Advertisement

State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ

02:44 AM Nov 16, 2024 | Team Udayavani |

ಕೋಟ: ಖಾಸಗಿ ಕೃಷಿ ಯಂತ್ರಗಳ “ಬಾಡಿಗೆ ದರ ಸಮರ’ವನ್ನು ನಿಯಂತ್ರಿಸುವ ಸಲುವಾಗಿ 2014-15ನೇ ಸಾಲಿನಲ್ಲಿ ರಾಜ್ಯ ಸರಕಾರ ಜಾರಿಗೆ ತಂದ ಕೃಷಿ ಯಂತ್ರಧಾರೆ ಯೋಜನೆ ಪ್ರಸ್ತುತ ನೇಪಥ್ಯಕ್ಕೆ ಸರಿಯುತ್ತಿದೆ. ಟೆಂಡರ್‌ ಅವಧಿ ಮುಗಿದು ವರ್ಷ ಕಳೆದರೂ ಹಲವು ಕಡೆಗಳಲ್ಲಿ ಟೆಂಡರ್‌ ನವೀಕರಣ, ಮರು ಟೆಂಡರ್‌ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ.

Advertisement

ಕೃಷಿ ಇಲಾಖೆಯಡಿ ಸ್ವಯಂಸೇವಾ ಸಂಸ್ಥೆಗಳ ಮೂಲಕ ಯಂತ್ರಧಾರೆ ಕೇಂದ್ರ ನಡೆಸಲಾಗುತ್ತದೆ. ಕಟಾವು ಯಂತ್ರ, ಟ್ರ್ಯಾಕ್ಟರ್‌, ಪವರ್‌ ಟಿಲ್ಲರ್‌, ರೋಟರಿ ಟಿಲ್ಲರ್‌, ರೊಟಾವೇಟರ್‌ಡಿಸ್ಕ್ ನೇಗಿಲು ಸಹಿತ 44 ಯಂತ್ರೋಪಕರಣಗಳು ಈ ಯಂತ್ರಧಾರಾ ಕೇಂದ್ರಗಳಲ್ಲಿ ಸರಕಾರ ಗೊತ್ತು ಪಡಿಸಿದ ಬಾಡಿಗೆಗೆ ಸಿಗುತ್ತವೆ.ಈ ಹಿಂದೆ ರಾಜ್ಯದ 490 ಹೋಬಳಿಗಳಲ್ಲಿ 696 ಯಂತ್ರಧಾರೆ ಕೇಂದ್ರಗಳಿದ್ದವು. ಆದರೆ ಕಳೆದ ನವೆಂಬರ್‌ನಿಂದಲೇ ಬಹುತೇಕ ಕೇಂದ್ರಗಳ ಟೆಂಡರ್‌ ಅವಧಿ ಮುಗಿದಿದ್ದು, ಮರು ಟೆಂಡರ್‌ ಅಥವಾ ಗುತ್ತಿಗೆ ನವೀಕರಣ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಕೆಲವು ಕಡೆ ಈ ಹಿಂದೆ ಟೆಂಡರ್‌ ಪಡೆದವರೇ ಹೆಸರಿಗೆ ಮಾತ್ರ ಕೇಂದ್ರಗಳನ್ನು ಮುಂದುವರಿಸುತ್ತಿದ್ದು, ಸರಿಯಾದ ಸೇವೆಗಳು ಸಿಗುತ್ತಿಲ್ಲ.

ಯಂತ್ರಧಾರೆ ಕೇಂದ್ರ ಯಾಕೆ ಬೇಕು?
ಇಲ್ಲಿ ಸರಕಾರದಿಂದ ಶಿಫಾರಸು ಮಾಡಲಾದ ಕಡಿಮೆ ಬಾಡಿಗೆ ವ್ಯವಸ್ಥೆ ಇರುವುದರಿಂದ ಖಾಸಗಿಯವರ ದರ ಸಮರ, ರೈತರ ಶೋಷಣೆಯನ್ನು ನಿಯಂತ್ರಿಸಲು ಸಾಕಷ್ಟು ಅನುಕೂಲವಾಗುತ್ತಿದೆ. ಉದಾಹರಣೆಗೆ, ಕರಾವಳಿಯಲ್ಲಿ ಭತ್ತ ಕಟಾವು ಯಂತ್ರಕ್ಕೆ ಖಾಸಗಿಯಲ್ಲಿ ತಾಸಿಗೆ 2,200 2,300 ರೂ. ತನಕ ಬಾಡಿಗೆ ಇದೆ. ಆದರೆ ಯಂತ್ರಧಾರೆ ಕೇಂದ್ರದಲ್ಲಿ ತಾಸಿಗೆ 1,800ರಿಂದ 2,000 ರೂ. ಒಳಗೆ ಯಂತ್ರ ಸಿಗುವುದರಿಂದ ಖಾಸಗಿಯವರು ತಮ್ಮಿಚ್ಛೆಯಂತೆ ಬಾಡಿಗೆ ಏರಿಸಲು ಹಿಂದೇಟು ಹಾಕುತ್ತಾರೆ. ಈ ಬಾರಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಂತ್ರಧಾರೆ ಕೇಂದ್ರಗಳು ಸರಿಯಾಗಿ ಕಾರ್ಯ ನಿರ್ವಹಿಸದಿರುವುದರಿಂದ ಖಾಸಗಿ ಯಂತ್ರಗಳು ಅಲ್ಲಲ್ಲಿ ತಾಸಿಗೆ 2,500 ರೂ. ತನಕ ಬಾಡಿಗೆ ಕೇಳುತ್ತಿರುವ ದೂರುಗಳಿವೆ.

