Advertisement

ಬೆಂಗ್ರೆ ಅತ್ಯಾಚಾರ: 3 ಆರೋಪಿಗಳು ತಿಂಗಳಲ್ಲಿಯೇ ಹೊರ; ಅಸಮಾಧಾನ

06:04 AM Feb 04, 2019 | Team Udayavani |

ಮಹಾನಗರ: ಬೆಂಗ್ರೆಯಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 6 ಮಂದಿ ಆರೋಪಿಗಳ ಪೈಕಿ ಮೂವರು ಆರೋಪಿಗಳು ನ್ಯಾಯಾಂಗಬಂಧನ ದಿಂದ ಅತಿ ಶೀಘ್ರದಲ್ಲಿಯೇ ಹೊರ ಬಂದಿರುವ ಬಗ್ಗೆ ರವಿವಾರ ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ದಲಿತ ಕುಂದು ಕೊರತೆ ಸಂಬಂಧಿತ ಮಾಸಿಕ ಸಭೆಯಲ್ಲಿ ದಲಿತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

Advertisement

ದಲಿತ ಮುಖಂಡ ಸದಾಶಿವ ಉರ್ವ ಸ್ಟೋರ್‌ ಅವರು ವಿಷಯ ಪ್ರಸ್ತಾವಿಸಿ, ಬೆಂಗ್ರೆ ಗ್ಯಾಂಗ್‌ ರೇಪ್‌ ಪ್ರಕರಣದ 3 ಆರೋಪಿಗಳು ಒಂದೇ ತಿಂಗಳಲ್ಲಿ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಹೊರಗೆ ಬಂದಿದ್ದಾರೆ. ಸಂತ್ರಸ್ತ ಯುವತಿ ಇನ್ನೂ ರಿಮಾಂಡ್‌ ಹೋಂನಲ್ಲಿದ್ದಾಳೆ. ಜಾಮೀನಿನಲ್ಲಿ ಹೊರ ಬಂದಿರುವ ಆರೋಪಿಗಳು ಈಗ ಆರಾಮವಾಗಿ ತಿರುಗಾಡುತ್ತಿದ್ದಾರೆ. ಹಾಗಾಗಿ ಇಲ್ಲಿ ಪೊಲೀಸರು ಪ್ರಕರಣ ದಾಖಲಿಸುವಾಗ ಸಾಕಷ್ಟು ಬಿಗಿಯಾದ ಸೆಕ್ಷನ್‌ಗಳನ್ನು ಹಾಕಿಲ್ಲವೇ ಎಂಬ ಸಂಶಯ ಬರುತ್ತಿದೆ ಎಂದರು.

ಇದಕ್ಕೆ ಉತ್ತರಿಸಿದ ಡಿಸಿಪಿ ಉಮಾ ಪ್ರಶಾಂತ್‌, ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡುತ್ತದೆ. ನ್ಯಾಯಾಂಗದ ಪ್ರಕ್ರಿಯೆಯನ್ನು ನಾವು ಪ್ರಶ್ನಿಸುವಂತಿಲ್ಲ. ಆದರೆ ಆರೋಪಿಗಳಿಗೆ ಜಾಮೀನು ನೀಡಿರುವ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದರು.

ಆರೋಪಿಗಳು ವಕೀಲರನ್ನು ಹಿಡಿದು ಅವರ ಮೂಲಕ ಜಾಮೀನು ಪಡೆದು ಹೊರ ಬರುತ್ತಾರೆ. ಇಂತಹ ಪ್ರಕರಣಗಳಲ್ಲಿ ವಕಾಲತ್ತು ವಹಿಸ ಬಾರದೆಂದು ಸಮಾಜದ ಜನರು ವಕೀಲರನ್ನು ಕೋರಿಕೊಳ್ಳ ಬಹುದು ಎಂದು ಸಭೆಯಲ್ಲಿ ಉಪಸಿœತರಿದ್ದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶ ನಾಲಯದ ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ ತಿಳಿಸಿದರು.

