ಮಹಾನಗರ: ಚುಟುಕು ಕ್ರಿಕೆಟ್ ಕದನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎರಡು ವಾರದ ಹಿಂದೆ ಆರಂಭಗೊಂಡಿದ್ದು ಜನಪ್ರಿಯತೆ ಪಡೆಯುತ್ತಿದೆ. ಈ ಬೆನ್ನಲ್ಲೇ ಮೂರು ವರ್ಷದ ಬಳಿಕ ಮಂಗಳೂರಿನಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ ಐಪಿಎಲ್ ಅಂತಿಮ ಘಟ್ಟದ ಪ್ರಮುಖ ಎರಡು ಪಂದ್ಯಗಳು ಮಂಗಳೂರಿನ ಹಂಪನಕಟ್ಟೆ ಬಳಿಯ ನೆಹರು ಮೈದಾನಿನಲ್ಲಿ ನೇರಪ್ರಸಾರವಾಗಲಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಅದನ್ನು ದೊಡ್ಡ ಪರದೆಯ ಮೂಲಕ ವೀಕ್ಷಿಸಲು ಅವಕಾಶ ಸಿಗಲಿದೆ.
ಕೆಲ ದಿನಗಳ ಹಿಂದೆ ತೀರ್ಮಾನಿಸಿದಂತೆ ಎ.15ರ ಪಂದ್ಯದ ಫ್ಯಾನ್ ಪಾರ್ಕ್ ಅನ್ನು ಮಂಗಳೂರಿನಲ್ಲಿ ಆಯೋಜಿಸಲು ತೀರ್ಮಾನಿ ಸಲಾಗಿತ್ತು. ಆದರೆ, ಚುನಾವಣೆ ನೀತಿ ಸಂಹಿತೆಯ ಕಾರಣ ದಿಂದಾಗಿ ಕೊನೆಯ ಕ್ಷಣದಲ್ಲಿ ಇದು ರದ್ದುಗೊಂಡಿದೆ.
ಐಪಿಎಲ್ ಕ್ರಿಕೆಟ್‌ಗೆ ಕರಾವಳಿ ಭಾಗದಲ್ಲಿ ಹೆಚ್ಚಿನ ಅಭಿಮಾನಿಗಳಿದ್ದಾರೆ ಎನ್ನುವ ಕಾರಣಕ್ಕೆ ಮಂಗಳೂರು ನಗರವನ್ನು ಆಯ್ಕೆ ಮಾಡಲಾಗಿದೆ. ಮಂಗಳೂರಿನ ನೆಹರೂ ಮೈದಾನಿನಲ್ಲಿ 2016ರಲ್ಲಿ ಮೊದಲ ಬಾರಿಗೆ ಆರ್‌ಸಿಬಿ ಮತ್ತು ಗುಜರಾತ್ ಲಯನ್ಸ್ ನಡುವಿನ ಮೊದಲ ಐಪಿಎಲ್ ಕ್ವಾಲಿಫೈಯರ್ ಪಂದ್ಯಾಟವನ್ನು ವೀಕ್ಷಿಸುವ ಅವಕಾಶ ನಗರಕ್ಕೆ ಕೂಡಿ ಬಂದಿತ್ತು.
ಈ ಯಶಸ್ಸಿನ ಬಳಿಕ 2017 ರಲ್ಲಿ ಮತ್ತೆ ಆಯೋಜಿಸಲಾಗಿತ್ತು. 2018ರಲ್ಲಿಯೂ ಫ್ಯಾನ್ ಪಾರ್ಕ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜನೆ ಮಾಡಲಾಗಿತ್ತಾದರೂ ಆ ಬಾರಿ ನಗರದಲ್ಲಿ ಸುರಿದ ಭಾರೀ ಮಳೆಗೆ ಫ್ಯಾನ್ ಪಾರ್ಕ್ ರದ್ದುಗೊಂಡಿತ್ತು. ಗುಡುಗು ಮಿಂಚು ಸಹಿತ ಭಾರೀ ಮಳೆ ಹಾಗೂ ಸ್ಥಳದಲ್ಲಿಯೇ ಓರ್ವನಿಗೆ ಸಿಡಿಲು ಬಡಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಚೆಲ್ಲಾಪಿಲ್ಲಿಯಾಗಿ ಕಾಲ್ಕಿತ್ತ ಘಟನೆ ನಡೆದಿತ್ತು. ಈ ಕಾರಣಕ್ಕೆ ಫ್ಯಾನ್ ಪಾರ್ಕ್ ಪಂದ್ಯಾಟ ವೀಕ್ಷಣೆ ರದ್ದುಗೊಳಿಸಲಾಗಿತ್ತು.
