Advertisement

ಮಂಗಳೂರು ಲಾಕ್‌ಡೌನ್‌ : ನಿಷೇಧಾಜ್ಞೆಯ ನಡುವೆಯೂ ಜನ ಸಂಚಾರ

11:32 PM Mar 23, 2020 | mahesh |

ಮಂಗಳೂರು: ಕೋವಿಡ್‌-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ದ.ಕ. ಜಿಲ್ಲೆಯನ್ನು ಮಾ. 31ರ ವರೆಗೆ ರಾಜ್ಯ ಸರಕಾರವು “ಲಾಕ್‌ಡೌನ್‌’ ಎಂದು ಘೋಷಿಸಿದ್ದು, ನಿಷೇಧಾಜ್ಞೆಯ ನಡುವೆಯೂ ಮಂಗಳೂರು ನಗರದಲ್ಲಿ ಸೋಮವಾರ ಬೆಳಗ್ಗೆಯೇ ಜನ ಸಂಚಾರ ಆರಂಭಗೊಂಡಿತ್ತು.

Advertisement

ನಗರದಲ್ಲಿ ಸರಕಾರಿ, ಖಾಸಗಿ ಬಸ್‌ ಸಂಚಾರವಿಲ್ಲದಿದ್ದರೂ ಆಟೋ ರಿಕ್ಷಾ, ಬಾಡಿಗೆ ಕಾರುಗಳು ಸೇರಿದಂತೆ ಸ್ವಂತ ವಾಹನಗಳು ಸಂಚರಿಸುತ್ತಿದ್ದವು. ಸಾರ್ವಜನಿಕರು ಕೂಡ ರಸ್ತೆಗಳಲ್ಲಿ ಓಡಾಡುತ್ತಿದ್ದ ದೃಶ್ಯ ಕಂಡುಬಂತು.

ನಗರದಲ್ಲಿ ಬೆಳಗ್ಗಿನ ವೇಳೆ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು-ಹಂಪಲು ದಿನಸಿ ಖರೀದಿಸಲು ಸಾರ್ವಜನಿಕರು ಮುಗಿಬಿದ್ದಿದ್ದರು. ಅಗತ್ಯ ಸೇವೆಗಳಾದ ಆಹಾರ, ಪಡಿತರ ಅಂಗಡಿ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣು ಸೇರಿದಂತೆ ಸರಕು ಸಾಗಾಣಿಕೆಯಲ್ಲಿ ವ್ಯತ್ಯಯ ಉಂಟಾಗಲಿಲ್ಲ. ಸರಕಾರಿ ಕಚೇರಿಗಳು, ಸ್ಥಳೀಯ ಸಂಸ್ಥೆಗಳು, ರಾಷ್ಟ್ರೀಕೃತ ಬ್ಯಾಂಕ್‌, ಮೆಸ್ಕಾಂ, ನೀರು, ಪೌರ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದವು.

ಮಂಗಳೂರಿನಲ್ಲಿ ಕೊರೊನಾ ವೈರಸ್‌ ದೃಢಪಟ್ಟ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಗಡಿಗಳನ್ನು ಬಂದ್‌ ಮಾಡಲಾಗಿತ್ತು. ಕೊರೊನಾ ಆತಂಕ ಹಿನ್ನೆಲೆಯಲ್ಲಿ ಮನೆಯಲ್ಲೇ ಇರಿ; ರಸ್ತೆಯಲ್ಲಿ ತಿರುಗಾಡಬೇಡಿ ಎಂದು ಪೊಲೀಸರು ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡುತ್ತಿದ್ದರು.

ಮೀನು ಖಾಲಿ ಮಾಡಲು ನಾಳೆ ಕೊನೆದಿನ
ಮಂಗಳೂರು ಬಂದರಿಗೆ ಸಂಬಂಧಿಸಿದಂತೆ ಎಲ್ಲ ಆಳ ಸಮುದ್ರ ಬೋಟುಗಳು ಮಾ. 24ರ ಒಳಗಾಗಿ ದಕ್ಕೆಯನ್ನು ಸೇರಬೇಕು. ಮಾ. 25ರಂದು ಮೀನು ಖಾಲಿ ಮಾಡಲು ಕೊನೆಯ ದಿನವಾಗಿದ್ದು, ಎಲ್ಲ ಬೋಟ್‌ಗಳ ಮಾಲಕರು, ಮೀನುಗಾರರು ಸಹಕರಿಸಬೇಕೆಂದು ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಕಾರ್ಯದರ್ಶಿ ರಾಜೇಶ್‌ ಪುತ್ರನ್‌ ತಿಳಿಸಿದ್ದಾರೆ. ಮಂಗಳೂರಿನ ದಕ್ಕೆಯಲ್ಲಿ ಸದ್ಯ 400ಕ್ಕೂ ಹೆಚ್ಚು ಬೋಟ್‌ಗಳು ಲಂಗರು ಹಾಕಿವೆ.

