ಗ‌ಳು!
ಪಾಲಿಕೆಯ ಒಳಚರಂಡಿ ಮೂಲ ಯೋಜನೆಯು 1957ರ ನಿರ್ದೇಶನದಂತೆ ಕಾಮಗಾರಿಯನ್ನು 1970-71ರಲ್ಲಿ ಪೂರ್ಣಗೊಳಿಸಲಾಗಿತ್ತು. ಅಂದಿನ ಜನಸಂಖ್ಯೆ 1,80,000ಕ್ಕೆ ತಯಾರಿಸಿ ಅಂದಾಜು 2 ಲಕ್ಷ ಜನಸಂಖ್ಯೆಗೆ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಆ ಕಾಲದಲ್ಲಿ 6,000 ಮ್ಯಾನ್‌ಹೋಲ್‌ ಮಾಡಲಾಗಿತ್ತು.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next