ಲಾಲ್‌ಬಾಗ್: ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿರುವ ಕಟ್ಟೆಯು ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ!
ಪಾಲಿಕೆ ಕಟ್ಟಡದ ಮುಂಭಾಗದಲ್ಲಿರುವ ಕಟ್ಟೆಯಲ್ಲಿ ಅನೇಕರು ಪ್ರಯಾಣಿಕರು – ಪಾದಚಾರಿಗಳು ಕೆಲವೊಮ್ಮೆ ಕುಳಿತುಕೊಳ್ಳುತ್ತಾರೆ. ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ಕೆಳಕ್ಕೆ ಬೀಳುವ ಪ್ರಮೇಯವಿದೆ. ಆದರೆ ಕುಳಿತುಕೊಳ್ಳುವ ಸಮಯದಲ್ಲಿ ಕೆಲವರು ಇದನ್ನು ಗಮನಿಸುವುದಿಲ್ಲ. ಹೀಗಾಗಿ ಅಪಾಯ ಎದುರಾಗುವ ಸಾಧ್ಯತೆ ಇದೆ.
ಪಾಲಿಕೆಯ ಮುಂಭಾಗದಲ್ಲಿರುವ ಕಟ್ಟೆಯಲ್ಲಿ ಕುಳಿತ ವ್ಯಕ್ತಿಯೊಬ್ಬರು ಕೆಲವು ತಿಂಗಳ ಹಿಂದೆ ಆಯ ತಪ್ಪಿ ಸುಮಾರು 10-12 ಅಡಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು. ಅವರು ಬಿದ್ದು ಸುಮಾರು 1 ಗಂಟೆ ಕಾಲ ಯಾರಿಗೂ ಗೊತ್ತಾಗಿರಲಿಲ್ಲ. ಬಳಿಕ ಅಲ್ಲಿನ ಸಿಬಂದಿ ಸೇರಿ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದರು.
ಪಾಲಿಕೆ ಮುಂಭಾಗ ರಸ್ತೆಗಿಂತ 10-12 ಅಡಿಯಷ್ಟು ಕೆಳಗಿದೆ. ಇಲ್ಲಿ ರಸ್ತೆಯಿಂದ ನೇರವಾಗಿ ಮೊದಲ ಮಹಡಿಗೆ ಪ್ರವೇಶ ದ್ವಾರವಿದೆ. ಬಲಭಾಗದಲ್ಲಿ ಕೆನರಾ ಬ್ಯಾಂಕ್ ಪಕ್ಕದಲ್ಲಿ ಕೂಡ ಬಂದು ಪಾಲಿಕೆ ಮುಂಭಾಗ ಸೇರಬಹುದು. ತಳ ಅಂತಸ್ತಿನಲ್ಲಿ ಮಂಗಳೂರು ಒನ್, ದಾರಿದೀಪ ಇತ್ಯಾದಿ ವಿಭಾಗಗಳಿವೆ. ಮನಪಾ ಕಟ್ಟಡದ ಮುಂದಿನ ಜಾಗಕ್ಕೆ ತಡೆಗೋಡೆ ಕಟ್ಟಲಾಗಿದ್ದು, ಅದುವೇ ಈ ಕಟ್ಟೆ. ರಸ್ತೆಯ ಪಕ್ಕದಲ್ಲೇ ಫುಟ್ ಪಾತ್, ಅದಕ್ಕೆ ತಾಗಿಕೊಂಡು ಸುಮಾರು 150 ಮೀಟರ್ ಉದ್ದಕ್ಕೆ ಈ ಕಟ್ಟೆ ಇದೆ. ಈ ಕಟ್ಟೆಯೇ ಸದ್ಯ ಅಪಾಯಕಾರಿ.
ಮನಪಾ ಮುಂಭಾಗದಲ್ಲಿ ಅನೇಕ ಮಂದಿ ಬರುವುದು ಸಾಮಾನ್ಯ. ಅದರಲ್ಲೂ ಪ್ರತಿಭಟನೆ, ಸಭೆ ಇತ್ಯಾದಿ ನಡೆಯುತ್ತಿರುತ್ತದೆ. ಅಲ್ಲದೆ ಮುಂಭಾಗ ಮರ ಇರುವ ಕಾರಣ ನೆರಳಿಗೆ ಅನೇಕರು ಕಟ್ಟೆಯಲ್ಲಿ ಕುಳಿತುಕೊಂಡಿರುತ್ತಾರೆ. ರಾತ್ರಿ ವೇಳೆಯೂ ಕೆಲವರು ಇರುತ್ತಾರೆ.
ಬೇಲಿ ಹಾಕುವುದು ಉತ್ತಮ: ಸುದಿನ ಕಾಳಜಿ
ಜನರು ಗೊತ್ತಾಗದೆ ಕುಳಿತು ಇಲ್ಲಿ ಬೀಳುವ ಸಾಧ್ಯತೆ ಇರುವುದರಿಂದ 150 ಮೀಟರ್‌ನಷ್ಟು ಉದ್ದಕ್ಕೆ ಕನಿಷ್ಠ 2-3 ಅಡಿಯಷ್ಟು ಎತ್ತರಕ್ಕೆ ರೈಲಿಂಗ್ ರೀತಿಯಲ್ಲಿ ಬೇಲಿ ಹಾಕುವುದು ಉತ್ತಮ. ನಿತ್ಯ ನೂರಾರು ಮಂದಿ ಇಲ್ಲಿ ಓಡಾಡುವ ಜಾಗವಾದ್ದರಿಂದ ಎಲ್ಲರಿಗೂ ಭದ್ರತೆ-ಎಚ್ಚರಿಕೆ ನೀಡುವುದು ಕಷ್ಟ ಸಾಧ್ಯ. ಹೀಗಾಗಿ ಮುನ್ನೆಚ್ಚರಿಕೆ ಕೈಗೊಳ್ಳುವ ಅನಿವಾರ್ಯ.