Advertisement

ಮಾ. 31ರ ವರೆಗೆ ಬಸ್‌ ಸೇವೆ ಬಂದ್‌
ಕೊರೊನಾ ಆತಂಕ ಹಿನ್ನೆಲೆಯಲ್ಲಿ ಮಾ. 31ರ ವರೆಗೆ ಮಂಗಳೂರು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ ಯಾವುದೇ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಮುಂಜಾಗ್ರತಾ ಕ್ರಮವಾಗಿ ನಿಗಮದ ಎಲ್ಲ ದರ್ಜೆಯ ಅಧಿಕಾರಿಗಳಿಗೆ, ಸಿಬಂದಿಗೆ ವೈದ್ಯಕೀಯ ಕಾರಣದ ಮೇರೆಗೆ ರಜೆ ಘೋಷಿಸಿದೆ. ಅದೇರೀತಿ, ಯಾರು ಕೂಡ ಅನಗತ್ಯವಾಗಿ ಬಸ್‌ ನಿಲ್ದಾಣ ಪ್ರವೇಶಿದಂತೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಮುಖ್ಯದ್ವಾರದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. ಮಂಗಳೂರಿನಿಂದ ವಿವಿಧ ಕಡೆಗೆ ಸಂಚರಿಸುವ ಮತ್ತು ಮಂಗಳೂರಿಗೆ ಆಗಮಿಸುವ ಎಲ್ಲಾ ಖಾಸಗಿ ಮತ್ತು ಸಿಟಿ ಬಸ್‌ ಸಂಚಾರವನ್ನು ಮಾ. 31ರ ವರೆಗೆ ರದ್ದುಗೊಳಿಸಲಾಗಿದೆ.

ಆವಶ್ಯಕ ಸೇವೆಗೆ ಮಧ್ಯಾಹ್ನದ ವರೆಗೆ ಅವಕಾಶ; ನಿರ್ಬಂಧ ಬಿಗಿ
ಮಂಗಳೂರು: ಕೊರೊನಾ ಬಾಧಿತ ದ.ಕ. ಜಿಲ್ಲೆಯಲ್ಲಿ ಸೋಮವಾರದಿಂದ ಜಾರಿಯಲ್ಲಿರುವ 144 ಸೆಕ್ಷನ್‌ನಡಿ ಇನ್ನೂ ಕೆಲವು ನಿರ್ಬಂಧಗಳನ್ನು ಹೆಚ್ಚುವರಿಯಾಗಿ ಜಾರಿಗೊಳಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಆದೇಶಿಸಿದ್ದಾರೆ.

ಇದರಂತೆ, ಎಲ್ಲ ಓಲಾ, ಉಬರ್‌, ಟ್ಯಾಕ್ಸೀಸ್‌, ಆಟೋರಿಕ್ಷಾ, ಬಾಡಿಗೆ ವಾಹನ ಸೇವೆಗಳನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಕೇವಲ ತುರ್ತು ಪರಿಸ್ಥಿತಿ ಮತ್ತು ಆವಶ್ಯಕ ವಸ್ತುಗಳ ಸಾಗಾಣಿಕೆಯ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಆವಶ್ಯಕ ಸೇವೆಗಳು ಮತ್ತು ವಸ್ತುಗಳು, ಆಹಾರ, ವೈದ್ಯಕೀಯ ಉಪಕರಣಗಳು, ಔಷಧ, ಇಂಧನ ಮತ್ತು ಕೃಷಿ ಉತ್ಪನ್ನಗಳ ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದ ಕೈಗಾರಿಕೆಗಳ/ ಕಾರ್ಖಾನೆಗಳ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ.

ಆವಶ್ಯಕ ಸೇವೆಗಳಾದ ಆಹಾರ, ಪಡಿತರ ಅಂಗಡಿ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣಿನ ಮಾರುಕಟ್ಟೆ ಮತ್ತು ಸಗಟು ಮತ್ತು ಚಿಲ್ಲರೆ ವ್ಯಾಪಾರದ ಅಂಗಡಿಗಳನ್ನು ಮಾತ್ರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶವಿದೆ.

ದ.ಕ. ಜಿಲ್ಲೆಯಲ್ಲಿ ಮಾ.23ರಿಂದ 31ರವರೆಗೆ 144 ಸೆಕ್ಷನ್‌ ಜಾರಿ ಯಲ್ಲಿದ್ದರೂ ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿರುವುದಿಲ್ಲ. ನೆರೆಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವ ಕಾರಣದಿಂದ ಮನೆಯಿಂದ ಅನಾವಶ್ಯಕವಾಗಿ ಹೊರಬರುವ ಸಾರ್ವಜನಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಉಳಿದಂತೆ ರಸ್ತೆ ಸಾರಿಗೆ ನಿಗಮ ಮತ್ತು ಖಾಸಗಿ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಸಂಪೂರ್ಣ ಸ್ಥಗಿತ, ದ.ಕ. ಜಿಲ್ಲೆಯಾದ್ಯಂತ ಅಂತಾರಾಜ್ಯ ಮತ್ತು ಅಂತರ್‌ ಜಿಲ್ಲೆ ಸಾರಿಗೆ ಸಂಚಾರ ಸೇವೆಗಳು ಕಾರ್ಯಾಚರಣೆ ಇಲ್ಲ. ಬೀಚ್‌, ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next