ನಿರ್ವಹಣೆಗೆ ಆಸಕ್ತಿಯ ಕೊರತೆ
ಆರಂಭದಲ್ಲಿ ಯಂತ್ರಧಾರೆ ಕೇಂದ್ರಗಳ ನಿರ್ವಹಣೆಗೆ ಖಾಸಗಿಯವರು ಆಸಕ್ತಿ ತೋರುತ್ತಿದ್ದರು. ಆದರೆ ಡೀಸೆಲ್‌ ದುಬಾರಿ, ಚಾಲಕ  ಸಿಬಂದಿ ಕೊರತೆ, ನಿರ್ವಹಣೆಗೆ ಸರಕಾರದ ಅಸಹಕಾರ ಮುಂತಾದ ಕಾರಣಗಳಿಂದ ಮರುಗುತ್ತಿಗೆಗೆ ಆಸಕ್ತಿ ವಹಿಸುತ್ತಿಲ್ಲ. ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ವಹಿಸಲಾಗುತ್ತಿರುವ 25 ಜಿಲ್ಲೆಗಳ 164 ಕೇಂದ್ರಗಳು ಮಾತ್ರ ಬಹುತೇಕ ಚಾಲನೆಯಲ್ಲಿದ್ದು, ಇತರ ಕೇಂದ್ರಗಳು ಬಹುತೇಕ ವಿಫಲವಾಗಿವೆ.
ಟೆಂಡರ್‌ ಅವಧಿ ಮುಗಿದ ಕೇಂದ್ರಗಳಿಗೆ ಮರು ಟೆಂಡರ್‌ ಹಾಗೂ ಹೆಚ್ಚುವರಿ ಮತ್ತು ಹೊಸ ಯಂತ್ರೋಪಕರಣ ಖರೀದಿಗೆ ಸಹಕಾರ ನೀಡುವ ಮೂಲಕ ಯಂತ್ರಧಾರೆ ಕೇಂದ್ರಗಳಿಗೆ ಶಕ್ತಿ ತುಂಬಬೇಕು ಎನ್ನುವ ಆಗ್ರಹ ರೈತ ವಲಯದಲ್ಲಿದೆ.

“ಯಂತ್ರಧಾರೆ ಕೇಂದ್ರಗಳ ಗುತ್ತಿಗೆ ಅವಧಿ ಮುಗಿದು ಹಲವು ತಿಂಗಳು ಕಳೆದಿದ್ದು, ಪ್ರಸ್ತುತ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮರು ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಆಸಕ್ತರನ್ನು ಗುರುತಿಸಿ ಜವಾಬ್ದಾರಿ ನೀಡಲಾಗುವುದು.”  – ಪೂರ್ಣಿಮಾ ಜೆ.ಸಿ., ಜಂಟಿ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ

Advertisement

“15 ಯಂತ್ರಧಾರೆ ಕೇಂದ್ರಗಳಲ್ಲಿ ನಾಲ್ಕು ಕೇಂದ್ರಗಳ ಟೆಂಡರ್‌ ನವೀಕರಣ ಬಾಕಿ ಇದೆ. ಕೆಲವು ಕಡೆ ಯಂತ್ರೋಪಕರಣಗಳ ಸಮಸ್ಯೆ ಇರುವುದು ಕೂಡ ಗಮನದಲ್ಲಿದೆ.” – ಹೊನ್ನಪ್ಪ ಗೌಡ, ಜಂಟಿ ಕೃಷಿ ನಿರ್ದೇಶಕರು, ದ.ಕ. ಜಿಲ್ಲೆ

ಕರಾವಳಿಯಲ್ಲೆಷ್ಟು ಕೇಂದ್ರಗಳು?
ಉಡುಪಿ ಜಿಲ್ಲೆಯಲ್ಲಿ ನಾಲ್ಕು ಕೇಂದ್ರಗಳ ಗುತ್ತಿಗೆ ಅವಧಿ ಈಗಾಗಲೇ ಮುಗಿದಿದ್ದು, ಮೂರು ಮಾತ್ರ ಚಾಲ್ತಿಯಲ್ಲಿವೆ. ದಕ್ಷಿಣ ಕನ್ನಡದ 15 ಕೇಂದ್ರಗಳಲ್ಲಿ ನಾಲ್ಕು ಕೇಂದ್ರಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಹಾಗೂ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದರೂ ಅಲ್ಲಿನ ಯಂತ್ರಗಳು ಹಳೆಯದಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next