ಮಂಗಳೂರು: ದುಬಾೖಗೆ ತೆರಳುವ ವಿಮಾನವೊಂದು ಬರೋಬ್ಬರಿ 12 ಗಂಟೆ ತಡವಾದ ಪರಿಣಾಮ ಪ್ರಯಾಣಿಕರು ಕಿರಿಕಿರಿ ಅನುಭವಿಸಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.
ಸೋಮವಾರ ರಾತ್ರಿ 11.05ಕ್ಕೆ ದುಬಾೖಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಾಂತ್ರಿಕ ದೋಷದ ಕಾರಣ ಮಂಗಳವಾರ ಮಧ್ಯಾಹ್ನ 12.10ಕ್ಕೆ ತೆರಳಿತು. ರಾತ್ರಿ ಯಿಡೀ ನಿಲ್ದಾಣದಲ್ಲಿ ಕಾಲ ಕಳೆಯ ಬೇಕಾಯಿತು.
ಐಎಕ್ಸ್ 813 ವಿಮಾನ ತಾಂತ್ರಿಕ ದೋಷದ ಎದುರಿಸಿತ್ತು. ಮೊದಲಿಗೆ ತಿರುವನಂತಪುರಕ್ಕೆ ತೆರಳಿ ಅಲ್ಲಿ ಪ್ರಯಾಣಿಕರಿಗೆ ತಂಗಲು ವ್ಯವಸ್ಥೆ ಮಾಡಿ ಅನಂತರ ದುಬಾೖಗೆ ತೆರಳುವುದಾಗಿ ಮಾಹಿತಿ ನೀಡಲಾಗಿತ್ತು. ಆದರೆ ತಿರುವನಂತಪುರದಿಂದ ಖಾಲಿ ವಿಮಾನ ಬಂದು ಇಲ್ಲಿಂದ ನೇರವಾಗಿ ಹೋಗಬೇಕು’ ಎಂದು ಪ್ರಯಾಣಿಕರುಆಗ್ರಹಿಸಿದರು. ಅದರಂತೆ ಬದಲಿ ವಿಮಾನ ಬರುವಾಗ ತಡವಾಯಿತು.
ಬೆಳಗ್ಗಿನ ವಿಮಾನ ಸಂಜೆ!
ಈ ಮಧ್ಯೆ ಮಂಗಳವಾರ ಬೆಳಗ್ಗೆ 9.15ಕ್ಕೆ ದುಬಾೖಗೆ ಹೊರಡ ಬೇಕಿದ್ದ ಐಎಕ್ಸ್ 383 ವಿಮಾನವನ್ನು ದಿಢೀರ್ ಆಗಿ ಸಂಜೆಗೆ ಮುಂದೂಡಲಾಯಿತು. ಸಂಜೆ 6.45ಕ್ಕೆ ವಿಮಾನ ತೆರಳಿದೆ.