ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೆಟ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯು ಸೋಮವಾರದಂದು ನಗರದ ಡಿಎಆರ್ ಕಚೇರಿ ಆವರಣದಲ್ಲಿ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಡ್ಲೂರು ಸತ್ಯನಾರಾಯಣಾಚಾರ್ಯರವರು ಮಾತನಾಡಿ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿ ಹುತಾತ್ಮರಾಗುವ ಪೊಲೀಸರ ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯ ಕಲ್ಪಿಸಲು ಮಂಗಳೂರಿನಲ್ಲಿ ಶಾಲೆಯೊಂದನ್ನು ತೆರೆಯ ಬೇಕೆಂದು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಪಶ್ಚಿಮ ವಲಯದ ಐಜಿಪಿ ಜೆ. ಅರುಣ್ ಚಕ್ರವರ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದು, ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದರು.
ಮಂಗಳೂರು ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್. ಅವರು ಕಳೆದ 1 ವರ್ಷದ ಅವಧಿಯಲ್ಲಿ ಮಂಗಳೂರಿನ ಇಬ್ಬರು ಮತ್ತು ಕರ್ನಾಟಕದ 12 ಮಂದಿ ಸೇರಿದಂತೆ ದೇಶದಲ್ಲಿ ಹುತಾತ್ಮರಾದ ಒಟ್ಟು 292 ಮಂದಿ ಪೊಲೀಸರ ಹೆಸರನ್ನು ವಾಚಿಸಿದರು.
ಜಿಲ್ಲಾ ಪೊಲೀಸ್ ವರಿಷಾಧಿಕಾರಿ ಬಿ. ಎಂ. ಲಕ್ಷ್ಮೀ ಪ್ರಸಾದ್, ಡಿಸಿಪಿಗಳಾದ ಅರುಣಾಂಗ್ಷುಗಿರಿ ಮತ್ತು ಲಕ್ಷ್ಮೀ ಪ್ರಸಾದ್, ಮಂಗಳೂರು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ| ಮುರಳಿ ಮೋಹನ್ ಚೂಂತಾರು, ನಿವೃತ್ತ ಕಮಾಂಡೆಂಟ್ ಡಾ| ಶಿವ ಪ್ರಸಾದ್ ರೈ, ವಲಯ ಅಗ್ನಿ ಶಾಮಕ ಅಧಿಕಾರಿ ಶಿವ ಶಂಕರ್, ಎಸಿಪಿಗಳಾದ ಮಂಜುನಾಥ ಶೆಟ್ಟಿ, ಶ್ರೀನಿವಾಸ ಗೌಡ, ಉಪಾಸೆ, ಪುತ್ತೂರು ಡಿವೈಎಸ್‌ಪಿ ದಿನಕರ ಶೆಟ್ಟಿ, ಕೆಎಸ್‌ಆರ್‌ಪಿ ಕಮಾಂಡೆಂಟ್ ಜನಾರ್ಧನ ಮತ್ತಿತರರು ಗೌರವ ನಮನ ಸಲ್ಲಿಸಿದರು.