ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲು ಅವರು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರನ್ನು ಹೊಸದಿಲ್ಲಿಯಲ್ಲಿ ಗುರುವಾರ ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲ್ವೇ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ಮಂಗಳೂರು ರೈಲ್ವೇ ವಿಭಾಗ ಮಂಜೂರು ಮಾಡಬೇಕು ಎಂದು ಸಂಸದರು ಆಗ್ರಹಿಸಿದರು. ಪ್ರತಿಕ್ರಿಯೆ ನೀಡಿದ ಸಚಿವರು, ಮಂಗಳೂರು ಪ್ರತ್ಯೇಕ ರೈಲ್ವೇ ವಿಭಾಗ ರಚನೆ ಕುರಿತು ಹೊಸದಿಲ್ಲಿಯಲ್ಲಿ ರೈಲ್ವೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಕೂಲಂಕಷವಾಗಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.
ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಹೊಸ ಸುಸಜ್ಜಿತ ಕಟ್ಟಡ ನಿರ್ಮಾಣ ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿ ಮಾಡಬೇಕು, ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ 3 ಮತ್ತು 4ನೇ ಪ್ಲಾಟ್‌ಫಾರಂ ನಿರ್ಮಾಣ ಕಾರ್ಯ ತ್ವರಿತಗೊಳಿಸಬೇಕು. ಸುಬ್ರಹ್ಮಣ್ಯ – ಸಕಲೇಶಪುರ ಹಳಿ ದ್ವಿಪಥ ಕಾಮಗಾರಿ ಕೈಗೆತ್ತಿಕೊಳ್ಳಬೇಕು,
ಮಂಗಳೂರು – ಮಡಗಾಂವ್ ಡೆಮು ರೈಲನ್ನು ಪ್ರತಿನಿತ್ಯ ಓಡಿಸಬೇಕು, ದಾದರ್- ಮಡಗಾಂವ್ ಜನ್ ಶತಾಬ್ದಿ ಎಕ್ಸ್ ಪ್ರಸ್ ರೈಲನ್ನು ಮಂಗಳೂರಿಗೆ ಓಡಿಸಬೇಕು, ಗೇಜ್ ಪರಿವರ್ತನೆಯ ಸಂದರ್ಭದಲ್ಲಿ ರದ್ದಾಗಿದ್ದ ಮಂಗಳೂರನ್ನು ಹಾಸನ-ಅರಸೀಕೆರೆ ಮೂಲಕ ಹುಬ್ಬಳ್ಳಿ ಮೀರಜ್ ಅನ್ನು ಸಂಪರ್ಕಿಸುತ್ತಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ ಪುನರಾರಂಭಿಸಬೇಕು ಹಾಗೂ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಪೂರೈಸುವಂತೆ ಸಚಿವರಿಗೆ ಸಂಸದರು ಮನವಿ ಮಾಡಿದರು. ಸಂಸದರ ಬೇಡಿಕೆಗಳನ್ನು ಪರಿಶೀಲಿಸಿದ ಸಚಿವರು, ಈ ಎಲ್ಲ ಬೇಡಿಕೆಗಳನ್ನು ಈಡೇರಿಸು ವುದಾಗಿ ಭರವಸೆ ನೀಡಿದ್ದಾರೆ.