Advertisement

ಮಂಗಳೂರು: ನರ್ಮ್ ಬಸ್‌ ಓಡಾಟಕ್ಕೆ ಕೂಡಿ ಬಾರದ ಮುಹೂರ್ತ

05:19 PM Feb 08, 2024 | Team Udayavani |

ಪಣಂಬೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಹಲವೆಡೆಗಳಿಗೆ ನರ್ಮ್ ಬಸ್‌ ಓಡಾಟಕ್ಕೆ ಪ್ರಯಾಣಿಕರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಮಹಿಳಾ ಪ್ರಯಾಣಿಕರಿಗೆ ಆಯ್ದ ಸರಕಾರಿ ಬಸ್‌ಗಳಲ್ಲಿ ಪ್ರಯಾಣ ಉಚಿತವಾಗಿರುವ
ಕಾರಣ ರದ್ದಾಗಿರುವ ಹಾಗೂ ಈಗಾಗಲೇ ಮನವಿ ಸಲ್ಲಿಸಿದ್ದ ರಸ್ತೆಗಳಲ್ಲಿಯೂ ನರ್ಮ್ ಬಸ್‌ ಓಡಾಟಕ್ಕೆ ಆಗ್ರಹ ಹೆಚ್ಚಿದೆ.

Advertisement

ಹಲವಾರು ವರ್ಷಗಳಿಂದ ಸರಕಾರಿ ಬಸ್‌ ಬೇಕು ಎಂಬ ತಣ್ಣೀರುಬಾವಿ, ಬೆಂಗ್ರೆ ಜನರ ಬೇಡಿಕೆ ಈಡೇರುವ ಲಕ್ಷಣ ಕಂಡುಬಂದಿತ್ತು. ಬಳಿಕ ಕಾರಣಾಂತರಗಳಿಂದ ಅದು ಅರ್ಧಕ್ಕೇ ನಿಂತಿತು. ಈಗ ಇದರ ಜತೆಗೆ ಬೈಕಂಪಾಡಿ ಪಣಂಬೂರು ಬೀಚ್‌, ಮೀನ ಞಕಳಿಯಕ್ಕೂ ನರ್ಮ್ ಬಸ್‌ಗಳಿಗೆ ಬೇಡಿಕೆಯಿದೆ.

ಸರಕಾರಿ ಬಸ್‌ ಓಡಾಟಕ್ಕೆ ಸಂಬಂಧಿಸಿದಂತೆ ಪ್ರಾಥಮಿಕವಾಗಿ ಪ್ರಯಾಣಿಕರ ಲಭ್ಯತೆ ಬಗ್ಗೆ ಸ್ಥಳೀಯರು ಮಾಹಿತಿ ಸಂಗ್ರಹ ಮಾಡಿ ಸರಕಾರಕ್ಕೆ ನೀಡಲು ಸಿದ್ಧವಾಗಿದ್ದರು. ಆದರೆ ಪ್ರಕ್ರಿಯೆ ಮುಂದುವರಿಯಲಿಲ್ಲ.

ನಾಯರ್‌ ಕುದ್ರು ಅಭಿವೃದ್ಧಿಗೆ 40 ಕೋಟಿ ರೂ., ತೋಟ ಬೆಂಗ್ರೆ ಪ್ರದೇಶದಲ್ಲಿ ಮೀನುಗಾರಿಕೆ ಅಭಿವೃದ್ಧಿ, ತಣ್ಣೀರುಬಾವಿ ಬ್ಲೂ ಫ್ಲ್ಯಾಗ್‌ ಬೀಚ್‌ ಕೇಂದ್ರ ಹೀಗೆ ಈ ಭಾಗವು ಪ್ರವಾಸಿ ಡೆಸ್ಟಿನೇಶನ್‌ ತಾಣವಾಗಿ ಭವಿಷ್ಯದಲ್ಲಿ ತಣ್ಣೀರುಬಾವಿ, ಬೆಂಗ್ರೆ ವ್ಯಾಪ್ತಿಯು
ಭೂಪಟದಲ್ಲಿ ರಾರಾಜಿಸಲಿರುವುದರಿಂದ ಪೂರ್ವಭಾವಿಯಾಗಿ ಸರಕಾರಿ ಬಸ್‌ಗಳನ್ನು ಈ ಮಾರ್ಗವಾಗಿ ಓಡಿಸಲು ಈಗಿನಿಂದಲೇ
ತಯಾರಿ ನಡೆಸಬೇಕೆಂಬುದು ಸ್ಥಳೀಯರ ಆಗ್ರಹ.

