Advertisement

ಮಂಗಳೂರು:ರೋಗ ಹರಡುವ ಭೀತಿ – ಸೀಯಾಳ ಸಿಪ್ಪೆಯ ತ್ಯಾಜ್ಯ ತೆರವಾಗದಿದ್ದರೆ ಅಪಾಯ!

12:28 PM May 03, 2023 | |

ಮಹಾನಗರ: ಈಗ ಬೇಸಗೆ ಕಾಲವಾಗಿರುವುದರಿಂದ ನಗರದ ನೂರಾರು ಕಡೆಗಳಲ್ಲಿ ಸೀಯಾಳ ಮಾರಾಟ ನಡೆಯುತ್ತಿದೆ. ಪರಿಣಾಮ ಪ್ರತಿದಿನ ಟನ್‌ ಗಟ್ಟಲೆ ಸೀಯಾಳ ಸಿಪ್ಪೆಯ ತ್ಯಾಜ್ಯ ನಗರದಲ್ಲಿ ಉತ್ಪತ್ತಿಯಾಗುತ್ತಿದೆ. ಆದರೆ ಅದರ ವಿಲೇವಾರಿ ಮಾತ್ರ ನಿಯಮಿತವಾಗಿ ನಡೆಯುತ್ತಿಲ್ಲ.

Advertisement

ಪ್ರತಿ ವ್ಯಾಪಾರಿಯ ಬಳಿಯಲ್ಲೂ ಕನಿಷ್ಠ ಮೂರರಿಂದ ನಾಲ್ಕು ಗೋಣಿ ಚೀಲದಷ್ಟು ಸೀಯಾಳ ಸಿಪ್ಪೆ ಕಂಡುಬರುತ್ತಿದೆ. ಸದ್ಯ ಬಿಸಿಲು ಇರುವುದರಿಂದ ಸಮಸ್ಯೆ ಇಲ್ಲ. ಬೇಸಗೆ ಮಳೆ ಸುರಿಯಲು ಆರಂಭಿಸಿದರೆ ಮಾತ್ರ ಇದರಿಂದ ಅಪಾಯ ಖಚಿತ. ಸೀಯಾಳದ ಸಿಪ್ಪೆಗಳಲ್ಲಿ ನೀರು ನಿಂತು ಸೊಳ್ಳೆಗಳು ಮೊಟ್ಟೆ ಇಟ್ಟು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ನಗರದಲ್ಲಿ ಈ ಹಿಂದೆ ಹಲವು ಬಾರಿ ಮಲೇರಿಯಾ, ಡೆಂಗ್ಯೂ, ಚಿಕುನ್‌ ಗೂನ್ಯದಂತಹ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡು ಸಮಸ್ಯೆಯಾಗಿತ್ತು. ಆಗ ವೇಳೆ ಪಾಲಿಕೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ನೀರು ನಿಲ್ಲುವ, ನೀರು ನಿಂತಿರುವ ಸ್ಥಳಗಳನ್ನು ಪತ್ತೆ ಮಾಡಿ, ತೆರವು ಮಾಡುವುದು, ಲಾರ್ವಾ ನಾಶ ಕಾರ್ಯಾಚರಣೆ ನಡೆಸಿದ್ದರು. ಮಳೆ ಬಂದರೆ
ಸೀಯಾಳ ಸಿಪ್ಪೆಯಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ.

ಬೇಸಗೆ ಮಳೆ ನಿರಂತರವಾಗಿ ಸುರಿಯುವುದಿಲ್ಲ. ಬದಲಾಗಿ ಬಿಟ್ಟು ಬಿಟ್ಟು ಸಂಜೆ ಹೊತ್ತಲ್ಲಿ ಸಾಮಾನ್ಯವಾಗಿ ಸುರಿಯುತ್ತದೆ. ಇದೇ ಅಪಾಯಕಾರಿಯಾಗಿದ್ದು, ಇದರಿಂದ ಸೀಯಾಳದ ಸಿಪ್ಪೆಯಲ್ಲಿ ಸಂಗ್ರಹವಾಗುವ ಈ ಸಿಹಿ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಇಟ್ಟು
ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದು. ಸ್ವಲ್ಪ ನೀರು ನಿಂತರೂ ಅದರಲ್ಲಿ ಸೊಳ್ಳೆಗಳು ಸಾವಿರಾರು ಮೊಟ್ಟೆಗಳನ್ನು ಇಡುತ್ತವೆ. ಸೀಯಾಳ ಸಿಪ್ಪೆಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತ್ಯಾಜ್ಯ ಪ್ರಮಾಣ ದ್ವಿಗುಣ
ಸದ್ಯ ಸೀಯಾಳ ವ್ಯಾಪಾರ ಹೆಚ್ಚಾಗಿರುವುದು ಮತ್ತು ಅದರಿಂದ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ಪ್ರಮಾಣವೂ ದ್ವಿಗುಣಗೊಂಡಿರುವುದರಿಂದ ವಿಲೇವಾರಿಯೂ ಕನಿಷ್ಠ ಎರಡು ದಿನಕ್ಕೊಮ್ಮೆ ನಡೆಯಬೇಕಿದೆ. ಈ ಬಗ್ಗೆ ಸೀಯಾಳ ವ್ಯಾಪಾರಿಗಳಲ್ಲಿ ಪ್ರಶ್ನಿಸಿದಾಗ, ತ್ಯಾಜ್ಯ ಸಂಗ್ರಾಹಕರು ಬರುತ್ತೇವೆ ಎಂದು ಹೇಳುತ್ತಾರೆ ಆದರೆ ಬರುವುದಿಲ್ಲ. ಪಾಲಿಕೆ ಅಧಿಕಾರಿಗಳು ನೋಡಿದರೆ ದಂಡ ಹಾಕುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ.

Advertisement

ಗ್ರಾಮೀಣ ಭಾಗದಲ್ಲಾದರೆ ಇದನ್ನು ಉರುವಲಾಗಿ ಬಳಸುವುದರಿಂದ ವಿಲೇವಾರಿ ಸುಲಭ. ಆದರೆ ನಗರದಲ್ಲಿ ತ್ಯಾಜ್ಯ
ಸಂಸ್ಕರಣಾ ಕೇಂದ್ರಗಳಲ್ಲೇ ಗೊಬ್ಬರವಾಗಿ ಪರಿವರ್ತನೆಯಾಗಬೇಕಿದೆ.

ವಿಲೇವಾರಿಗೆ ಕ್ರಮ
ಸೀಯಾಳ ಸಿಪ್ಪೆ ತ್ಯಾಜ್ಯವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ತತ್‌ಕ್ಷಣದಿಂದಲೇ ಕಾರ್ಯಪ್ರವೃತ್ತರಾಗುವಂತೆ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಗೆ ಸೂಚಿಸುವಂತೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.
– ಚನ್ನಬಸಪ್ಪ ಕೆ. ಮನಪಾ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next