Advertisement

ಡ್ರಿಂಕ್‌ ಆ್ಯಂಡ್‌ ಡ್ರೈವ್‌ ವಿರುದ್ಧ ಜಾಗೃತಿ ಅಗತ್ಯ: ನೇಹಾ

07:06 AM Jan 07, 2019 | |

ಮಹಾನಗರ : ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ತಪ್ಪು. ಚಲನ ಚಿತ್ರಗಳಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವ ದೃಶ್ಯಗಳಿಗೆ ನಿಷೇಧ ಹೇರಬೇಕು. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕಾಗಿದೆ ಎಂದು ಬಾಲಿವುಡ್‌ ಗಾಯಕಿ ನೇಹಾ ಕಕ್ಕರ್‌ ಹೇಳಿದರು.

Advertisement

ನೆಹರೂ ಮೈದಾನದಲ್ಲಿ ಇಂಪಿರಿಯಲ್‌ ಬ್ಲೂ ಸೂಪರ್‌ ಹಿಟ್ ನೈಟ್ಸ್‌ ಸಂಗೀತ ಸಂಜೆಯ ಕಾರ್ಯಕ್ರಮ ಅಂಗವಾಗಿ ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಮದ್ಯಪಾನ ಮಾಡುವುದು ತಪ್ಪಲ್ಲ. ಆದರೆ ಮದ್ಯಪಾನ ಮಾಡಿ ತಪ್ಪು ಕೆಲಸಗಳನ್ನು ಮಾಡುವುದು ಸರಿಯಲ್ಲ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ನಾನು ಖನ್ನತೆಗೆ ಒಳಗಾಗಿದ್ದೇನೆ ಎಂಬುದಾಗಿ ಬರೆದುಕೊಂಡಿರುವ ಬಗ್ಗೆ ಮಾತನಾಡಿದ ಅವರು, ನಾನು ಯಾರಿಗೂ ನೋವಾಗುವ ರೀತಿ ನಡೆದುಕೊಂಡಿಲ್ಲ. ನನ್ನ ಬಗ್ಗೆ ಯಾವುದೇ ಅಪಪ್ರಚಾರ ಮಾಡಬೇಡಿ. ನನ್ನ ಹಾಡುಗಳನ್ನು ಕೇಳಿ ಆನಂದಿಸಿ, ಆದರೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಬೇಡಿ ಎಂದರು.

ನಾನೂ ಎಲ್ಲರಂತೆ ಮನುಷ್ಯಳೇ. ನನಗೂ ವೈಯಕ್ತಿಕ ಬದುಕು ಇದೆ. ಜನಸಾಮಾನ್ಯರು ಒತ್ತಡದಲ್ಲಿದ್ದರೆ ಯಾರಿಗೂ ತಿಳಿಯುವುದಿಲ್ಲ. ಆದರೆ ಸೆಲೆಬ್ರೆಟಿಗಳು ಮಾನಸಿಕವಾಗಿ ಒತ್ತಡದಲ್ಲಿ ಏನಾದರೂ ಬರೆದರೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವುಗಳನ್ನು ಬರೆದಾಗ ಮಾತ್ರ ಅದು ದೊಡ್ಡ ಮಟ್ಟದ ಸುದ್ದಿಯಾಗುತ್ತದೆ. ನಾನು ಜನರಿಗೆ ಸೂಪರ್‌ ಹಿಟ್ ಹಾಡುಗಳ ಮೂಲಕ ಸಂತೋಷ ನೀಡುತ್ತೇನೆ. ಅದಕ್ಕೆ ಬದಲಾಗಿ ನೀವೂ ಕೂಡ ನನಗೆ ಸಂತೋಷ ನೀಡಿ ಎಂದರು. ಬಳಿಕ ಮಂಗಳೂರಿನ ನೆಹರೂ ಮೈದಾನದಲ್ಲಿ ನೇಹಾ ಕಕ್ಕರ್‌ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next