ಮಂಗಳೂರು ಸ್ಮಾರ್ಟ್ ನಗರಿಯಾಗಿ ಆಯ್ಕೆಗೊಂಡು ಎರಡು ವರ್ಷ ಕಳೆದರೂ ಇನ್ನೂ ಕಾಮಗಾರಿಗಳು ವೇಗ ಪಡೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಆಡಳಿತಾತ್ಮಕ ಪ್ರಕ್ರಿಯೆಗಳು ನಡೆಯುತ್ತಿದೆ. ಅಲ್ಲಲ್ಲಿ ಸಣ್ಣ ಪುಟ್ಟ ಕಾಮಗಾರಿಗಳು ಆರಂಭ ಗೊಂಡಿದ್ದರೂ ಇನ್ನೂ ಮುಗಿಯುವ ಹಂತ ತಲುಪಿಲ್ಲ. ನಗರ ಅಭಿವೃದ್ಧಿ ಪಥದಲ್ಲಿ ವೇಗವಾಗಿ ಹೆಜ್ಜೆ ಹಾಕಬೇಕಾದರೆ ಅಭಿವೃದ್ಧಿ ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಳ್ಳಬೇಕು.
ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದಲ್ಲಿ ಮಂಗಳೂರು ನಗರದ ಸಾಧನೆ ನಿರಾಶಾದಾಯಕವಾಗಿರುವುದು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ. ರಾಜ್ಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನದಲ್ಲಿ ಅನುದಾನ ವಿನಿಯೋಗದ ಪ್ರಗತಿಯ ಬಗ್ಗೆ ಕೇಂದ್ರ ಸರಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ ರಾಜ್ಯ ಸರಕಾರ ಸಲ್ಲಿಸಿರುವ ವರದಿಯಲ್ಲಿ ಇದು ಉಲ್ಲೇಖವಾಗಿದೆ.
ವರದಿಯ ಪ್ರಕಾರ ರಾಜ್ಯದಲ್ಲಿ ಸ್ಮಾರ್ಟ್ ಯೋಜನೆಗೆ ಆಯ್ಕೆಯಾಗಿರುವ ಏಳು ನಗರಗಳ ಪೈಕಿ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಅನುದಾನದ ಬಳಕೆಯಲ್ಲಿ ಮಂಗಳೂರು 4ನೇ ಸ್ಥಾನದಲ್ಲಿದ್ದು, ಯೋಜನೆಯ ಅನುಷ್ಠಾನದ ವಸ್ತು ಸ್ಥಿತಿಯನ್ನು ಅನಾವರಣಗೊಳಿಸಿದೆ. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರಕಾರ ಈಗಾಗಲೇ 111 ಕೋಟಿ ರೂ. ಬಿಡುಗಡೆಗೊಳಿಸಿದೆ. ಅದರೆ ಇದರಲ್ಲಿ ಈವರೆಗೆ ಬಳಕೆಯಾಗಿದ್ದು ಕೇವಲ 6.80 ಕೋಟಿ ರೂ. ಮಾತ್ರ. ಬಳಕೆಯಾಗಿರುವ ಮೊತ್ತದಲ್ಲೂ ಬಹುಪಾಲು ಕಚೇರಿ, ಸಿಬಂದಿ ನೇಮಕ ಮುಂತಾದ ಆಡಳಿತಾತ್ಮಕ ವೆಚ್ಚಗಳಿಗೆ ಬಳಕೆಯಾಗಿದೆ.
