Advertisement

ಪಬ್‌ ದಾಳಿ ಪ್ರಕರಣ: 26 ಮಂದಿ ಆರೋಪಿಗಳ ದೋಷಮುಕ್ತಿ

06:00 AM Mar 13, 2018 | |

ಮಂಗಳೂರು: ಒಂಬತ್ತು ವರ್ಷಗಳ ಹಿಂದೆ ನಗರದಲ್ಲಿ ನಡೆದ ಪಬ್‌ ದಾಳಿ ಪ್ರಕರಣದ 1ನೇ ಆರೋಪಿ ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್‌ ಮುತಾಲಿಕ್‌ ಸಹಿತ 30 ಮಂದಿ ಆರೋಪಿಗಳನ್ನು ಮಂಗಳೂರಿನ ಜೆ.ಎಂ.ಎಫ್‌.ಸಿ. 3ನೇ ನ್ಯಾಯಾಲಯ ಖುಲಾಸೆಗೊಳಿಸಿ ಸೋಮವಾರ ತೀರ್ಪು ನೀಡಿದೆ.

Advertisement

ಈ ಪ್ರಕರಣದಲ್ಲಿ ಒಟ್ಟು 30 ಮಂದಿ ಆರೋಪಿಗಳಿದ್ದು, ಇವರಲ್ಲಿ ಅಶ್ವಿ‌ನ್‌ ಮತ್ತು ಪ್ರವೀಣ್‌ ಎಂಬ ಇಬ್ಬರು ಆರೋಪಿಗಳು ಈಗಾಗಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಸುಭಾಸ್‌ ಮತ್ತು ಧೀರಜ್‌ ತಲೆಮರೆಸಿಕೊಂಡಿದ್ದು, ಅವರು ವಿದೇಶದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನುಳಿದ 26 ಮಂದಿ ಆರೋಪಿಗಳು ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದು, ಅವರ ಮೇಲಣ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್‌ ವಿಫಲವಾಗಿದೆ ಎಂದು ನ್ಯಾಯಾಲಯ ತೀರ್ಮಾನಕ್ಕೆ ಬಂದಿದೆ. ಇದರ ಆಧಾರದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಂಜುನಾಥ್‌ ಅವರು ಆರೋಪಿಗಳನ್ನು ದೋಷಮುಕ್ತಿಗೊಳಿಸಿ ತೀರ್ಪು ನೀಡಿದ್ದಾರೆ. 

ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್‌ ಮುತಾಲಿಕ್‌ ಮತ್ತು ಈ ಸಂಘಟನೆಯ ನಾಯಕರಾದ ಪ್ರಸಾದ್‌ ಅತ್ತಾವರ, ಆನಂದ್‌ ಅಡ್ಯಾರ್‌, ಜೀವನ್‌ ಅಡ್ಯಾರ್‌, ಸುಭಾಸ್‌ ಪಡೀಲ್‌, ಶರತ್‌ ಪದವಿನಂಗಡಿ, ವಿನೋದ್‌ ನೀರುಮಾರ್ಗ, ದೇವರಾಜ್‌, ಪವನ್‌, ಹರೀಶ್‌ ತೋಡಾರ್‌, ಧೀರಜ್‌ ಮಂಜೇಶ್ವರ, ಗಣೇಶ್‌ ಅತ್ತಾವರ, ಸಚಿನ್‌ ಅತ್ತಾವರ, ವಕೀಲ ದಿನಕರ ಶೆಟ್ಟಿ ಅವರು ದೋಷಮುಕ್ತಿಗೊಂಡ ಆರೋಪಿ ಗಳಲ್ಲಿ ಪ್ರಮುಖರು.ಆರೋಪಿಗಳ ಪರವಾಗಿ ವಕೀಲರಾದ ಆಶಾ ನಾಯಕ್‌ ಮತ್ತು ವಿನೋದ್‌ ಪಾಲ್‌ ವಾದಿಸಿದ್ದರು. ಒಟ್ಟು 27 ಸಾಕ್ಷಿಗಳನ್ನು ಹೆಸರಿಸಲಾಗಿತ್ತು. 

