Advertisement

ವಿದ್ಯಾರ್ಥಿಗಳಿಗೆ ವಿವೇಕಾನಂದರೇ ಸ್ಫೂರ್ತಿಯ ಚಿಲುಮೆ: ಕೇಶವ ಬಂಗೇರ

05:26 AM Jan 13, 2019 | |

ಮಹಾನಗರ: ವಿದ್ಯಾರ್ಥಿ ಬದುಕು ಜೀವನದ ಅತ್ಯಮೂಲ್ಯ ಕನಸುಗಳ ಕಾಣುವ ಮಹಾಪರ್ವ ಕಾಲ. ಅಂಥ ಸಂದರ್ಭದಲ್ಲಿ ಬಗೆಬಗೆಯ ತುಮುಲಗಳಿಗೆ ಒಳಗಾಗಿ ಜೀವನೋತ್ಸಾಹ ಕಳೆದುಕೊಳ್ಳಬಾರದು ಎಂದು ಕುದ್ರೋಳಿ ಶ್ರೀ ನಾರಾಯಣ ಗುರು ಕಾಲೇಜಿನ ಕನ್ನಡ ಉಪನ್ಯಾಸಕ ಕೇಶವ ಬಂಗೇರ ಸಲಹೆ ನೀಡಿದರು.

Advertisement

ಸುವರ್ಣ ಸಂಭ್ರಮದಲ್ಲಿರುವ ‘ಉದಯವಾಣಿ’ ಸಹಭಾಗಿತ್ವದಲ್ಲಿ ಕೊಡಿಯಾಲ್‌ಬೈಲಿನ ಶಾರದಾ ಶಿಕ್ಷಣ ಸಮೂಹ ಸಂಸ್ಥೆಯ ಜ್ಞಾನ ಮಂದಿರದಲ್ಲಿ ಶನಿವಾರ ಆಯೋಜಿಸಲಾದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ‘ರಾಷ್ಟ್ರೀಯ ಯುವ ದಿನ’ದಲ್ಲಿ ಭಾಗವಹಿಸಿ ಅವರು ಉಪನ್ಯಾಸ ನೀಡಿದರು.

ಸ್ವಾಮಿ ವಿವೇಕಾನಂದರ ಜೀವನ ಸ್ಫೂರ್ತಿಯ ಸಂದೇಶಗಳ ಅನುಷ್ಠಾನದ ಮುಖೇನ ವಿದ್ಯಾರ್ಥಿಗಳು ಜೀವನ ಪ್ರೀತಿ ಬೆಳೆಸಿಕೊಳ್ಳಲು ಸಾಧ್ಯ ಎಂದ ಅವರು, ಜೀವನ ಪ್ರೀತಿ ಕಳೆದುಕೊಂಡು, ವಿದ್ಯಾರ್ಥಿಗಳು ಜೀವನದಿಂದ ವಿಮುಖರಾಗುವಂಥ ಘಟನೆಗಳು ನಡೆಯುತ್ತಿರುವುದು ದೌರ್ಭಾಗ್ಯ. ಇಂಥ ಪರಿಸ್ಥಿತಿಗಳಿಂದ ವಿದ್ಯಾರ್ಥಿಗಳನ್ನು ಹೊರತಂದು ಅವರಲ್ಲಿ ಜೀವನ ಪ್ರೀತಿ ಬೆಳೆಸುವ ಮಹಾನ್‌ಕಾರ್ಯ ವಿವೇಕಾನಂದರ ಸಂದೇಶದಿಂದ ಸಾಧ್ಯ ಎಂದರು.