ಬೆಂಗ್ರೆ ಪ್ರದೇಶದಲ್ಲಿ ಸಾವಿರಾರು ಕುಟುಂಬಗಳು ವಾಸವಿದ್ದು, ಕಾಲೇಜು ಶಿಕ್ಷಣ, ಆಸ್ಪತ್ರೆ, ಉದ್ಯೋಗ ಹೀಗೆ ಪ್ರತಿಯೊಂದಕ್ಕೂ ಮಂಗಳೂರು ನಗರವನ್ನು ಇಲ್ಲಿಯ ಜನತೆ ಅವಲಂಬಿಸಿದ್ದಾರೆ. ರಾತ್ರಿಯಾದರೆ ದೋಣಿ ಸಂಚಾರ ಸ್ಥಗಿತವಾಗುತ್ತದೆ. ನೂರಾರು ಮಂದಿ ಕಾರ್ಮಿಕರು ಈ ಭಾಗದಲ್ಲಿ ಬಾಡಿಗೆ ಮನೆಗಳಲ್ಲಿ ನೆಲೆಸಿದ್ದಾರೆ. ಮೀನುಗಾರಿಕೆಗೆ ಬರುವ ಕಾರ್ಮಿಕರ ಸಂಖ್ಯೆಯೂ
ಹೆಚ್ಚುತ್ತಿದೆ. ಮಾತ್ರವಲ್ಲ ತಡರಾತ್ರಿ ಕೆಲಸ ಮುಗಿಸಿ ಬರುವ ಮಂದಿಗೆ ಬಸ್‌ ಪ್ರಯಾಣದ ಸೌಕರ್ಯ ಈ ಭಾಗದಲ್ಲಿ ಸಿಗುತ್ತಿಲ್ಲ. ಹೀಗಾಗಿ ನರ್ಮ್ ಬಸ್‌ ಓಡಾಟದ ಕೂಗು ಹೆಚ್ಚಿದೆ.

Advertisement

ಸಾವಿರಾರು ಜನರಿಗೆ ಬಸ್‌ ಪ್ರಯಾಣ ಸರಿಯಾದ ಸಮಯಕ್ಕೆ ಸಿಗಬೇಕಿದೆ ಎಂಬುದೇ ನಮ್ಮ ಉದ್ದೇಶ. ಜತೆಗೆ ಸರಕಾರದ ಉಚಿತ ಪ್ರಯಾಣದ ಸೌಲಭ್ಯ ಮಹಿಳಾ ಕಾರ್ಮಿಕರಿಗೆ ಸಿಗಬೇಕು ಎನ್ನುತ್ತಾರೆ ಸ್ಥಳೀಯ ಮುಖಂಡರಾದ ಅರವಿಂದ್‌ ಬೆಂಗ್ರೆ. ಜನತಾ ಕಾಲನಿ ಬಸ್‌ ಪುನರಾರಂಭಿಸಿ ಸುರತ್ಕಲ್‌ ಬಳಿಯ ವಾರ್ಡ್‌ ನಂಬ್ರ 6ರಲ್ಲಿ ಬರುವ ಜನತಾ ಕಾಲನಿ ಪ್ರದೇಶಕ್ಕಿದ್ದ ಏಕೈಕ ನರ್ಮ್ ಬಸ್‌ ಸ್ಥಗಿತಗೊಂಡಿದ್ದು, ಪುನರರಾಂಭಕ್ಕೆ ಒತ್ತಡ ಹೆಚ್ಚಿದೆ. ಹಿಂದೂ ಧಾರ್ಮಿಕ ಸೇವಾ ಸಮಿತಿ ಹಾಗೂ ಗ್ರಾಮಸ್ಥರು ನರ್ಮ್ ಬಸ್‌ ಆರಂಭಿಸುವ ಮೂಲಕ ಮಹಿಳೆಯ ಉಚಿತ ಪ್ರಯಾಣಕ್ಕೆ ಈ ಭಾಗದಲ್ಲೂ ಅವಕಾಶ ಕಲ್ಪಿಸಬೇಕು ಎಂಬ ಮನವಿಯನ್ನು ಶಾಸಕರಿಗೆ ಸಲ್ಲಿಸಿದ್ದಾರೆ.

ಸಾರಿಗೆ ಸಚಿವರಿಗೆ ಮನವಿ
ಸರಕಾರಿ ನರ್ಮ್ ಬಸ್‌ನ ಬೇಡಿಕೆಯನ್ನು ಸಾರ್ವಜನಿಕರು ಮಂಡಿಸಿದ್ದಾರೆ. ವಿದ್ಯಾರ್ಥಿಗಳಿಗೆ, ಕಾರ್ಮಿಕ ವರ್ಗಕ್ಕೆ ಅನುಕೂಲಕರ ಸಮಯ ನೋಡಿಕೊಂಡು ಬಸ್‌ ಓಡಿಸುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಲಾಗುವುದು.
ಡಾ| ಭರತ್‌ ಶೆಟ್ಟಿ ವೈ., ಶಾಸಕರು ಮಂಗಳೂರು ಉತ್ತರ

*ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next