ಘಟನೆಯ ಹಿನ್ನೆಲೆ
2009 ಜ. 24ರಂದು ಮಂಗಳೂರಿನ ಬಲ್ಮಠ ರಸ್ತೆಯಲ್ಲಿರುವ ಅಮ್ನೆàಶಿಯಾ ಪಬ್‌ ಮೇಲೆ ದಾಳಿ ನಡೆದಿತ್ತು. ಸಂಜೆ 5.30ರ ವೇಳೆಗೆ ಯುವಕರ ತಂಡವೊಂದು ದಿಢೀರನೆ ಪಬ್‌ಗ ನುಗ್ಗಿ ಅಲ್ಲಿದ್ದ ಯುವಕ/ ಯುವತಿಯರ ಮೇಲೆ ದಾಳಿ ನಡೆಸಿತ್ತು. ಹಲ್ಲೆಯಿಂದ ಇಬ್ಬರು ಯುವತಿಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ರಾಷ್ಟ್ರ ಮಟ್ಟದ ವಾಹಿನಿಗಳು ಮಂಗಳೂರಿಗೆ ಬಂದು ಇಲ್ಲಿನ ಬೆಳವಣಿಗೆಗಳ ಕ್ಷಣ ಕ್ಷಣದ ವರದಿಯನ್ನು ಬಿತ್ತರಿಸಿದ್ದವು. ದಾಳಿ ಘಟನೆಯು ರಾಜ್ಯ ಮತ್ತು ಕೇಂದ್ರ ಸರಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಆಗ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿತ್ತು. 

ಹೆಣ್ಣುಮಕ್ಕಳು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಲ್ಲಂಘಿಸಿ ಪಬ್‌/ ಬಾರ್‌ಗೆ ಹೋಗಿ ಮದ್ಯಪಾನ ಮಾಡಿದ್ದರಿಂದ ಈ ದಾಳಿ ನಡೆಸಲಾಗಿತ್ತು ಎಂಬುದಾಗಿ ಅಂದು ಪ್ರಮೋದ್‌ ಮುತಾಲಿಕ್‌ ಘಟನೆಯನ್ನು ಸಮರ್ಥಿಸಿದ್ದರು. ಪರ ಊರುಗಳಿಂದ ಬಂದ ಯುವತಿ ಯರು ಪಬ್‌ಗಳಿಗೆ ಹೋಗಿ ಕುಡಿಯುವ ಮೂಲಕ ಸ್ಥಳೀಯ ಸಭ್ಯ ಯುವತಿಯರ ಹಾದಿ ತಪ್ಪಿಸುತ್ತಿದ್ದಾರೆ ಎಂದವರು ಆರೋಪಿಸಿದ್ದರು. ಘಟನೆಯನ್ನು ಸಮರ್ಥಿಸಿ ಹೇಳಿಕೆ ನೀಡಿದ್ದರಿಂದ ವಕೀಲ ದಿನಕರ ಶೆಟ್ಟಿ ಅವರನ್ನು ಕೂಡ ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು. 

