ಅವನು ಉತ್ತರ, ಇವಳು ದಕ್ಷಿಣ. ಅವನು ಹುಬ್ಬಳ್ಳಿ ಹೈದ, ಇವಳು ಕರಾವಳಿ ಮೀನು. ಇಬ್ಬರ ಭಾಷೆ, ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳೇ ಬೇರೆ ಬೇರೆ. ಆದರೆ ದೇವರು ಬರೆದ ಕಥೆಯಲ್ಲಿ ಒಂದಾಗಿದೆ ಇವರಿಬ್ಬರ ಅನುಬಂಧ.
ಉತ್ತರ ದಕ್ಷಿಣದ ವ್ಯತ್ಯಾಸವಿದ್ದರೂ ಇವರಿಬ್ಬರ ನಡುವಿನ ಪ್ರೀತಿ, ಸ್ನೇಹಕ್ಕೆ ಅದಾವುದರ ಹಂಗಿಲ್ಲ. ಪ್ರಾದೇಶಿಕ ವ್ಯತ್ಯಾಸವಿದ್ದಾಗ ಮೊದಲು ಎದುರಾಗುವುದೇ ಭಾಷೆ. ಅವನ ಭಾಷಾ ಶೈಲಿ ಇವಳಿಗೆ ಅರ್ಥವಾಗುವುದಿಲ್ಲ, ಇವಳ ತುಳುನಾಡ ಭಾಷಾಲಹರಿ ಅವನಿಗೆ ಅರ್ಥವಾಗುವುದಿಲ್ಲ. ಮೊದಲೇ ಮಾತಿನ ಮಲ್ಲಿ ಆಕೆ. ಬಾಯಿ ತೆರೆದರೆ ಸಾಕು ಹರಳು ಹುರಿದಂತೆ ಪಟಪಟ ಮಾತನಾಡಬಲ್ಲ ವೈಲೆಂಟ್ ಹುಡುಗಿ. ಅವಳಿಗೆ ತದ್ವಿರುದ್ಧ ಎನ್ನುವಂತೆ ಅವನು ಮೌನಾಮೂರ್ತಿ, ಸದ್ದಿಲ್ಲದೆ ಎಲ್ಲವನ್ನು ನಿಮಯ ಮಾಡಬಲ್ಲ ಸೈಲೆಂಟ್ ಹುಡುಗ.
ಅದೆಷ್ಟೋ ಬಾರಿ ಇವರಿಬ್ಬರು ತಮ್ಮತಮ್ಮ ಭಾಷಾ ಪ್ರೀತಿಗೆ, ಪ್ರಾದೇಶಿಕ ಒಲವಿಗೆ ಹಾವು-ಮುಂಗುಸಿಯಂತೆ ದಿನವಿಡೀ ಕಚ್ಚಾಡಿದ್ದು ಇದೆ. ನೀನು ಘಟ್ಟದವ, ನೀನು ಘಟ್ಟದ ಕೆಳಗಿನ ಗುಂಡಿಯವಳು ಎಂದೇ ರೇಗಿಸುತ್ತಾನೂ ಇರುತ್ತಾರೆ. ಅವನ ಭಾಷಾ ಲಹರಿ ಅರ್ಥವಾಗದೇ ಇಂಗ್ಲಿಷ್‌ನಲ್ಲಿ ಹೋಳ್ಳೋ ಮಾರಾಯಅಂತ ಇವಳಂದ್ರೆ, ಇವಳ ಕರಾವಳಿ ಭಾಷೆಗೆ ಅವನು ಸುಸ್ತಾಗಿ ಬಿಡುತ್ತಿದ್ದ. ಇಂತಹ ಅದೆಷ್ಟೋ ಕಪಿಚೇಷ್ಟೆಗಳು ಇವರ ನಡುವೆ ನಡೆಯುತ್ತಲೇಇರುತ್ತದೆ. ಅವನು ಇವಳ ಭಾಷೆಯಲಿ, ಇವಳು ಅವನ ಭಾಷೆಯಲಿ ಉಲ್ಟಾ ಮಾತನಾಡುತ್ತಾತಮಾಷೆ ಮಾಡುವುದುಇದೆ. ಪರೀತವಾದ ಕೋಪ ಬಂದರಂತೂ ಮುಗೀತು, ಇಬ್ಬರು ಅವರವರ ಭಾಷೆಯಲ್ಲಿಅರ್ಥವಾಗದಂತೆ ಬೈದುಕೊಳ್ಳುವುದನ್ನು ಕಂಡರೆ ಅದಾರಿಗಾದರೂ ನಗುಬಾರದೆ ಇರದು. ಇವರಿಬ್ಬರ ಗುದ್ದಾಟವನ್ನು ಕಂಡ ನಾವು ಅದೆಷ್ಟೋ ಮಂದಿ ಹೊಟ್ಟೆ ಬಿರಿಯುವಂತೆ ನಕ್ಕಿದ್ದೂ ಇದೆ.