2019ರಲ್ಲಿಯೂ ಫ್ಯಾನ್ ಪಾರ್ಕ್ ಆಯೋಜನೆಗೆ ಮಂಗಳೂರು ಆಯ್ಕೆಗೊಂಡಿತ್ತು. ಈ ಕುರಿತು ಸಿದ್ದತೆಯೂ ನಡೆದಿತ್ತು. ಆದರೆ, ಜಿಲ್ಲೆಯಲ್ಲಿ ಮತದಾನದ ಹಿನ್ನೆಲೆ ಸೆಕ್ಷನ್ ಹಾಕಿರುವ ಕಾರಣ ಕೊನೆಯ ಕ್ಷಣದಲ್ಲಿ ಅನುಮತಿ ದೊರಕಿರಲಿಲ್ಲ. ಇದೀಗ ಮೂರು ವರ್ಷದ ಬಳಿಕ ಮಂಗಳೂರಿನಲ್ಲಿ ಫ್ಯಾನ್ ಪಾರ್ಕ್ ಆಯೋಜನೆಯಾಗುತ್ತಿದೆ.
ಏನಿದು ಫ್ಯಾನ್ ಪಾರ್ಕ್?
ಐಪಿಎಲ್ ಸಂಭ್ರಮವನ್ನು ದೊಡ್ಡ ಪರದೆಯ ಮೂಲಕ ಸಾರ್ವಜನಿಕವಾಗಿ ವೀಕ್ಷಿಸಲು ಮೈದಾನದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಯಾವ ರೀತಿ, ಕ್ರಿಕೆಟ್ ಮೈದಾನದಲ್ಲಿ ಸಿಳ್ಳೆ, ಸಂಭ್ರಮ, ಉತ್ಸಾಹ ಇರುತ್ತದೆಯೋ ಅದೇ ವಾತಾವರಣ ಫ್ಯಾನ್ ಪಾರ್ಕ್‌ನಲ್ಲಿಯೂ ಇರುತ್ತದೆ. ದೊಡ್ಡ ಪರದೆಯಲ್ಲಿ ಕ್ರಿಕೆಟ್ ನೇರಪ್ರಸಾರ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತದೆ.
ಸದ್ಯದಲ್ಲೇ ಆಯೋಜನೆ
ಮಂಗಳೂರಿನಲ್ಲಿ ಮೂರು ವರ್ಷಗಳ ಬಳಿಕ ಐಪಿಎಲ್ ಫ್ಯಾನ್ ಪಾರ್ಕ್ ಅನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಆಯೋಜನೆಗೊಳಿಸಿದ ಪಂದ್ಯವನ್ನು ಚುನಾವಣೆ ನೀತಿ ಸಂಹಿತೆ ಕಾರಣ ರದ್ದಾಗಿದೆ. ಚುನಾವಣೆ ಬಳಿಕ ಪಂದ್ಯಗಳ ಫ್ಯಾನ್‌ಪಾರ್ಕ್ ನಗರದಲ್ಲಿ ಆಯೋಜನೆಗೊಳ್ಳಲಿದೆ. ಸದ್ಯದಲ್ಲೇ ಈ ಕುರಿತು ವೇಳಾಪಟ್ಟಿ ಸಿದ್ಧಗೊಳ್ಳಲಿದೆ.
– ಇಮ್ತಿಯಾಜ್, ಐಪಿಎಲ್
ಫ್ಯಾನ್ ಪಾರ್ಕ್ ಸಂಯೋಜಕರು