Advertisement

ಮಂಗಳೂರು ಉತ್ತರ: ಹಲವು ಕಾಂಗ್ರೆಸಿಗರು ಬಿಜೆಪಿಗೆ

09:41 AM May 02, 2018 | Harsha Rao |

ಪಣಂಬೂರು: ಕಾಂಗ್ರೆಸ್‌ ಸರಕಾರದ ಹಿಂದೂ ವಿರೋಧಿ ನೀತಿಯಿಂದ ಬೇಸತ್ತು ಹಲವಾರು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡರು. ಕಾವೂರು ಮುಲ್ಲಕಾಡಿನ ಫೋರ್ತ್‌ ಮೈಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಭರತ್‌ ಶೆಟ್ಟಿ ವೈ. ಅವರು ಬಿಜೆಪಿ ಧ್ವಜ ನೀಡುವ ಮೂಲಕ ಬರಮಾಡಿಕೊಂಡರು.

Advertisement

ಈ ಸಂದರ್ಭ ಮಾತನಾಡಿದ ಅವರು, ಹಿಂದೂ ವಿರೋಧಿ ಆಡಳಿತದ ಬಿಸಿ ಕಾಂಗ್ರೆಸ್‌ಗೆ ತಟ್ಟಲಿದೆ. ಓಲೈಕೆ ರಾಜಕಾರಣ ಶಾಶ್ವತ ಅಲ್ಲ. ಸರ್ವರನ್ನೂ ಒಗ್ಗೂಡಿ ಕರೆದುಕೊಂಡು ಹೋಗುವುದೇ ಉತ್ತಮ ಆಡಳಿತದ ಲಕ್ಷಣ. ಕಾಂಗ್ರೆಸ್‌ ಸರಕಾರ ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ಪಕ್ಷದ ಮತದಾರರನ್ನು, ಪಕ್ಷಕ್ಕೆ ಬೆಂಬಲ ನೀಡುವವರ ವಿರುದ್ಧ ಆಡಳಿತಾತ್ಮಕವಾಗಿ ಮನಃಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ. ಬಹುಸಂಖ್ಯಾಕರನ್ನು ತುಳಿದು ಯಾವುದೇ ರಾಜಕೀಯ ಪಕ್ಷ ಬಹುದಿನ ಬಾಳುವುದು ಅಸಾಧ್ಯ. ಬಿಜೆಪಿ ಸರ್ವ ಧರ್ಮಗಳನ್ನು ಸಮಾನವಾಗಿ ಭಾವೈಕ್ಯತೆಯಿಂದ ಕಾಣುತ್ತದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಸೌಹಾರ್ದದಿಂದ ಬಾಳಬಹುದು ಎಂಬುದನ್ನು ಬಿಜೆಪಿ ಆಡಳಿತದಲ್ಲಿ ತೋರಿಸಿಕೊಟ್ಟಿದೆ ಎಂದರು.

ಬಿಜೆಪಿ ಅಧಿಕಾರದಲ್ಲಿ ಇರುವಾಗ ಯಾವುದೇ ಕೋಮು ಗಲಭೆ ಆದ ಉದಾಹರಣೆಗಳಿಲ್ಲ. ಆದರೆ ಕಾಂಗ್ರೆಸ್‌ ಬಂದ ಬಳಿಕ ನೂರಾರು ಘಟನೆ ಆದ ವರದಿಯಿದೆ. ತುಷ್ಟೀಕರಣ ನೀತಿಯಿಂದ ಇಂತಹ ಸಮಸ್ಯೆಗಳು ಆಗುತ್ತಿವೆ. ಮತದಾರರು ಪ್ರಬುದ್ಧರಾಗಿದ್ದು ಇಂತಹ ಕೃತ್ಯಗಳಿಗೆ ಭವಿಷ್ಯದಲ್ಲಿ ಅವಕಾಶ ಮಾಡಿಕೊಡಲಾರರು ಎಂಬ ವಿಶ್ವಾಸವಿದೆ. ಬಿಜೆಪಿ ಆಡಳಿತಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತ ಎಂದರು.

