Advertisement
‘ವಿಶೇಷ ಉದ್ದೇಶ ವಾಹಕ’ದ (ಸ್ಪೆಷಲ್ ಪರ್ಪಸ್ ವೆಹಿಕಲ್) ಮೊದಲ ಸಭೆ ಬೆಂಗಳೂರಿನ ವಿಕಾಸಸೌಧದಲ್ಲಿ ಮೇ 2ರಂದು ನಡೆದಿತ್ತು. ಜಿಲ್ಲಾ ಉಸ್ತು ವಾರಿ ಕಾರ್ಯದರ್ಶಿ ಆರ್.ಕೆ.ಸಿಂಗ್ ಅವರು ಮಂಗಳೂರು ಸ್ಮಾರ್ಟ್ ಸಿಟಿ ಲಿ. ಕಂಪೆನಿಯ ಅಧ್ಯಕ್ಷರಾಗಿದ್ದಾರೆ. ಜಿಲ್ಲಾಧಿಕಾರಿ ಡಾ| ಕೆ.ಜಿ.ಜಗದೀಶ್, ಮೇಯರ್ ಕವಿತಾ ಸನಿಲ್, ಆಯುಕ್ತ ಮಹಮ್ಮದ್ ನಝೀರ್, ಮುಖ್ಯಸಚೇತಕ ಎಂ.ಶಶಿಧರ ಹೆಗ್ಡೆ, ಸದಸ್ಯರಾದ ಲ್ಯಾನ್ಸಿ ಲಾಟ್ ಪಿಂಟೋ, ಪ್ರೇಮಾನಂದ ಶೆಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು. ಬಳಿಕ ದ್ವಿತೀಯ ಸಭೆ ಜೂನ್ ಪ್ರಥಮ ವಾರದಲ್ಲಿ ನಡೆಯಬೇಕಿತ್ತು. ಆದರೆ ಇನ್ನೂ ಆ ಸಭೆಗೆ ದಿನಾಂಕ ನಿಗದಿಯಾಗಿಲ್ಲ. ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ಕಂಪೆನಿ ಹಾಗೂ ಯೋಜನೆಯ ನಿರ್ವಹಣ ಗುತ್ತಿಗೆ ವಹಿಸಿರುವ ಪ್ರಾಜೆಕ್ಟ್ಮ್ಯಾ ನೇಜ್‌ಮೆಂಟ್ ಕನ್ಸಲ್ಟೆಂಟ್ (ಪಿಎಂಸಿ) ಪ್ರತ್ಯೇಕ ಕಚೇರಿಗಳು ಈ ತಿಂಗಳಿನೊಳಗೆ ಕಾರ್ಯಾಚರಿಸುವ ಸಾಧ್ಯತೆ ಇದೆ. ಕಂಪೆನಿ ಕಚೇರಿ ಪಾಲಿಕೆಯ ಕಚೇರಿ ಕಟ್ಟಡದಲ್ಲಿ ಆರಂಭಗೊಳ್ಳಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಪಿಎಂಸಿ ವಾಡಿಯಾ ಕಂಪೆನಿಯ ಕಚೇರಿಯು ಚಿಲಿಂಬಿಯಲ್ಲಿ ಆರಂಭವಾಗಿದ್ದು, ಸರ್ವೆ ಆರಂಭಿಸಿದೆ. ಮುಂಬಯಿ ಮೂಲದ ವಾಡಿಯಾ ಟೆಕ್ನೋ ಸರ್ವಿಸಸ್ ಪ್ರೈ.ಲಿ. ಕಂಪೆನಿ, ಯೂಯಿಸ್ ಬರ್ಗರ್ ಕನ್ಸಲ್ಟೆಂಟ್ ಕಂಪೆನಿ ಹಾಗೂ ಸೀಡಕ್ ಕಂಪೆನಿ ಜತೆಯಾಗಿ ಮಂಗಳೂರು ಯೋಜನೆಯ ನಿರ್ವಹಣೆ ಗುತ್ತಿಗೆ ಪಡೆದಿವೆ. ಪಿಎಂಸಿ ಈಗಾಗಲೇ ಪ್ರಾಥಮಿಕ ಹಂತದ ವರದಿ ಸಿದ್ಧಪಡಿಸಿದ್ದು, 6 ತಿಂಗಳಲ್ಲಿ ಹಂತ ಹಂತವಾಗಿ ವರದಿ ಸಲ್ಲಿಸಲಿದೆ. ಸ್ಮಾರ್ಟ್ ರಸ್ತೆ, ಸ್ಮಾರ್ಟ್ ಸ್ಕೂಲ್, ಸರಕಾರಿ ಕಟ್ಟಡ ಗಳಲ್ಲಿ ಸೋಲಾರ್ ಫಲಕ ಅಳವಡಿಕೆ, ಸರಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು, ಬೀದಿ ದೀಪಗಳಿಗೆ ಎಲ್‌ಇಡಿ ಸಹಿತ ಸುಮಾರು 5 ಪ್ರಾಜೆಕ್ಟ್ ಗಳ ಸಮಗ್ರ ಯೋಜನಾ ವರದಿ ಈ ತಿಂಗಳಿನಲ್ಲಿ ಸಿಗುವ ಸಾಧ್ಯತೆಯೂ ಇದೆ ಎನ್ನುತ್ತವೆ ಪಾಲಿಕೆ ಮೂಲಗಳು. ಸ್ಮಾರ್ಟ್‌ಸಿಟಿ ಮೂಲಕ ಮಂಗಳೂರಿನ 1628 ಎಕ್ರೆ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಯೋಜಿಸಲಾಗಿದೆ. ನೆಹರೂ ಮೈದಾನ ಸಹಿತ ಮುಖ್ಯವಾದ 100 ಎಕ್ರೆ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿ, 27 ಎಕ್ರೆ ವ್ಯಾಪ್ತಿಯಲ್ಲಿ ಹಂಪನಕಟ್ಟೆ ಪ್ರದೇಶದಲ್ಲಿ ವಾಣಿಜ್ಯ ರೀತಿಯ ಅಭಿವೃದ್ಧಿ, 22 ಎಕ್ರೆ ವ್ಯಾಪ್ತಿ ಮೀನುಗಾರಿಕೆ – ಬಂದರು ಮರು ಅಭಿವೃದ್ದಿ, 10 ಎಕ್ರೆ ಹಳೆ ಬಂದರು ಮರು ಅಭಿವೃದ್ದಿ, 57 ಎಕ್ರೆ ಪ್ರದೇಶದಲ್ಲಿ ದೇವಸ್ಥಾನಗಳ ವ್ಯಾಪ್ತಿ/ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಅಭಿವೃದ್ಧಿ, 25 ಎಕ್ರೆ ಜಲ ತೀರ ಹಾಗೂ ಸಾಗರ ತೀರದ ಅಭಿವೃದ್ಧಿ, 42 ಎಕ್ರೆ ವ್ಯಾಪ್ತಿಯಲ್ಲಿ ಐಟಿ ಅಭಿವೃದ್ಧಿ, ಸಣ್ಣ ಕೈಗಾರಿಕೆಗಳು, ಆರೋಗ್ಯ, ಟೈಲ್ಸ್ ಫ್ಯಾಕ್ಟರಿ, 17 ಎಕ್ರೆ ವ್ಯಾಪ್ತಿಯಲ್ಲಿ ವೆನ್ಲಾಕ್ ಹಾಗೂ ಲೇಡಿಗೋಷನ್ ಅಭಿವೃದ್ಧಿ, 47 ಎಕ್ರೆ ವ್ಯಾಪ್ತಿಯಲ್ಲಿ ಜಲತೀರ ಪ್ರದೇಶಕ್ಕೆ ಸಂಪರ್ಕಿಸುವ ವ್ಯಾಪ್ತಿಯಲ್ಲಿ ವಾಣಿಜ್ಯೀಕರಣದ ಮೂಲಕ ಅಭಿವೃದ್ಧಿ, 20 ಎಕ್ರೆ ಬಂದರು ವ್ಯಾಪ್ತಿಯಲ್ಲಿ ಸೋಲಾರ್ ಫಾರ್ಮ್ ಅಭಿವೃದ್ಧಿಯ ಪ್ರಸ್ತಾವನೆ ಇದೆ. ಉಳಿದಂತೆ, ಪಾನ್ ಸಿಟಿಯಂತೆ ವಿವಿಧ ಯೋಜನೆಗಳ ಮಾಹಿತಿ ನೀಡುವ ‘ಒನ್ ಟಚ್ ಮಂಗಳೂರು’ ಎಂಬ ಮೊಬೈಲ್ ಆ್ಯಪ್ ಹಾಗೂ ‘ಒನ್ ಆ್ಯಕ್ಸೆಸ್ ಮಂಗಳೂರು’ ಎಂಬ ವೆಬ್ ಬಳಕೆ ಸಹಿತ ತಂತ್ರಜ್ಞಾನಗಳ ಬಳಕೆಗೆ ಪ್ರಸ್ತಾವನೆಯಲ್ಲಿ ಉಲ್ಲೇಖವಿದೆ. ಪಾಲಿಕೆಯು ಸಲ್ಲಿಸಿದ್ದ ಒಟ್ಟು 2000.72 ಕೋ.ರೂ. ಪ್ರಸ್ತಾವನೆಯಲ್ಲಿ ‘ಏರಿಯಾ ಬೇಸ್’ ನಿಂದ (ನಗರದ ಸ್ಥಳ ಕೇಂದ್ರಿತ ಅಭಿವೃದ್ಧಿ)1,707.29 ಕೋ.ರೂ. ಹಾಗೂ ‘ಪಾನ್ ಸಿಟಿ’ (ಡಿಜಿಟಲೀಕರಣ -ತಂತ್ರಜ್ಞಾನ) ಮೂಲಕ 293.43 ಕೋ.ರೂ.ಗಳ ಯೋಜನೆ ಸಿದ್ಧಗೊಳಿಸಲಾಗಿದೆ.
Related Articles
ಪ್ರಥಮ ಹಂತದಲ್ಲೇ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಯಾಗುವ ಅವಕಾಶವಿತ್ತು. ಆದರೆ, ಆ ಸಂದರ್ಭ ಮಂಗಳೂರಿನ ದೀರ್ಘಕಾಲೀನ (20 ವರ್ಷಗಳ ಅವಧಿ) ಸಮಗ್ರ ಅಭಿವೃದ್ಧಿ ದೃಷ್ಟಿ ಯಿಂದ 20 ಸಾವಿರ ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಆಯ್ಕೆಯಾಗಲಿಲ್ಲ. ದ್ವಿತೀಯ ಹಂತದಲ್ಲಿ 5 ವರ್ಷಗಳ ಅವಧಿಗೆ 2 ಸಾವಿರ ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದು, ಆಯ್ಕೆಯಾಗಿದೆ. ಕೇಂದ್ರ ಹಾಗೂ ರಾಜ್ಯದಿಂದ 973.56 ಕೋ.ರೂ. ಸ್ಮಾರ್ಟ್‌ಸಿಟಿ ಅನುದಾನ, 516.95 ಕೋ.ರೂ. ಪಿಪಿಪಿ ಅನುದಾನ, 126.85 ಕೋ.ರೂ. ಕೇಂದ್ರದ ಯೋಜನೆಗಳ ಅನುದಾನ, 163.93 ಕೋ.ರೂ. ರಾಜ್ಯದ ಯೋಜನೆಗಳ ಅನುದಾನ, 128.75 ಕೋ.ರೂ. ಎಡಿಬಿ, 78.90 ಕೋ.ರೂ. ಪಾಲಿಕೆ ಅನುದಾನ, 11.78 ಕೋ.ರೂ.ಗಳನ್ನು ವಿವಿಧ ನಿಧಿಗಳಿಂದ ನಿರೀಕ್ಷಿಸಿ 2,000.72 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು.
Advertisement
– ದಿನೇಶ್ ಇರಾ