ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 173 ಮಂದಿ ಪ್ರಯಾಣಿಕರನ್ನು ಹೊತ್ತು ದೋಹಾಕ್ಕೆ ಗುರುವಾರ ಸಂಜೆ ಹೊರಟಿದ್ದ ಏರ್ ಇಂಡಿಯಾದ ವಿಮಾನವು ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ ಅರ್ಧತಾಸಿನಲ್ಲಿಯೇ ತುರ್ತು ಭೂಸ್ಪರ್ಶವಾದ ಘಟನೆ ಸಂಭವಿಸಿದೆ. ಆ ಮೂಲಕ, ಸಂಭವಿಸಬಹುದಾದ ದೊಡ್ಡ ಮಟ್ಟದ ಅನಾಹುತವನ್ನು ತಪ್ಪಿಸುವಲ್ಲಿ ಪೈಲಟ್ ಯಶಸ್ವಿಯಾಗಿದ್ದು, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಏರ್ ಇಂಡಿಯಾ “ಎಕ್ಸ್‌ಪ್ರೆಸ್ ಐಎಕ್ಸ್ 821′ ಎಂಬ ವಿಮಾನವು ಗುರುವಾರ ಸಂಜೆ 5.30ಕ್ಕೆ ದೋಹಾ ಕಡೆಗೆ ಹೊರಟಿತ್ತು. ಆದರೆ, ವಿಮಾನ ಹಾರಾಟ ಪ್ರಾರಂಭಿಸಿದ ಸುಮಾರು ಅರ್ಧ ತಾಸಿನಲ್ಲಿಯೇ ಒಂದು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಪೈಲಟ್ ವಿಮಾನವನ್ನು ಮತ್ತೆ ಮಂಗಳೂರು ವಿಮಾನ ನಿಲ್ದಾಣದತ್ತ ಹಿಂತಿರುಗಿಸಿದ್ದಾರೆ. ಹೀಗಾಗಿ, ಈ ವಿಮಾನವನ್ನು ಸಂಜೆ
ಸುಮಾರು 6.30ಕ್ಕೆ ಮಂಗಳೂರು ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸುವಲ್ಲಿ ಪೈಲಟ್ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ. ರಾವ್, “ವಿಮಾನವು ನಿಲ್ದಾಣದಿಂದ ಹೊರಟ ಅರ್ಧ ಗಂಟೆಯಲ್ಲಿ ಒಂದು ಎಂಜಿನ್ ಕೆಟ್ಟು ಹೋದ ಕಾರಣ, ತುರ್ತು ಭೂಸ್ಪರ್ಶ ಮಾಡಬೇಕಾಗಿ ಬಂತು. ವಿಮಾನವು ಯಶಸ್ವಿಯಾಗಿ
ಲ್ಯಾಂಡಿಂಗ್ ಆಗಿದ್ದು, ಪ್ರಯಾಣಿಕರೆಲ್ಲ ಸುರಕ್ಷಿತರಾಗಿದ್ದಾರೆ.
ಪ್ರಯಾಣ ಸಾಧ್ಯವಾಗದ ಹಿನ್ನೆಲೆಯಲ್ಲಿ ದೋಹಾಕ್ಕೆ ತೆರಳುವುದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ. ತುರ್ತು ಭೂಸ್ಪರ್ಶ ಮಾಡಿದ ಹಿನ್ನಲೆಯಲ್ಲಿ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರಿಗೆ ಮಂಗಳೂರು ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಉಳಿದುಕೊಳ್ಳುವುದಕ್ಕೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಸೆಲ್ಫಿ ತೆಗೆದುಕೊಂಡ ಪ್ರಯಾಣಿಕರು: ವಿಮಾನವು ಹಾರಾಟ ನಡೆಸುತ್ತಿರಬೇಕಾದರೆ, ಎಂಜಿನ್ ಕೆಟ್ಟು ಹೋಗಿ ಶಬ್ದ ಕೇಳಿಸುತ್ತಿದ್ದರೂ ಆ ಸಂದರ್ಭದ ಅಪಾಯದ ಪರಿಸ್ಥಿತಿಯನ್ನು ಪೈಲಟ್ ಹಾಗೂ ವಿಮಾನದಲ್ಲಿದ್ದ ಏರ್ ಇಂಡಿಯಾ ಸಿಬ್ಬಂದಿ ಬಹಳ ಪ್ರಶಂಸಾರ್ಹ ರೀತಿ ನಿಭಾಯಿಸಿದ್ದಾರೆ. ಪ್ರಯಾಣಿಕರೆಲ್ಲರೂ, ಪೈಲಟ್‌ನ ಧೈರ್ಯ ಹಾಗೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಿರುವುದಕ್ಕೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇಅಲ್ಲ, ತಮ್ಮ ಪ್ರಾಣ ಉಳಿಸಿದ ಖುಷಿಗೆ ಪೈಲಟ್ ಜತೆಗೆ ಸೆಲ್ಫಿ ಕೂಡ ತೆಗೆದುಕೊಂಡು ಸಂಭ್ರಮಪಟ್ಟಿದ್ದಾರೆ.