Advertisement
ಮಂಗಳೂರು ಮಹಾನಗರ ಪಾಲಿಕೆ, ಕಾರ್ಮಿಕ ಇಲಾಖೆ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ | ವೈ.ಭರತ್ ಶೆಟ್ಟಿ ಮತ್ತು ವೇದವ್ಯಾಸ ಕಾಮತ್ ಅವರ ಮಾರ್ಗದರ್ಶನದಲ್ಲಿ ಕೂಳೂರಿನ ಗೋಲ್ಡ್‌ಫಿಂಚ್ ಸಿಟಿ ಮೈದಾನದಲ್ಲಿ ವಲಸೆ ಕಾರ್ಮಿಕರನ್ನು ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಕಳುಹಿಸಿ ಕೊಡುವ ಪ್ರಕ್ರಿಯೆ ನಡೆಯಿತು. ಕಾರ್ಮಿಕರ ಹೆಸರು, ಮೊಬೈಲ್ ನಂಬರ್‌ಗಳನ್ನು ನೋಂದಾಯಿಸಿಕೊಳ್ಳಲಾಯಿತು.
ಬಾಗಲಕೋಟೆ, ಬಾದಾಮಿ, ಕೊಪ್ಪಳ, ಕುಷ್ಟಗಿ, ಮೈಸೂರು, ಬೆಂಗಳೂರು, ಹಾಸನ, ಚಿಕ್ಕಮಗಳೂರು, ಮಡಿಕೇರಿ, ಬಳ್ಳಾರಿ ಮೊದಲಾದ ಜಿಲ್ಲೆಗಳಿಗೆ 26ಕ್ಕೂ ಹೆಚ್ಚು ಬಸ್‌ಗಳಲ್ಲಿ ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು. ಒಂದು ಬಸ್‌ನಲ್ಲಿ 25 ಮಂದಿಗೆ ಅವಕಾಶ ನೀಡಲಾಗಿತ್ತು. ಮಕ್ಕಳಿದ್ದ ಸಂದರ್ಭ ಹೆಚ್ಚುವರಿಯಾಗಿ 5 ಮಂದಿ ಮಕ್ಕಳಿಗೆ ಅವಕಾಶ ನೀಡಲಾಯಿತು. ರಾತ್ರಿವರೆಗೂ ಪ್ರಕ್ರಿಯೆ ಮುಂದುವರಿದಿತ್ತು. ಪ್ರಯಾಣಿಕರಿಗೆ ನೀರು, ಬಿಸ್ಕತ್, ಹಣ್ಣು ಹಂಪಲುಗಳನ್ನು ನೀಡಲಾಯಿತು. ಹೊರ ರಾಜ್ಯದವರ ನೋಂದಣಿ
ಮಂಗಳೂರು ನಗರ ವ್ಯಾಪ್ತಿಯಲ್ಲಿರುವ ಹೊರ ರಾಜ್ಯಗಳ ಕಾರ್ಮಿಕರಿಗೂ ತಮ್ಮ ಊರುಗಳಿಗೆ ಕಳುಹಿಸಿಸುವ ಪ್ರಕ್ರಿಯೆ ಆರಂಭವಾಗಿದೆ. ಸೋಮವಾರ ಬೆಳಗ್ಗಿನಿಂದ ಮಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಎದುರು ಹೊರ ರಾಜ್ಯ ಗಳಿಗೆ ತೆರಳುವ ಕಾರ್ಮಿಕರು ತಮ್ಮ ಹೆಸರು ನೋಂದಣಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಸರಕಾರದ ಮಾರ್ಗಸೂಚಿಯಂತೆ ಹೊರ ರಾಜ್ಯ ಗಳಿಗೆ ತೆರಳುವ ಕಾರ್ಮಿಕರು ಅಗತ್ಯ ದಾಖಲೆ ನೀಡಿ ಹೆಸರು ನೋಂದಾಯಿಸಿದ ಬಳಿಕ ಅವರನ್ನು ಕಳುಹಿಸಿ ಕೊಡುವ ಪ್ರಕ್ರಿಯೆ ನಡೆಯಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.