ನಾ ಉತ್ತರ ನೀ ದಕ್ಷಿಣ ಎಂಬ ಭಾಗಗಳ ವ್ಯತ್ಯಾಸ ಮಾತ್ರವಲ್ಲದೇಆಹಾರ ಪದ್ಧತಿಯಲ್ಲೂ ಇವರಿಬ್ಬರು ತದ್ವಿರುದ್ಧ. ದಕ್ಷಿಣ ಕರ್ನಾಟಕಕ್ಕೆ ಹೋಲಿಕೆ ಮಾಡಿದರೆ, ಉತ್ತರ ಕರ್ನಾಟಕದ ಜನ ಖಾರ ಪದಾರ್ಥಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ. ಆದರೆ, ಇವರಿಬ್ಬರ ಸ್ವಭಾವದಲ್ಲಿ ದಕ್ಷಿಣವೇ ಸ್ವಲ್ಪ ಖಾರ ಜಾಸ್ತಿ. ಅವಳೆಷ್ಟೆ ರೇಗಿದರೂ ಅವನು ಅವಳ ಮಾತಿಗೆ ಧನಿಯಾಗುತ್ತಾನೆ. ಕೋಪ ಪ್ರತಾಪದಲ್ಲೇ ಪ್ರೀತಿ ಜಾಸ್ತಿ ಎಂಬ ಮಾತು ಇವರಿಬ್ಬರನ್ನು ನೋಡಿಯೇ ಹೇಳಿರಬೇಕು. ಅದೇಗಪ್ಪಾ ಇವರಿಬ್ಬರ ನಡುವೆ ಸ್ನೇಹಚಿ ಗುರೊಡೆಯಿತು ಅಂದುಕೊಂಡರೆ ಅದು ಆ ಬ್ರಹ್ಮನ ವಿಧಿಲಿಖೀತ. ಇವರಿಬ್ಬರ ನಡುವೆಅದೆಷ್ಟೇ ಮುಂಗೋಪಗಳಿದ್ದರೂ ಅವೆಲ್ಲಾ ಕೇವಲ ಕ್ಷಣಿಕವಷ್ಟೆ. ಒಂದು ಘಳಿಗೆಯ ಕೋಪ ಮತ್ತೂಂದು ಘಳಿಗೆಯಲ್ಲಿ ಮಂಗಮಾಯ.ಅದೇನೇಯಾದರುಇವರ ನಡುವಿನ ಅನ್ಯೋನ್ಯತೆಯನ್ನು ಮೆಚ್ಚಲೇ ಬೇಕು. ನಾ ಬಿಡೆ ನೀ ಕೊಡೆ ಅಂತಿದ್ದರು. ಕೊನೆಯಲ್ಲಿ ಇವರಿಬ್ಬರೂ ಒಂದೇ ಗಾಣದ ಜೋಡೆತ್ತುಗಳು.
ಸುಷ್ಮಾ ಸದಾಶಿವ್