ಅಭಿವೃದ್ಧಿ ಪ್ರಚಾರದಲ್ಲಿ ಮಾತ್ರ
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ ವಾಗಿದೆ. ಸ್ಮಾರ್ಟ್‌ ಸಿಟಿ ಅನುದಾನ ಬಳಕೆಯಾಗಿಲ್ಲ. ಕಿರು ಜೆಟ್ಟಿ ನಿರ್ಮಾಣ ಕೇವಲ ಹೇಳಿಕೆಗೆ ಸೀಮಿತವಾಗಿದೆ. ನಿರ್ಮಾಣಕ್ಕೆ ರಾಜ್ಯದ ಅನುದಾನ ನೀಡುವಲ್ಲಿ ಕಾಂಗ್ರೆಸ್‌ ಆಡಳಿತ ವಿಫಲವಾಗಿದೆ. ಶಾಸಕರು ಜಾತಿ ಓಲೈಕೆ ಮಾಡುವ ಮೂಲಕ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಸೀರೆ ಹಂಚುವ ಮೂಲಕ, ತನ್ನ ಭಾವಚಿತ್ರವಿರುವ ಪುಸ್ತಕಗಳನ್ನು  ಮಕ್ಕಳಿಗೆ ಹಂಚುವ ಮೂಲಕ ಅಭಿವೃದ್ಧಿ ಮಾಡದೆ  ಗಿಮಿಕ್‌ ಮಾಡುವ ಮೂಲಕ ಮತದಾರರನ್ನು ಓಲೈಸುವ ಯತ್ನ ನಡೆಸಿದ್ದಾರೆ ಎಂದು ಟೀಕಿಸಿದರು. 

ಯುವ ಮತದಾರರು ಪಕ್ಷದ ಬೆನ್ನೆಲುಬು
ಬಿಜೆಪಿ ಪರ ಯುವ ಮತದಾರರ ಒಲವು ಹೆಚ್ಚಾಗಿದೆ. ಬಿಜೆಪಿಗೆ ಯುವ ಶಕ್ತಿಯೇ ಬೆನ್ನೆಲುಬು. ಸಾರ್ವಜನಿಕ ಪ್ರಚಾರ ಸಭೆಗಳಲ್ಲಿ ಯುವ ಸಮೂಹವೇ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಬಾರಿ ಉತ್ತರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸಲು ಸಂಕಲ್ಪ ತೊಟ್ಟಿದ್ದಾರೆ. ಭವಿಷ್ಯದಲ್ಲಿ ಉದ್ಯೋಗ, ಮಹಿಳೆಯರಿಗೆ ರಕ್ಷಣೆಗಾಗಿ ಹೆಲ್ಪ್ಲೈನ್‌, ಐಟಿ ಹಬ್‌ ಮತ್ತಿತರ ಯೋಜನೆ ತರುವ ಮೂಲಕ ಸಮೃದ್ಧ, ಸುರಕ್ಷಿತ, ಭಾವೈಕ್ಯದ ಮಂಗಳೂರು ಉತ್ತರ ಕ್ಷೇತ್ರವನ್ನು ನಿರ್ಮಿಸುವ ಸಂಕಲ್ಪ ಮಾಡಿದ್ದೇನೆ ಎಂದು ಭರತ್‌ ಶೆಟ್ಟಿ ಹೇಳಿದರು.
ಸುಚೇತನ್‌,ರಾಜೇಶ್‌ ಕೊಟ್ಟಾರಿ, ಕಿರಣ್‌ ಕುಮಾರ್‌, ರಮೇಶ್‌ ಆಚಾರ್ಯ, ಆನಂದ್‌ ಪಾಂಗಳ, ಶೇಖರ್‌, ರಕ್ಷಿತ್‌ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next