Advertisement

ರಾಷ್ಟ್ರ- ಅಂತಾರಾಷ್ಟ್ರೀಯ ಸುದ್ದಿ
ಪಬ್‌ ದಾಳಿ ಘಟನೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದಾಗ ಘಟನೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆದಿದ್ದವು. ಕೇಂದ್ರದ ಯುಪಿಎ ಸರಕಾರ ತನಿಖೆಗಾಗಿ ಕೇಂದ್ರ ಮಹಿಳಾ ಆಯೋಗವನ್ನು ಕಳುಹಿಸಿತ್ತು. ಆಯೋಗದ ಮುಖ್ಯಸ್ಥರಾದ ನಿರ್ಮಲಾ ವೆಂಕಟೇಶ್‌ ಅವರು ಹೆಣ್ಣುಮಕ್ಕಳು ಪಬ್‌ಗ ಹೋದ ಔಚಿತ್ಯವನ್ನು ಪ್ರಶ್ನಿಸಿ ಟೀಕಿಸಿದ್ದರು ಹಾಗೂ 30- 40ರಷ್ಟು ಮಂದಿ ಯುವಕರು ದಾಳಿ ನಡೆಸಿದಾಗ ಪಬ್‌ನಲ್ಲಿ ಸಾಕಷ್ಟು ಭದ್ರತೆ ಇರಲಿಲ್ಲ ಎಂಬುದಾಗಿ ದಾಳಿ ಕಾರ್ಯಾಚರಣೆಯನ್ನು ಸಮರ್ಥಿಸುವ ರೀತಿಯಲ್ಲಿ ವರದಿ ಸಲ್ಲಿಸಿದ್ದರು. ಹಾಗಾಗಿ ಅವರ ವರದಿಯನ್ನು ಸ್ವೀಕರಿಸಲು ಕೇಂದ್ರ ನಿರಾಕರಿಸಿದ್ದಲ್ಲದೆ, ನಿರ್ಮಲಾ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಿತ್ತು. ಬಳಿಕ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ರೇಣುಕಾ ಚೌಧುರಿ ಅವರು ಖುದ್ದಾಗಿ ಮಂಗಳೂರಿಗೆ ಭೇಟಿ ನೀಡಿ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದರು. ಇಷ್ಟೆಲ್ಲ ಬೆಳವಣಿಗೆಗಳನ್ನು ಕಂಡ ಪ್ರಕರಣದ 26 ಆರೋಪಿಗಳು ಖುಲಾಸೆಗೊಂಡಿರುವುದು ಗಮನಾರ್ಹ. 

ಸತ್ಯಕ್ಕೆ  ಸಂದ ಜಯ: ಮುತಾಲಿಕ್‌
“ಸತ್ಯಕ್ಕೆ ಜಯವಾಗಿದೆ; ನ್ಯಾಯಾಲಯವು ನಮಗೆ ನ್ಯಾಯ ಒದಗಿಸಿದೆ. ಹೀಗಾಗಿ ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಮಂಗಳೂರು ಪಬ್‌ ದಾಳಿ ಪ್ರಕರಣದ ಒಂದನೇ ಆರೋಪಿ ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್‌ ಮುತಾಲಿಕ್‌ ಪ್ರತಿಕ್ರಿಯೆ ನೀಡಿದ್ದಾರೆ.

ಕೋರ್ಟ್‌ನಿಂದ ಹೊರ ಬಂದ ಬಳಿಕ ಮುತಾಲಿಕ್‌ ಬೆಂಬಲಿಗರೊಂದಿಗೆ ಆರ್ಯ ಸಮಾಜದಲ್ಲಿ ವಿಜಯೋತ್ಸವ ಆಚರಿಸಿ ಪತ್ರಿಕಾಗೋಷ್ಠಿ ನಡೆಸಿದರು.

ಮಾನನಷ್ಟ  ಮೊಕದ್ದಮೆ ದಾಖಲಿಸುವೆ
“ಪಬ್‌ ದಾಳಿ ಪ್ರಕರಣದಲ್ಲಿ ಸುಳ್ಳು ಆರೋಪ ಹೊರಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ ಬಗ್ಗೆ ಸರಕಾರದ ವಿರುದ್ಧ ಮಾನ ನಷ್ಟ ಕೇಸು ದಾಖಲಿಸುವ ಬಗ್ಗೆ ಚಿಂತಿಸುತ್ತಿದ್ದೇನೆ’ ಎಂದು ಮುತಾಲಿಕ್‌ ವಿವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next