ನಗರಗಳ ಮೂಲ ಸೌಲಭ್ಯಗಳನ್ನು ಉನ್ನತೀಕರಣಗೊಳಿಸಿ ಆಧುನಿಕ ಸ್ಪರ್ಶ ನೀಡುವ ಉದ್ದೇಶದಿಂದ ಕೇಂದ್ರದ ಎನ್‌ಡಿಎ ಸರಕಾರ ಜಾರಿಗೆ ತಂದಿರುವ ಸ್ಮಾರ್ಟ್ ಸಿಟಿ ಯೋಜನೆಗೆ ಮಂಗಳೂರು ನಗರ ಆಯ್ಕೆಗೊಂಡಾಗ ನಗರದ ಜನತೆ ಸಂಭ್ರಮಪಟ್ಟಿದ್ದರು. ಯೋಜನೆಗಳಲ್ಲಿ ಅನುಷ್ಠಾನಗೊಳ್ಳುವ ಯೋಜನೆಗಳ ಪಟ್ಟಿಯು ಇದೇ ಸ್ವರೂಪದಲ್ಲಿತ್ತು. ಮಂಗಳೂರು ನಗರ ಈಗಾಗಲೇ ಎದುರಿಸುತ್ತಿರುವ ಬಹಳಷ್ಟು ಸಮಸ್ಯೆಗಳಿಗೆ ಒಂದಷ್ಟು ಪರಿಹಾರ ಕಾಣಬಹುದು ಎಂಬ ನಿರೀಕ್ಷೆ ಮೂಡಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡ ಇದಕ್ಕೆ ಪುಷ್ಟೀಕರಿಸುವ ನಿಟ್ಟಿನಲ್ಲಿ ಹೇಳಿಕೆ, ಆಶ್ವಾಸನೆಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಯೋಜನೆ ಅನುಷ್ಠಾನಗೊಂಡು ಎರಡು ವರ್ಷಗಳಾದರೂ ಹೇಳಿಕೊಳ್ಳುವಂತಹ ಒಂದೇ ಒಂದು ಕಾಮಗಾರಿ ಪೂರ್ಣಗೊಂಡಿಲ್ಲ.
Related Articles
2,400.72 ಕೋ. ರೂ., 66 ಯೋಜನೆಗಳು
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಗಳೂರಿನಲ್ಲಿ ಪ್ರದೇಶ ಆಧಾರಿತ ಅಭಿವೃದ್ಧಿಯಲ್ಲಿ (ಏರಿಯಾ ಬೇಸ್ಡ್ಡೆ ವಲಪ್‌ಮೆಂಟ್ ) 1707.29 ಕೋಟಿ ರೂ. ಹಾಗೂ ಪಾನ್ ಸಿಟಿಯ ಯೋಜನೆಯಲ್ಲಿ 693.43 ಕೋಟಿ ರೂ. ಸಹಿತ ಒಟ್ಟು 2,400.72 ಕೋಟಿ ರೂ. ಮೊತ್ತದಲ್ಲಿ ಒಟ್ಟು 66 ಯೋಜನೆಗಳ ಪ್ರಸ್ತಾವನೆ ರೂಪಿಸಲಾಗಿದೆ. ಕೇಂದ್ರ ಹಾಗೂ ರಾಜ್ಯದಿಂದ 973.56 ಕೋಟಿ ರೂ. ಸ್ಮಾರ್ಟ್ ಸಿಟಿ ಅನುದಾನ, 516.95 ಕೋಟಿ ರೂ. ಪಿಪಿಪಿ ಅನುದಾನ, 126.85 ಕೋಟಿ ರೂ. ಕೇಂದ್ರ ಸರಕಾರದ ಯೋಜನೆಗಳ ಅನುದಾನ, 163.93 ಕೋಟಿ ರೂ. ರಾಜ್ಯ ಸರಕಾರದ ಯೋಜನೆಗಳ ಅನುದಾನ, 128.75 ಕೋಟಿ ರೂ. ಎಡಿಬಿ, 78.90 ಕೋಟಿ ರೂ. ಮಂಗಳೂರು ಪಾಲಿಕೆ ಅನುದಾನ, 11.78 ಕೋಟಿ ರೂ. ಗಳನ್ನು ವಿವಿಧ ನಿಧಿಗಳಿಂದ ನಿರೀಕ್ಷಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಮಂಗಳೂರಿನ 22 ಕಡೆಗಳಲ್ಲಿ ಸುಸಜ್ಜಿತ ಸ್ಮಾರ್ಟ್ ಬಸ್ ಶೆಲ್ಟರ್ (ತಂಗುದಾಣ), ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣದಲ್ಲಿ ಮಲ್ಟಿಲೆವೆಲ್ ಕಾರು ಪಾರ್ಕಿಂಗ್, ನದಿ ಬದಿಯ ಪ್ರದೇಶಗಳ ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವಾಗಿ ರೂಪಿಸುವುದು, ದೇವಸ್ಥಾನಗಳ ವ್ಯಾಪ್ತಿ / ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಅಭಿವೃದ್ಧಿ, ಮಂಗಳೂರಿನ ರಸ್ತೆಗಳ ಅಭಿವೃದ್ಧಿ, ಕೇಂದ್ರ ಮಾರುಕಟ್ಟೆಯ ಮರು ನಿರ್ಮಾಣ, ಪಂಪ್‌ವೆಲ್‌ನಲ್ಲಿ ಕೇಂದ್ರ ಬಸ್ ನಿಲ್ದಾಣ, ಮಂಗಳೂರು ಹಳೆ ವಾಣಿಜ್ಯ ಬಂದರು ಹಾಗೂ ಮೀನುಗಾರಿಕಾ ಬಂದರು ಅಭಿವೃದ್ಧಿ , ಸರಕಾರಿ ಕಚೇರಿಗಳಲ್ಲಿ ರೂಫ್ ಟಾಪ್ ಸೋಲಾರ್ ವ್ಯವಸ್ಥೆ ಅಳವಡಿಕೆ, ಮಂಗಳೂರು ಪುರಭವನದ ಬಳಿ ಅಂಡರ್ ಪಾಸ್ ನಿರ್ಮಾಣ, ಸರಕಾರಿ ಕಚೇರಿಗಳ ಎಲ್‌ಇಡಿ ವಿದ್ಯುತ್ ದೀಪಗಳ ಅಳವಡಿಕೆ, ನಗರದ ರಸ್ತೆಗಳಲ್ಲಿ ಎಲ್‌ಇಡಿ ದೀಪಗಳ ಅಳವಡಿಕೆ, ಸ್ಮಾರ್ಟ್ ನೀರಿನ ಮೀಟರ್ ಗಳು, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್, ಸಿಸಿಟಿವಿಗಳ ಅಳವಡಿಕೆ, ಇಂಟಗ್ರೇಟೆಡ್ ಟ್ರಾನ್ಸ್‌ಪೋರ್ಟ್ ಹಬ್, ಲೇಡಿಗೋಶನ್, ವೆನ್ಲಾಕ್ ಆಸ್ಪತ್ರೆಗಳ ಉನ್ನತೀಕರಣ, ಸೋಲಾರ್ ಮತ್ತು ರಿಕ್ರಿಯೇಶನ್ ಐಲ್ಯಾಂಡ್, ರಸ್ತೆಗಳ ಅಗಲೀಕರಣ ಮುಂತಾದುವುಗಳು ಇದರಲ್ಲಿ ಒಳಗೊಂಡಿವೆ.
ಕುಂಟುತ್ತಾ ಸಾಗುತ್ತಿದೆ ಕಾಮಗಾರಿಗಳು
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳಲ್ಲಿ ಉದಾಹರಣೆಯಾಗಿ ತೋರಿಸಲು ಈವರೆಗೆ ಒಂದು ಯೋಜನೆಯೂ ಪೂರ್ಣಗೊಂಡಿಲ್ಲ. ಸ್ಟೇಟ್‌ಬ್ಯಾಂಕ್‌ನ ಎ.ಬಿ. ಶೆಟ್ಟಿ ವೃತ್ತದಿಂದ ಮಿನಿ ವಿಧಾನಸೌಧದ ಮುಂಭಾಗದವರೆಗಿನ (ಕ್ಲಾಕ್ ಟವರ್) ರಸ್ತೆಯನ್ನು ‘ಸ್ಮಾರ್ಟ್ ರಸ್ತೆ’ಯಾಗಿ ಅಭಿವೃದ್ಧಿಗೊಳಿಸುವ 56 ಕೋಟಿ ರೂ. ವೆಚ್ಚದ ಕಾಮಗಾರಿಗೆ ಆ. 29ರಂದು ಚಾಲನೆ ನೀಡಲಾಗಿದೆ. ಈ ಮೂಲಕ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗೆ ಮಂಗಳೂರಿನಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿತ್ತು. ಆದರೆ ಈ ಕಾಮಗಾರಿಯೂ ಯೋಜನೆಯ ಸ್ವರೂಪದಲ್ಲಿ ಬದಲಾವಣೆಯ ನಿಟ್ಟಿನಲ್ಲಿ ಅರ್ಧಕ್ಕೆ ನಿಂತಿದೆ. ನಗರದ 22 ಕಡೆಗಳಲ್ಲಿ ಸುಸಜ್ಜಿತ ಸ್ಮಾರ್ಟ್ ಬಸ್ ಶೆಲ್ಟರ್ (ತಂಗುದಾಣ) ನಿರ್ಮಾಣ ಮಾಡುವ ಯೋಜನೆಯಲ್ಲಿ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದರೂ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಇದನ್ನು ಸ್ಥಗಿತಗೊಳಿಸಲಾಗಿದೆ. ವಿವಿ ಕಾಲೇಜು ಮುಂಭಾಗದಲ್ಲಿ ಕ್ಲಾಕ್ ಟವರ್ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗುತ್ತಿದೆ. ಮಂಗಳೂರು ಕೇಂದ್ರ ಮಾರುಕಟ್ಟೆ ಮರು ನಿರ್ಮಾಣ ಪ್ರಸ್ತಾವನೆ ಇನ್ನೂ ಟೆಂಡರ್ ಹಂತಕ್ಕೆ ಬಂದಿಲ್ಲ.
