Advertisement

ಮೆರವಣಿಗೆ, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ 

12:21 PM Nov 21, 2018 | |

ಮಹಾನಗರ: ಈದ್‌ ಮಿಲಾದ್‌ ಆಚರಣೆ ಅಂಗವಾಗಿ ಮುಸ್ಲಿಮರು ಮಂಗಳವಾರ ಮಸೀದಿ ಮತ್ತು ದರ್ಗಾಗಳಲ್ಲಿ ಹಾಗೂ ಈದ್ಗಾ ಪ್ರಾರ್ಥನಾ ಮಂದಿರಗಳಲ್ಲಿ ವಿಶೇಷ ಪ್ರಾರ್ಥನೆ, ಸಾರ್ವಜನಿಕ ರಸ್ತೆಗಳಲ್ಲಿ ಮೆರವಣಿಗೆ, ಬೈಕ್‌ ರ್ಯಾಲಿಗಳನ್ನು ನಡೆಸಿದರು.

Advertisement

ಇದೇ ವೇಳೆ ಮುಸ್ಲಿಂ ಮಕ್ಕಳಿಗಾಗಿ ಪ್ರವಾದಿ ಮಹಮದ್‌ ಅವರ ಜೀವನದ ಕುರಿತಂತೆ ಭಾಷಣ, ಹಾಡು ಮತ್ತಿತರ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಸಿಹಿ ತಿಂಡಿ, ಪಾನೀಯಗಳನ್ನು ಹಾಗೂ ಇತರ ತಿನಸುಗಳನ್ನು ನೀಡಲಾಯಿತು. ನಗರದ ಬಂದರ್‌ನ ಕೇಂದ್ರ ಜುಮಾ ಮಸೀದಿಯಲ್ಲಿ ಮತ್ತು ಬಾವುಟಗುಡ್ಡೆಯ ಈದ್ಗಾ ಪ್ರಾರ್ಥನಾ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಇದೇ ವೇಳೆ ಕೇಂದ್ರ ಜುಮಾ ಮಸೀದಿಯಿಂದ ಬಾವುಟಗುಡ್ಡೆ ತನಕ ಮಿಲಾದ್‌ ಮೆರವಣಿಗೆ ನಡೆದಿದ್ದು, ನೂರಾರು ಮಂದಿ ಮುಸ್ಲಿಮರು ಭಾಗವಹಿಸಿದ್ದರು. ದಫ್‌ ಕಾರ್ಯಕ್ರಮ ಆಕರ್ಷಣೆಯಾಗಿತ್ತು. ಮೆರವಣಿಗೆಯಲ್ಲಿ ಪ್ರವಾದಿ ಮಹಮದ್‌ ಅವರ ಗುಣಗಾನ ಮಾಡಿ ಘೋಷಣೆ ಕೂಗಿದರು.

ಸಿಹಿ ತಿಂಡಿ, ಪಾನೀಯ ವಿತರಣೆ
ಬೆಳಗ್ಗೆ ಬಂದರು ಪ್ರದೇಶದಲ್ಲಿ ಮಿಲಾದ್‌ ಮೆರವಣಿಗೆ ಜರಗಿತು. ಈ  ಸಂದರ್ಭ ಗೂಡ್ಸ್‌ ಶೆಡ್‌ನ‌ ನಿರೇಶ್ವಾಲ್ಯದಲ್ಲಿ ಸ್ಥಳೀಯ ನಿತ್ಯಾನಂದ ಆಶ್ರಮ, ಯುವ ಶಕ್ತಿ ಫ್ರೆಂಡ್ಸ್‌ ಮತ್ತು ತುಳುನಾಡ ಸಂಜೀವಿನಿ ಸಂಘಟನೆಗಳ ಕಾರ್ಯಕರ್ತರು ಮುಸ್ಲಿ ಮರಿಗೆ ಸಿಹಿ ತಿಂಡಿ ಮತ್ತು ತಂಪು ಪಾನೀಯ ವಿತರಿಸಿ ಸೌಹಾರ್ದ ಮೆರೆದರು.

ಸಾಮರಸ್ಯದ ಸಂಕೇತ
ತುಳುನಾಡ ಸಂಜೀವಿನಿಯ ಸ್ಥಾಪಕಾಧ್ಯಕ್ಷ ಮಹೇಂದ್ರ ಕಾಶಿ ಮಾತನಾಡಿ, ಹೊರ ನಾಡಿನಲ್ಲಿ ಮಂಗಳೂರು ಸದಾ ಕೋಮು ಸಂಘರ್ಷ ನಡೆಯುವ ಪ್ರದೇಶ ಎಂಬ ಭಾವನೆ ಇದೆ. ಆದರೆ ಇಲ್ಲಿ ನಾವೆಲ್ಲ ಸಹೋದರತೆಯಿಂದ, ಸಾಮರಸ್ಯದಿಂದ ಬಾಳುತ್ತಿದ್ದೇವೆ ಎನ್ನುವುದರ ಸಂಕೇತವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಎಲ್ಲ ಧರ್ಮದವರು ಸಾಮರಸ್ಯದಿಂದ ಬಾಳುವಂತಾಗಬೇಕು. ಪರಸ್ಪರ ಸೌಹಾರ್ದ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾದೆ ಎಂದು ನಿತ್ಯಾನಂದ ಆಶ್ರಮದ ಟ್ರಸ್ಟಿ ರೋಹಿತ್‌ ನುಡಿದರು. ಸ್ಥಳೀಯ ಕಾರ್ಪೊರೇಟರ್‌ ಅಬ್ದುಲ್‌ ಲತೀಫ್‌ ಅವರು ಮೂರೂ ಸಂಘಟನೆಗಳ ಕಾರ್ಯಕ್ರಮಕೆಕ ಮೆಚ್ಚುಗೆ ವ್ಯಕ್ತ ಪಡಿಸಿ ಸೌಹಾರ್ದದ ವಾತಾವರಣಕ್ಕೆ ಇದು ಪೂರಕ ಎಂದರು.

Advertisement

ನಿತ್ಯಾನಂದ ಆಶ್ರಮದ ಸದಸ್ಯ ಸದಾಶಿವ ಶೆಟ್ಟಿ , ಬಿಜೆಪಿ ಪೋರ್ಟ್‌ ವಾರ್ಡ್‌ ಅಧ್ಯಕ್ಷ ಯೋಗೀಶ್‌, ತುಳುನಾಡ ಸಂಜೀವಿನಿಯ ಸ್ಥಾಪಕ ರಾಹುಲ್‌, ದೇವಿ ಪ್ರಸಾದ್‌, ಯುವಶಕ್ತಿ ಫ್ರೆಂಡ್ಸ್‌ ಅಧ್ಯಕ್ಷ ದೀಪಕ್‌ ಶೆಟ್ಟಿ, ವಿಕಾಸ್‌, ಯತೀಶ್‌ ಮೊದಲಾದವರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next