Advertisement

ಮಂಗಳೂರು ನಗರ ವ್ಯಾಪ್ತಿಯಲ್ಲಿ ಟಿ.ಡಿ.ಆರ್‌. ವಿಳಂಬ ಸಲ್ಲದು

07:30 PM Aug 08, 2021 | Team Udayavani |

ಮಂಗಳೂರು ನಗರದಲ್ಲಿ ರಸ್ತೆ ವಿಸ್ತರಣೆ  ಹಾಗೂ ಇತರ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಂಡ ಸಂದರ್ಭದಲ್ಲಿ ಭೂ ಮಾಲಕರಿಗೆ ಟಿಡಿಆರ್‌ (ಟ್ರಾನ್ಸ್‌ಫರ್‌ ಆಫ್‌ ಡೆವೆಲಪ್‌ಮೆಂಟ್‌ ರೈಟ್‌-ಅಭಿವೃದ್ಧಿ ಹಕ್ಕುಗಳ ವರ್ಗಾವಣೆ ಪತ್ರ) ವಿಳಂಬ ಮಾಡದೆ ತ್ವರಿತವಾಗಿ ನೀಡುವ ಕ್ರಮಗಳು ಆಗಬೇಕಾಗಿದೆ.

Advertisement

ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಅಥವಾ ಇತರ ಕಾರಣದಿಂದ ಭೂಮಾಲಕರು ಸ್ವ ಇಚ್ಚೆಯಿಂದ ಭೂಮಿ ಬಿಟ್ಟುಕೊಟ್ಟ ಬಳಿಕ ಟಿಡಿಆರ್‌ ಪಡೆಯಬೇಕಾದರೆ ವರ್ಷಗಟ್ಟಲೆ ಅಲೆಯಬೇಕಾಗಿದೆ. ನಗರ ಯೋಜನೆ ವಿಭಾಗದಿಂದ ಆರಂಭವಾಗಿ, ಸಬ್‌ ರಿಜಿಸ್ಟ್ರಾರ್‌ ಕಚೇರಿ, ಮುಡಾ ಸಹಿತ ಹಲವು ಇಲಾಖೆಗಳ ನಡುವೆ ಓಡಾಡುವ ಪರಿಸ್ಥಿತಿ ಇದೆ. ಟಿಡಿಆರ್‌ ವಿಚಾರದಲ್ಲಿ ಮಂಗಳೂರಿನಲ್ಲಿ ನೂರಾರು ಅರ್ಜಿಗಳು ಬಾಕಿ ಇವೆ. ಭೂಮಿ ಪಡೆಯುವ ಸಂದರ್ಭದಲ್ಲಿ ಪಾಲಿಕೆ ತೋರುವ ಉತ್ಸುಕವನ್ನು ಟಿಡಿಆರ್‌ ನೀಡುವಲ್ಲಿಯೂ ತೋರದಿದ್ದರೆ ಇದು ನಗರದ ಅಭಿವೃದ್ಧಿ ಯೋಜನೆಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ.

ಬಿ.ಎಸ್‌. ಯಡಿಯೂರಪ್ಪ ಅವರ ಸರಕಾರ ಕರ್ನಾಟಕ ಟೌನ್‌ ಆ್ಯಂಡ್‌ ಕಂಟ್ರಿ ಪ್ಲಾನ್‌ಗೆ ತಿದ್ದುಪಡಿ ಮಾಡಿ ಟಿಡಿಆರ್‌ ಕೊಡುವಾಗ ಅನುಸರಿಸುವ ನಿಯಮದಲ್ಲಿ ಜನಸ್ನೇಹಿ ಬದಲಾವಣೆ ತಂದು 90 ದಿನಗಳೊಳಗೆ ಟಿಡಿಆರ್‌  ಕೊಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿತ್ತು. ಯಾರು ಯೋಜನೆಗಾಗಿ  ಮೊದಲು ಸರ್ವೇ ಮಾಡಿ ವರದಿ ಕೊಡುತ್ತಾರೋ ಆ ವರದಿಯಲ್ಲಿ  ಉಲ್ಲೇಖೀಸಿದಂತೆಯೇ 90 ದಿನಗಳೊಳಗೆ ಟಿಡಿಆರ್‌ ಕೊಡಬೇಕು. ಎರಡು ಸರ್ವೇ ಇರುವುದಿಲ್ಲ. 90 ದಿನಗಳ ಬಳಿಕ ಡೀಮ್ಡ್ ಎಂದು ಪರಿಗಣಿಸಲಾಗುತ್ತದೆ. ಜನರಿಗೆ ಕಿರಿಕಿರಿ ತಪ್ಪಿಸುವುದು ಇದರ ಮುಖ್ಯ ಉದ್ದೇಶ ಎಂದು ಹೇಳಲಾಗಿದೆ. ಇದು ಶೀಘ್ರ ಜಾರಿಗೊಳಿಸುವುದು ಅಗತ್ಯವಾಗಿದೆ.

ನೋಂದಣಿ ಸಂದರ್ಭದಲ್ಲಿ ಬಿಟ್ಟುಕೊಟ್ಟ ಜಮೀನಿನ ಪ್ರಾಪರ್ಟಿ ಕಾರ್ಡ್‌, ಆರ್‌.ಟಿ.ಸಿ/ಖಾತಾವನ್ನು ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ. ಹಾಗಾಗಿ ಈ ಬಗ್ಗೆ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣ ಗೊಳಿಸುವುದು ಆವಶ್ಯಕವಾಗಿದೆ. ಟಿ.ಡಿ.ಆರ್‌. ನೀಡುವಲ್ಲಿ ವಿಳಂಬ ಕುರಿತು ಮಹಾನಗರ ಪಾಲಿಕೆ ಮೇಯರ್‌ ಅವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಸಭೆ ನಡೆದಿದೆ.

ಪ್ರಕ್ರಿಯೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಒಂದಷ್ಟು ಕ್ರಮಗಳ ಬಗ್ಗೆ ನಿರ್ಧಾ ರಗಳನ್ನು ಕೈಗೊಳ್ಳಲಾಗಿದೆ.  ಟಿ.ಡಿ.ಆರ್‌. ನೀಡಲು ಅಗತ್ಯವಾದ ಸ್ಕೆಚ್‌ನ್ನು ಎಫ್‌.ಎಂ.ಬಿ. ದಾಖಲೆಯಂತೆ ರಚಿಸಲು ಪಾಲಿಕೆಯಲ್ಲಿ ಹೆಚ್ಚುವರಿಯಾಗಿ ಸರ್ವೇಯರ್‌ಗಳ ನೇಮಕ ಮತ್ತು ನೋಂದಣಿ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವುದು,. ಟಿ.ಡಿ.ಆರ್‌ ನೀಡುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸುಧಾರಿತ ಕ್ರಮವಾಗಿ ಮೊಬೈಲ್‌  ಅಪ್ಲಿಕೇಶನ್‌ ಒಂದನ್ನು ಅಭಿವೃದ್ಧಿಗೊಳಿಸುವುದು ಮುಂತಾದವುಗಳು ಇದರಲ್ಲಿ ಸೇರಿವೆ. ಈ ಎಲ್ಲ ಪ್ರಕ್ರಿಯೆಗಳು ವಿಳಂಬವಿಲ್ಲದೆ ಕಾರ್ಯಗತಗೊಳಿಸುವ ಕಾರ್ಯ ನಡೆಯಬೇಕಾಗಿದೆ.

Advertisement

-ಸಂ.

Advertisement

Udayavani is now on Telegram. Click here to join our channel and stay updated with the latest news.

Next