ಸದೃಢ ಶರೀರ ಹಾಗೂ ಅದ್ಬುತ ಬುದ್ಧಿವಂತಿಕೆಯ ಮುಖೇನವಾಗಿ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ಸ್ವಾಮಿ ವಿವೇಕಾನಂದರು ತೋರಿಸಿಕೊಟ್ಟಿದ್ದಾರೆ. ತಾಯ್ನಾಡಿನ ಮೇಲಿನ ಪ್ರೀತಿ ಹಾಗೂ ಹೊರಜಗತ್ತಿನಲ್ಲಿ ತಾಯ್ನಾಡಿಗೆ ಸಲ್ಲಬಹುದಾದ ಗೌರವ ಹೇಗೆ ಎಂಬುದನ್ನು ವಿವೇಕಾನಂದರು ಅಭಿವ್ಯಕ್ತಗೊಳಿಸಿದ್ದಾರೆ. ನಮ್ಮ ಬಗ್ಗೆಯೇ ಕೀಳರಿಮೆ ಹೊಂದುವ ಬದಲು ನಮ್ಮೊಳಗಿನ ಅಂತಃಶಕ್ತಿಯನ್ನು ಜಾಗೃತ ಗೊಳಿಸಿಕೊಳ್ಳಬೇಕೆಂಬ ಅವರ ವಿವೇಕವಾಣಿ ನಮ್ಮೆಲ್ಲರಿಗೆ ಮಾರ್ಗದರ್ಶಕವಾಗಲಿ. ಯಾವುದೇ ಕಾರ್ಯ ಮಾಡುವಾಗ ಸಾಧ್ಯವಿಲ್ಲ ಎಂದು ಸ್ತಬ್ಧವಾಗಿಬಿಟ್ಟರೆ ಏನನ್ನೂ ಮಾಡಲಾಗದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಶಾರದಾ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಮಾತನಾಡಿ, ಸ್ವಾಮಿ ವಿವೇಕಾನಂದರ ಕುರಿತ ಆದರ್ಶದ ಜೀವನ ಸಂದೇಶ ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಬೇಕು. ಜನ್ಮ ಭೂಮಿಯ ಮೇಲಿನ ಪ್ರೀತಿ ನಮ್ಮೆಲ್ಲರಲ್ಲೂ ಮೊದಲ ಆದ್ಯತೆಯಾಗಲಿ ಎಂದರು.

Advertisement

’50 ವರ್ಷಗಳಿಂದ ಉದಯವಾಣಿ ಪತ್ರಿಕೆ ಅಗ್ರಗಣ್ಯ ಪತ್ರಿಕೆಯಾಗಿ ಮೂಡಿಬಂದಿದ್ದು, ಸಮಾಜಮುಖೀ ಚಟುವಟಿಕೆಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ. ಕರಾವಳಿ ಭಾಗದ ಅಭ್ಯುದ ಯಕ್ಕೆ ಪತ್ರಿಕೆಯ ಕೊಡುಗೆ ಅಪಾರ’ ಎಂದರು.

ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಸುನೀತಾ ವಿ.ಮಡಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಗಳಾದ ಅತುಲ್‌ ಹಾಗೂ ಧೃತಿ ರೈ ಸ್ವಾಮಿ ವಿವೇಕಾನಂದರ ಕುರಿತಂತೆ ಮಾತನಾಡಿದರು. ಉದಯವಾಣಿ ಮಾರುಕಟ್ಟೆ ವಿಭಾಗ ಮುಖ್ಯಸ್ಥ ರಾಮಚಂದ್ರ ಮಿಜಾರ್‌ ಸ್ವಾಗತಿಸಿದರು. ಮಂಗಳೂರು ಸುದ್ದಿ ವಿಭಾಗ ಮುಖ್ಯಸ್ಥ ಮನೋಹರ ಪ್ರಸಾದ್‌ ನಿರೂಪಿಸಿದರು. ವಿದ್ಯಾರ್ಥಿನಿ ವೈಷ್ಣವಿ ಎಸ್‌ ವಂದಿಸಿದರು.

ವಿವೇಕಾನಂದರ ಹೆಸರೇ ನವೋಲ್ಲಾಸ!
ವಿವೇಕಾನಂದರನ್ನು ನೆನಪು ಮಾಡಿಕೊಳ್ಳುವಾಗಲೇ ದೇಹದಲ್ಲಿ ಹೊಸ ಸಂಚಲನ ಸೃಷ್ಟಿಯಾಗುತ್ತದೆ. ನಮ್ಮ ಮುಂದೆ ಅವರು ಇಲ್ಲದಿದ್ದರೂ, ಅವರ ಚಿತ್ರಗಳನ್ನು ನೋಡಿದ ತತ್‌ಕ್ಷಣವೇ ಜೀವನದಲ್ಲಿ ನವೋಲ್ಲಾಸ ಮೂಡಿಬರುತ್ತದೆ. ಅವರ ದಿವ್ಯ ತೇಜಸ್ಸು ಮನದ ಉಲ್ಲಾಸಕ್ಕೆ ಶಕ್ತಿ ನೀಡುತ್ತದೆ. ದೇಹವೆಲ್ಲ ನವ ಚೈತನ್ಯದಿಂದ ಕಂಗೊಳಿಸಿ ರಾಷ್ಟ್ರ ಪ್ರೀತಿಯ ಕನಸುಗಳಿಗೆ ಜೀವ ದೊರೆಯುತ್ತದೆ.
-ಕೇಶವ ಬಂಗೇರ 

Advertisement

Udayavani is now on Telegram. Click here to join our channel and stay updated with the latest news.

Next