ಸ್ಮಾರ್ಟ್ ಸಿಟಿ ಯೋಜನೆ: ವೇಗ ಅಗತ್ಯ
ಮಂಗಳೂರು ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಮಂಜೂರಾಗಿ ಈಗಾಗಲೇ ಎರಡು ವರ್ಷಗಳು ಕಳೆದಿವೆ. ಪೂರ್ಣ ಪ್ರಮಾಣದ ಸ್ಮಾರ್ಟ್ ಸಿಟಿ ಮಂಡಳಿ ರೂಪುಗೊಂಡಿದೆ. ಖಾಯಂ ವ್ಯವಸ್ಥಾಪಕರ ನೇಮಕವೂ ನಡೆದಿದೆ. ವಿವಿಧ ಕಾಮಗಾರಿಗಳಿಗೆ ಪ್ರಸ್ತಾವನೆಗಳು ಸಿದ್ಧಗೊಂಡಿವೆ. ಆದರೆ ಯೋಜನೆ ಸ್ವರೂಪದಲ್ಲಿ ಗೊಂದಲಗಳು ಇನ್ನೂ ಬಗೆಹರಿಯದಿರುವುದರಿಂದ ಕಾಮಗಾರಿಗಳು ಬಾಧಿತವಾಗುತ್ತಿವೆ. ಆರಂಭಗೊಂಡ ಕಾಮಗಾರಿಗಳು ನಿಧಾನಗತಿಯಲ್ಲಿವೆ. ಕೆಲವು ಕಾಮಗಾರಿಗಳಿಗೆ ಟೆಂಡರ್ ಆಗಿವೆ. ಬಹಳಷ್ಟು ಯೋಜನೆಗಳು ಇನ್ನೂ ಟೆಂಡರ್ ಆಗುವ ಹಂತದಿಂದ ಮುಂದಕ್ಕೆ ಹೋಗಿಲ್ಲ. ಇನ್ನೂ ಕೆಲವು ಯೋಜನೆಗಳು ಪ್ರಸ್ತಾವನೆ ಹಂತದಲ್ಲೇ ಉಳಿದುಕೊಂಡಿವೆ. ಸ್ಮಾರ್ಟ್ ಸಿಟಿ ಮಂಗಳೂರಿನ ಪಾಲಿಗೆ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ನಗರದ ಉನ್ನತೀಕರಣಕ್ಕೆ ಇದೊಂದು ಉತ್ತಮ ಅವಕಾಶವಾಗಿದೆ. ನಗರದ ಜನತೆ ಇದರ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆದ್ದರಿಂದ ಸ್ಮಾರ್ಟ್ ಸಿಟಿ ಯೋಜನೆಗೆ ವೇಗ ನೀಡುವ ಕಾರ್ಯ ಆಗಬೇಕಾಗಿದೆ.
ವೇಗ ನೀಡಲು ಕ್ರಮ
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದಲ್ಲಿ ಆರಂಭದಲ್ಲಿ ಮಾರ್ಗಸೂಚಿಗಳ ರಚನೆ. ಸ್ಪೆಷಲ್ ಪರ್ಪಸ್ ವೆಹಿಕಲ್ ರಚನೆ ಸಹಿತ ಅವಶ್ಯ ಪ್ರಕ್ರಿಯೆಯಲ್ಲಿ ವಿಳಂಬವಾಯಿತು. ಸ್ಮಾರ್ಟ್ ಸಿಟಿ ದೊಡ್ಡ ಯೋಜನೆ. ಕೆಲವು ಕಾಮಗಾರಿಗಳು ಆರಂಭಗೊಂಡಿದೆ. ಒಟ್ಟಾರೆಯಾಗಿ ಯೋಜನೆ ಅನುಷ್ಠಾನಕ್ಕೆ ವೇಗ ನೀಡುವ ಕೆಲಸ ಮಾಡಲಾಗುತ್ತಿದೆ.
– ಯು.ಟಿ. ಖಾದರ್,
ರಾಜ್ಯ ನಗರಾಭಿವೃದ್ಧಿ ಖಾತೆ ಸಚಿವ
ಕೇಶವ ಕುಂದರ್