Advertisement
ಹೊಸ ಮೇಯರ್ ಯಾರಾಗಬಹುದು ಎಂಬ ಬಗ್ಗೆ ಬಿಜೆಪಿಯ ಮಹತ್ವದ ಸಭೆ ಮಂಗಳವಾರ ನಗರದಲ್ಲಿ ನಡೆಯುವ ಸಾಧ್ಯತೆಗಳಿವೆ. ಇದರಲ್ಲಿಯೇ ಹೊಸ ಮೇಯರ್ ಆಯ್ಕೆಗೆ ಪ್ರಾರಂಭಿಕ ತೀರ್ಮಾನ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಮೇಯರ್ ಸ್ಥಾನ “ಸಾಮಾನ್ಯ’, ಉಪ ಮೇಯರ್ ಸ್ಥಾನಕ್ಕೆ “ಹಿಂದುಳಿದ ವರ್ಗದ ಮಹಿಳೆ’ ಮೀಸಲಾತಿ ಪ್ರಕಟವಾಗಿದೆ.
Related Articles
Advertisement
ವಿ.ಸಭಾ ಚುನಾವಣೆ ಸವಾಲು
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬಾರಿಯ ಮೇಯರ್ ಹುದ್ದೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಹೀಗಾಗಿ ರಾಜಕೀಯ ಅನುಭವ, ಪಾಲಿಕೆ ಆಡಳಿತದ ಪೂರ್ಣ ಹಿಡಿತ ಗೊತ್ತಿರುವವರಿಗೆ ಮುಂದಿನ ಮೇಯರ್ ಹುದ್ದೆ ಸಿಗುವ ಸಾಧ್ಯತೆಯಿದೆ. ಇದಕ್ಕಾಗಿ ಅನುಭವಿ ಕಾರ್ಪೋರೆಟರ್‌ಗಳ ಹೆಸರು ಮೇಯರ್ ಹುದ್ದೆಗೆ ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಮಾರ್ಚ್ 2ರಂದು ನಿಗದಿಯಾಗಿದ್ದ ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪ ಮೇಯರ್ ಚುನಾವಣೆಯನ್ನು ಕಾನೂನಾತ್ಮಕ ಕಾರಣದಿಂದ ನಡೆದಿರಲಿಲ್ಲ. ಹೀಗಾಗಿ ಒಂದು ವರ್ಷದ ಅವಧಿ (ಮಾ.2ಕ್ಕೆ) ಪೂರ್ಣಗೊಳಿಸಿದ್ದ ಪ್ರೇಮಾನಂದ ಶೆಟ್ಟಿ ಅವರೇ ಮೇಯರ್ ಸ್ಥಾನದಲ್ಲಿ ಹಾಗೂ ಸುಮಂಗಳಾ ರಾವ್ ಉಪಮೇಯರ್ ಸ್ಥಾನದಲ್ಲಿ ಮುಂದುವರಿದಿದ್ದರು. ಈ ಮೂಲಕ 6 ತಿಂಗಳು ಹೆಚ್ಚುವರಿಯಾಗಿ ಅವರು ಅಧಿಕಾರದಲ್ಲಿದ್ದಾರೆ. ಹಾಲಿ ಮೇಯರ್ ಅಧಿಕಾರ ಅವಧಿ ಮೀರಿ ಮುಂದುವರಿದಿರುವ ಕಾರಣ ಹಾಲಿ ಬಿಜೆಪಿ ಆಡಳಿತದ ಕೊನೆಯ ಮೇಯರ್ ಅವರ ಅಧಿಕಾರಾವಧಿ ಅಷ್ಟು ದಿನ (ಉದಾಹರಣೆಗೆ 1 ವರ್ಷ ಅವಧಿಯ ಪೈಕಿ ಇಲ್ಲಿಯವರೆಗೆ 6 ತಿಂಗಳು) ಕಡಿತವಾಗಲಿದೆ.
ಮಂ. ಉತ್ತರಕ್ಕೆ ಮೇಯರ್?
ಬಿಜೆಪಿಯಿಂದ ಎರಡು ಬಾರಿ ಮೇಯರ್ ಸ್ಥಾನ ಮಂಗಳೂರು ದಕ್ಷಿಣಕ್ಕೆ ಲಭಿಸಿರುವ ಕಾರಣ (ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ) ಮಂಗಳೂರು ಉತ್ತರಕ್ಕೆ ಈ ಬಾರಿ ಮೇಯರ್ ಸ್ಥಾನ ದೊರಕಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಹಿರಿತನದ ಕಾರಣದಿಂದ ಶರತ್ ಕುಮಾರ್, ಜಯಾನಂದ್ ಅವರ ಹೆಸರು ಕೇಳಿಬರುತ್ತಿದ್ದರೆ, ಜಾತಿ ಸಮೀಕರಣದ ಮೂಲಕ ಕಿರಣ್ ಕುಮಾರ್, ಜಯಾನಂದ್ ಅವರ ಹೆಸರು ರೇಸ್‌ನಲ್ಲಿದೆ. ಈ ಮಧ್ಯೆ, ಹೊಸದಾಗಿ ಆಯ್ಕೆಯಾದ ಸದಸ್ಯರ ಹೆಸರು ಕೂಡ ಮೇಯರ್ ರೇಸ್‌ನಲ್ಲಿ ಕೇಳಿಬರುತ್ತಿದೆ.
ಒಂದೆರಡು ದಿನದಲ್ಲಿ ತೀರ್ಮಾನ: ಹೊಸ ಮೇಯರ್ ಆಯ್ಕೆ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಒಂದೆರಡು ದಿನದೊಳಗೆ ಪಾಲಿಕೆ ವ್ಯಾಪ್ತಿಯ ಇಬ್ಬರು ಶಾಸಕರು, ಪಕ್ಷದ ಪ್ರಮುಖರು ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಒಮ್ಮತದ ತೀರ್ಮಾನ ನಡೆಯಲಿದೆ. –ಪ್ರೇಮಾನಂದ ಶೆಟ್ಟಿ, ಮೇಯರ್, ಮಂಗಳೂರು ಪಾಲಿಕೆ