ಉರ್ವಸ್ಟೋರ್‌ ಬಸ್‌ ನಿಲ್ದಾಣದ ಬಳಿ ಬೆಳಗ್ಗೆ 8ರಿಂದ 10 ಗಂಟೆ ತನಕ ಹಾಗೂ ಸಂಜೆ 5ರಿಂದ 7 ಗಂಟೆವರೆಗೆ ಪ್ರಯಾಣಿಕರ ದಟ್ಟಣೆ ಇರುತ್ತದೆ. 3- 4 ಬಸ್‌ಗಳು ಒಟ್ಟಿಗೆ ಬಂದು ನಿಲ್ಲುತ್ತವೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ. ಆದ್ದರಿಂದ ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಪೊಲೀಸ್‌ ಸಿಬಂದಿಯನ್ನು ನೇಮಕ ಮಾಡಬೇಕು ಎಂದು ಸದಾಶಿವ ಉರ್ವಸ್ಟೋರ್‌ ಮನವಿ ಮಾಡಿದರು. ಬಜಪೆ ಪೊಲೀಸ್‌ ಠಾಣೆಯಲ್ಲಿ ಅಲ್ಲಿನ ಠಾಣಾಧಿಕಾರಿಯಿಂದ ದಲಿತರಿಗೆ ಸೂಕ್ತ ಸ್ಪಂದನೆ ಲಭಿಸುತ್ತಿಲ್ಲ ಎಂದು ಆರೋಪಿಸಿದರು.

Advertisement

ಪಚ್ಚನಾಡಿಯಲ್ಲಿ ಮಹಾನಗರ ಪಾಲಿಕೆಯ ನೆರವು ಪಡೆದು ಮನೆ ಕಟ್ಟಿಸಿ, ಹಕ್ಕು ಪತ್ರವನ್ನೂ ಹೊಂದಿದ್ದು, ಹಲವು ವರ್ಷಗಳಿಂದ ವಾಸವಾಗಿರುವ ದಲಿತ ಮಹಿಳೆಯ ಅಂಗಳದಲ್ಲಿ ಇದೀಗ ಇನ್ನೋರ್ವ ವ್ಯಕ್ತಿ ಮನೆ ಕಟ್ಟಿಸುತ್ತಿದ್ದು, ಇದರಿಂದ ದಲಿತ ಮಹಿಳೆಗೆ ಸಮಸ್ಯೆಯಾಗಿದೆ. ಮನೆಯನ್ನು ತೆರವು ಮಾಡುವಂತೆ ಪಾಲಿಕೆ ಆದೇಶ ನೀಡಿದರೂ ಕಾರ್ಯಗತವಾಗಿಲ್ಲ ಎಂದು ದಲಿತ ಮುಖಂಡರೊಬ್ಬರು ದೂರು ನೀಡಿದರು. ಈ ಬಗ್ಗೆ ಪಾಲಿಕೆಗೆ ರಕ್ಷಣೆ ಬೇಕಿದ್ದರೆ ನಾವು ಕೊಡ ಬಹುದು, ತೆರವು ಕಾರ್ಯಾಚರಣೆಯನ್ನು ಪಾಲಿಕೆಯೇ ಮಾಡಬೇಕಾಗಿದೆ ಎಂದು ಡಿಸಿಪಿ ಉಮಾ ಪ್ರಶಾಂತ್‌ ತಿಳಿಸಿದರು.

ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ
ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡ ಶಿವನಾಥನ್‌ ಪ್ರಕರಣದಲ್ಲಿ ಎರಡು ವರ್ಷ ಗಳಾದರೂ ನ್ಯಾಯ ಸಿಕ್ಕಿಲ್ಲ ಎಂದು ದಲಿತ ಮಹಿಳೆ ಪ್ರಸ್ತಾವಿಸಿದರು. ಇದಕ್ಕೆ ಉತ್ತರಿಸಿದ ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಈ ಪ್ರಕರಣದಲ್ಲಿ ಶಿವನಾಥನ್‌ ಪಡೆದುಕೊಂಡಿರುವ ಜಾತಿ ಪ್ರಮಾಣ ಪತ್ರ ರದ್ದು ಪಡಿಸಲಾಗಿದೆ. ಇದೀಗ ಆರೋಪಿ ವಿರುದ್ಧ ಕ್ರಮ ಜರಗಿಸುವ ಬಗ್ಗೆ ಅನುಮತಿ ಕೋರಿ ಎಡಿಜಿಪಿಗೆ ಪತ್ರ ಬರೆಯಲಾಗಿದೆ. ಎಡಿಜಿಪಿ ಅವರಿಂದ ಅನುಮತಿ ಲಭಿಸಿದ ಕೂಡಲೇ ಪ್ರಕರಣ ದಾಖಲಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next