ಮಂಗಳೂರು: ಪ್ರತಿಷ್ಠಿತ ವೈದ್ಯರ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಸೇರಿದಂತೆ ನಿಷೇಧಿತ ಮಾದಕ ವಸ್ತು ಸೇವನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರನ್ನು ಬಂಧಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬುಧವಾರ 10 ಮಂದಿಯನ್ನು ಬಂಧಿಸಲಾಗಿತ್ತು, ಇದೀಗ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 13ಕ್ಕೇರಿದೆ.
ಹಣ್ಣಿನಂಗಡಿಯಲ್ಲಿ ಕೆಲಸ ಮಾಡುವ 23 ವರ್ಷದ ಮೊಹಮ್ಮದ್ ಅಫ್ರಾರ್, ಖಾಸಗಿ ಕಾಲೇಜಿನ ಅಂತಿಮ ವರ್ಷದ ಫಾರ್ಮಾ ಡಿ ವಿದ್ಯಾರ್ಥಿ ಕೊಚ್ಚಿನ್ ಮೂಲದ ಅಡಾನ್ ದೇವ್ ಮತ್ತು ಅಂತಿಮ ವರ್ಷದ ಪತಾಲಜಿ ಎಂಡಿ ವಿದ್ಯಾರ್ಥಿ ತುಮಕೂರು ಮೂಲದ ಹರ್ಷ ಕುಮಾರ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಕಾರಿನಲ್ಲಿ ಪೆಪ್ಪರ್ ಸ್ಪ್ರೆ ಇಟ್ಟುಕೊಳ್ಳುವುದು ತಪ್ಪಾ?: ಏನಿದು ಬೆಂಗಳೂರು ಘಟನೆ?
ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಪೊಲೀಸ್ ಆಯುಕ್ತ ಶಶಿ ಕುಮಾರ್ ಡ್ರಗ್ ದಂಧೆಯ ಮಾಹಿತಿ ನೀಡಿದ್ದರು. ವೈದ್ಯಕೀಯ (ಬಿಡಿಎಸ್) ವಿದ್ಯಾರ್ಥಿ ಸಾಗರೋತ್ತರ ಭಾರತೀಯ ಪ್ರಜೆ ನೀಲ್ ಕಿಶೋರಿಲಾಲ್ ರಾಮ್‌ಜಿ ಶಾ (38), ಮೆಡಿಕಲ್ ಆಫೀಸರ್ ಕೇರಳದ ಡಾ| ಸಮೀರ್ (32), ಎಂಬಿಬಿಎಸ್ ಇಂಟರ್ನ್ ಶಿಪ್ ಮಾಡುತ್ತಿದ್ದ ಡಾ| ನಾದಿಯಾ ಸೀರಜ್ (24), ಆಂಧ್ರಪ್ರದೇಶದ ಡಾ| ವರ್ಷಿಣಿ ಪ್ರತಿ (26), ಮೆಡಿಕಲ್ ಸರ್ಜನ್ ತಮಿಳುನಾಡಿನ ಡಾ| ಮಣಿಮಾರನ್ ಮುತ್ತು (28), ಸೈಕಿಯಾಟ್ರಿ ಎಂಡಿ ತೃತೀಯ ವರ್ಷದ ಚಂಡೀಗಢದ ಡಾ| ಭಾನು ಧನಿಯಾ (27), ಬಿಡಿಎಸ್ ನಾಲ್ಕನೇ ವರ್ಷದ ಚಂಡೀಗಢದ ಡಾ| ರಿಯಾ ಚಡ್ಡಾ (22), ಆರ್ಥೋ ಎಂಎಸ್ ತೃತೀಯ ವರ್ಷದ ಡಾ| ಕ್ಷಿತಿಜ್ ಗುಪ್ತ (25), ಎಂಬಿಬಿಎಸ್ ನಾಲ್ಕನೇ ವರ್ಷದ ಪುಣೆಯ ಡಾ| ಐರಾ ಬಾಸಿನ್ (23) ಮತ್ತು ಖಾಸಗಿ ವೃತ್ತಿ ಮಾಡುತ್ತಿದ್ದ ಬಂಟ್ವಾಳ ಮಾರಿಪಳ್ಳದ ಮೊಹಮ್ಮದ್ ರವೂಫ್ ಆಲಿಯಾಸ್ ಗೌಫ್ (34) ಬಂಧಿತರು.
ಬಾಯಿಬಿಟ್ಟ ಯು.ಕೆ. ಪ್ರಜೆ
ನೀಲ್ ಕಿಶೋರಿಲಾಲ್ ರಾಮ್‌ಜಿ ಶಾ ಯನೈಟೆಡ್ ಕಿಂಗ್‌ಡಮ್ ರಾಷ್ಟ್ರದ ಪ್ರಜೆಯಾಗಿದ್ದು 15 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾನೆ. ಈತ ಡೆಂಟಲ್ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದು ಕೋರ್ಸ್ ಪೂರ್ಣಗೊಳಿಸಿಲ್ಲ. ಈತ ನಗರದ ಫ್ಲ್ಯಾಟ್‌ನಲ್ಲಿ ಗಾಂಜಾ ಹೊಂದಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದರು. ಆತನಿಂದ 2 ಕೆಜಿ ಗಾಂಜಾ ಸ್ವಾಧೀನಪಡಿಸಿಕೊಂಡಿದ್ದರು.
ಆತನನ್ನು ವಿಚಾರಣೆಗೊಳಪಡಿಸಿದಾಗ ಉಳಿದ ಆರೋಪಿಗಳ ಮಾಹಿತಿ ಲಭಿಸಿದೆ. ಉಳಿದ ಆರೋಪಿಗಳನ್ನು ವಿವಿಧ ಹಾಸ್ಟೆಲ್, ಪಿಜಿ ಹಾಗೂ ಖಾಸಗಿ ನಿವಾಸಗಳಿಂದ ವಶಕ್ಕೆ ಪಡೆದು, ಗಾಂಜಾ ಹಾಗೂ 9 ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ನೀಲ್ ಕಿಶೋರಿ ಲಾಲ್‌ನಿಂದ 2 ಕೆಜಿಗೂ ಅಧಿಕ ಗಾಂಜಾ, ಆಟಿಕೆ ಪಿಸ್ತೂಲು, ಒಂದು ಡ್ರ್ಯಾಗನ್, ಮೊಬೈಲ್ ಮತ್ತಿತರ ಕೆಲವು ಪರಿಕರಗಳು ದೊರೆತಿವೆ.